

ಕ್ರಿಕೆಟ್ ಜಗತ್ತಿನ ಮಹಾಸಮರ ಏಕದಿನ ವಿಶ್ವಕಪ್ಗೆ ಗುರುವಾರ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಹಾಲಿ ರನ್ನರ್ಅಪ್ ನ್ಯೂಜಿಲೆಂಡ್ ತಂಡಗಳ ನಡುವೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದೊಂದಿಗೆ 13ನೇ ಆವೃತ್ತಿ ಶುರುವಾಗಲಿದೆ. ದೇಶದ 10 ನಗರಗಳಲ್ಲಿ 46 ದಿನಗಳ ಕಾಲ 48 ಪಂದ್ಯಗಳು ನಡೆಯಲಿವೆ. ಆತಿಥೇಯ ಭಾರತ ತಂಡ ಭಾನುವಾರ ಚೆನ್ನೈನಲ್ಲಿ ಆಸ್ಟ್ರೆಲಿಯಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.
ಅಹಮದಾಬಾದ್: ಭಾರತದಲ್ಲಿ ಈಗ ಹಬ್ಬಗಳ ಪರ್ವಕಾಲ. ಒಂದರ ಹಿಂದೆ ಇನ್ನೊಂದು ಹಬ್ಬ ಬರುವ ಸಮಯವಿದು. ಇದರ ನಡುವೆ ಕ್ರಿಕೆಟ್ ಲೋಕದ ಮಹಾಹಬ್ಬವೂ ಭಾರತದಲ್ಲಿ ಆಯೋಜನೆಗೊಂಡಿದೆ. ನವರಾತ್ರಿಗೆ ಮುನ್ನ ಆರಂಭಗೊಂಡು ದೀಪಾವಳಿಯ ನಂತರ ಮುಕ್ತಾಯಗೊಳ್ಳುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 13ನೇ ಆವೃತ್ತಿಯನ್ನು ಸಂಭ್ರಮಿಸಲು ವೇದಿಕೆ ಸಜ್ಜಾಗಿದೆ. ವಿಕೆಟ್ಗಳ ದಾಂಡಿಯಾ, ಸಿಕ್ಸರ್-ಬೌಂಡರಿಗಳ ಪಟಾಕಿ ಕ್ರಿಕೆಟ್ ಪ್ರೇಮಿಗಳ ಹಬ್ಬದ ಹರ್ಷವನ್ನು ಇನ್ನಷ್ಟು ಹೆಚ್ಚಿಸಲಿದೆ. ಜಾಗತಿಕ ಕ್ರಿಕೆಟ್ನಲ್ಲಿ ಶ್ರೀಮಂತ ದೇಶವಾಗಿ ಬೆಳೆದಿರುವ ಭಾರತ 4ನೇ ಸಲ ಮತ್ತು ಮೊದಲ ಬಾರಿ ಏಕಾಂಗಿಯಾಗಿ ಟೂರ್ನಿಯ ಆತಿಥ್ಯ ವಹಿಸಿಕೊಳ್ಳುವ ಸವಾಲಿಗೆ ಸನ್ನದ್ಧಗೊಂಡಿದೆ.
ಭಾರತೀಯ ಕ್ರಿಕೆಟ್ ಶ್ರೀಮಂತವಾಗಿ ಬೆಳೆಯಲು 1983ರ ವಿಶ್ವಕಪ್ ಗೆಲುವು ಮತ್ತು 1987ರ ವಿಶ್ವಕಪ್ ಆತಿಥ್ಯ ಪ್ರಮುಖ ಕಾರಣ. 2011ರಲ್ಲಿ ಇವೆರಡೂ ಸಾಧನೆ ಭಾರತದಲ್ಲಿ ಏಕಕಾಲದಲ್ಲಿ ದಾಖಲಾಗಿತ್ತು. 12 ವರ್ಷಗಳ ಬಳಿಕ ಅದನ್ನು ಪುನರಾವರ್ತಿಸುವ ಹಂಬಲದೊಂದಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಕಪಿಲ್ ಡೆವಿಲ್ಸ್ ಮತ್ತು ಎಂಎಸ್ ಧೋನಿ ಬಳಗದ ಸಾಧನೆಯ ನಂತರ 1.40 ಕೋಟಿ ಭಾರತೀಯರ ನಿರೀಕ್ಷೆಯ ಭಾರ ಈಗ ರೋಹಿತ್ ಶರ್ಮ ಬಳಗದ ಹೆಗಲೇರಿದೆ. ಇತ್ತೀಚೆಗೆ ಕಂಡ ಏಷ್ಯಾಕಪ್ ಗೆಲುವು, ವಿಶ್ವ ನಂ.1 ಪಟ್ಟ ಮತ್ತು ಪ್ರಮುಖ ಆಟಗಾರರೆಲ್ಲ ಗಾಯದಿಂದ ಚೇತರಿಸಿಕೊಂಡು ಫಿಟ್ ಆಗಿರುವುದರಿಂದ ಆತಿಥೇಯ ಭಾರತ ಹಾಟ್ ಫೇವರಿಟ್ ಪಟ್ಟದೊಂದಿಗೆ ಕಣಕ್ಕಿಳಿಯಲಿದೆ. ಆದರೆ, ಭಾರತದ 3ನೇ ವಿಶ್ವಕಪ್ ಗೆಲುವಿನ ಹಾದಿ ಸುಲಭವಾಗಿಲ್ಲ.
ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವೇ ಈ ಬಾರಿ ಟೂರ್ನಿಗೆ ಅರ್ಹತೆ ಪಡೆದಿಲ್ಲವೆಂದರೆ ಪೈಪೋಟಿ ಎಷ್ಟರ ಮಟ್ಟಿಗೆ ನಿಕಟವಾಗಿರಬಹುದು ಎಂದು ಅಂದಾಜಿಸಬಹುದು. ಹಾಲಿ ಚಾಂಪಿಯನ್ ಇಂಗ್ಲೆಂಡ್ ಪ್ರಶಸ್ತಿ ಉಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದ್ದರೆ, ಆಸ್ಟ್ರೆಲಿಯಾ ಆರನೇ ಬಾರಿ ಪ್ರಶಸ್ತಿ ಗೆದ್ದು ಮತ್ತೆ ವಿಶ್ವ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸುವತ್ತ ದೃಷ್ಟಿನೆಟ್ಟಿದೆ. ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ ವಿಶ್ವಕಪ್ ಕನಸು ನನಸಾಗಿಸುವ ತವಕದಲ್ಲಿದ್ದರೆ, ನ್ಯೂಜಿಲೆಂಡ್ ಸತತ 3ನೇ ಪ್ರಯತ್ನದಲ್ಲಾದರೂ ಟ್ರೋಫಿಗೆ ಮುತ್ತಿಡುವ ಹಂಬಲದಲ್ಲಿದೆ.
ದಕ್ಷಿಣ ಆಫ್ರಿಕಾ ಈ ಸಲವಾದರೂ ವಿಶ್ವಕಪ್ ಒಲಿಸಿಕೊಳ್ಳುವ ಹುರುಪಿನಲ್ಲಿದೆ. ಶ್ರೀಲಂಕಾ ವಿಶ್ವಕಪ್ನಲ್ಲಿ ಮತ್ತೆ ಸದ್ದು ಮಾಡುವ ಜೋಶ್ನಲ್ಲಿದೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೆದರ್ಲೆಂಡ್ ಪ್ರಮುಖ ತಂಡಗಳ ಲೆಕ್ಕಾಚಾರ ತಲೆಕೆಳಗಾಗಿಸಿ ಗಮನಸೆಳೆಯುವ ಯೋಜನೆಯಲ್ಲಿವೆ. ಒಟ್ಟಾರೆ ನವೆಂಬರ್ 19ರ ಫೈನಲ್ ಹಣಾಹಣಿಯವರೆಗೆ ರೋಚಕ ಕಾದಾಟವನ್ನು ಕ್ರಿಕೆಟ್ ಪ್ರೇಮಿಗಳ ಸವಿಯುವುದು ನಿಶ್ಚಿತ.
ಒಟ್ಟು ಬಹುಮಾನ: 82.91 ಕೋಟಿ ರೂ.
ಚಾಂಪಿಯನ್: 33.18 ಕೋಟಿ ರೂ
ರನ್ನರ್ಅಪ್: 16.58 ಕೋಟಿ ರೂ
ಸೆಮಿೈನಲಿಸ್ಟ್: 6.63 ಕೋಟಿ ರೂ.
ಲೀಗ್ ಹಂತ: 82.91 ಲಕ್ಷ ರೂ.
ಪ್ರತಿ ಪಂದ್ಯ ಜಯ: 33.16 ಲಕ್ಷ ರೂ.