ಆರ್​ಸಿಬಿ ಪರ ಮುಂದಿನ ಮೂರು ವರ್ಷಗಳಲ್ಲಿ ಒಂದು ಕಪ್​: ವಿರಾಟ್​ ಕೊಹ್ಲಿ ಸಂಕಲ್ಪ!

web kohli rcb
Published on

ಬೆಂಗಳೂರು: ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಬರೋಬ್ಬರಿ 21 ಕೋಟಿ ರೂ. ಮೊತ್ತಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ರಿಟೇನ್​ ಆಗಿದ್ದಾರೆ. ಇದರೊಂದಿಗೆ ಅವರು ಮುಂದಿನ ಮೂರು ವರ್ಷವೂ ಆರ್​ಸಿಬಿ ತಂಡದ ಪರ ಆಡುವುದು ಮತ್ತು ಆರ್​ಸಿಬಿ ತಂಡದಲ್ಲಿ 20 ವರ್ಷಗಳನ್ನು ಪೂರ್ಣಗೊಳಿಸುವುದು ಖಚಿತಗೊಂಡಿದೆ. ಆದರೆ ಈ 20 ವರ್ಷಗಳಲ್ಲಿ ಒಮ್ಮೆಯೂ ಐಪಿಎಲ್​ ಪ್ರಶಸ್ತಿ ಗೆಲ್ಲದ ಕೊರಗು ಇರಬಾರದು ಎಂಬ ಕಾರಣಕ್ಕಾಗಿ ವಿರಾಟ್​ ಕೊಹ್ಲಿ, ಮುಂದಿನ 3 ವರ್ಷಗಳಲ್ಲಿ ಒಮ್ಮೆಯಾದರೂ ಕಪ್​ ಗೆಲ್ಲುವ ಸಂಕಲ್ಪ ಮಾಡಿದ್ದಾರೆ.

"ಮುಂಬರುವ ಹರಾಜಿನಲ್ಲಿ ಆರ್​ಸಿಬಿ ತಂಡವನ್ನು ಹೊಸದಾಗಿ ಮತ್ತು ಬಲಿಷ್ಠವಾಗಿ ಕಟ್ಟುವ ಅವಕಾಶವಿದೆ. ನಾನು ಮುಂಬರುವ ಹರಾಜು ಪ್ರಕ್ರಿಯೆಯನ್ನು ಕಾತರದಿಂದ ಕಾಯುತ್ತಿದ್ದೇನೆ. ಮುಂದಿನ ಮೂರು ವರ್ಷಗಳ ಅವದಿಯಲ್ಲಿ ಒಮ್ಮೆಯಾದರೂ ಐಪಿಎಲ್​ ಪ್ರಶಸ್ತಿ ಗೆಲ್ಲಬೇಕೆಂಬುದು ನನ್ನ ಗುರಿಯಾಗಿದೆ. ಎಂದಿನಂತೆಯೇ ನಾವು ನಮ್ಮ ಶ್ರೇಷ್ಠ ಪ್ರಯತ್ನ ಪಡಲಿದ್ದೇವೆ ಮತ್ತು ಎಲ್ಲರಿಗೂ ಹೆಮ್ಮೆ ತರಲಿದ್ದೇವೆ' ಎಂದು ವಿರಾಟ್​ ಕೊಹ್ಲಿ ರಿಟೇನ್​ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಹೇಳಿದ್ದಾರೆ. ಅವರು ಐಪಿಎಲ್​ ಇತಿಹಾಸದಲ್ಲಿ 20 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿರುವ ಮೊದಲ ಭಾರತೀಯರೆನಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ತಂಡದಲ್ಲಿ 25 ಆಟಗಾರರು ಇದ್ದರು. ಈ ಪೈಕಿ ರಿಟೇನ್​ ಆಗಿರುವುದು ಮೂವರು ಮಾತ್ರ. ಕೊಹ್ಲಿ ಜತೆಗೆ ರಜತ್​ ಪಾಟೀದಾರ್​ ಮತ್ತು ಯಶ್​ ದಯಾಳ್​ ಮಾತ್ರ ರಿಟೇನ್​ ಆಗಿದ್ದಾರೆ.

"ನನ್ನ ಪಾಲಿಗೆ ಆರ್​ಸಿಬಿ ಎಂದರೆ ಏನೆಂದು ಎಲ್ಲರಿಗೂ ತಿಳಿಸಿದೆ. ಆರ್​ಸಿಬಿ ಜತೆಗೆ ನನ್ನದು ವಿಶೇಷ ಅನುಬಂಧವಾಗಿದೆ. ಆರ್​ಸಿಬಿ ಪರ ಆಡುವುದು ನನ್ನ ಪಾಲಿಗೆ ಯಾವಾಗಲೂ ವಿಶೇಷವಾದುದು. ಮುಂದಿನ 3 ವರ್ಷಗಳಲ್ಲಿ ನಾನು ಆರ್​ಸಿಬಿ ತಂಡದಲ್ಲಿ 20 ವರ್ಷಗಳನ್ನು ಪೂರ್ಣಗೊಳಿಸಲಿದ್ದೇನೆ. ಇದು ನನ್ನ ಪಾಲಿಗೆ ಅದ್ಭುತ ಅನುಭವವಾಗಿದೆ. ನಾನು ಇಷ್ಟು ವರ್ಷಗಳ ಕಾಲ ಒಂದೇ ತಂಡದ ಪರ ಆಡುವೆ ಎಂದು ಕನಸು ಕಂಡಿರಲಿಲ್ಲ. ನಾನು ಐಪಿಎಲ್​ನಲ್ಲಿ ಆರ್​ಸಿಬಿ ಹೊರತಾಗಿ ಬೇರೆ ಯಾವ ತಂಡದ ಪರವಾಗಿಯೂ ಆಡುವ ಯೋಚನೆ ಮಾಡಿಲ್ಲ' ಎಂದು ಕೊಹ್ಲಿ ಹೇಳಿದ್ದಾರೆ.

*ಆರ್​ಸಿಬಿ ತಂಡದ ನಾಯಕನ ಬಗ್ಗೆ ಅಥವಾ ವಿರಾಟ್​ ಕೊಹ್ಲಿಗೆ ಮತ್ತೆ ನಾಯಕತ್ವ ನೀಡುವ ಬಗ್ಗೆ ನಾವಿನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಎಲ್ಲ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಂಡಿದ್ದೇವೆ. ಕಳೆದ ವರ್ಷ ನಾಯಕರಾಗಿ ಉತ್ತಮ ನಿರ್ವಹಣೆ ತೋರಿದ ಹೊರತಾಗಿಯೂ ನಾವು ಫಾಫ್​ ಡು ಪ್ಲೆಸಿಸ್​ರನ್ನು ರಿಟೇನ್​ ಮಾಡದಿರುವ ನಿರ್ಧಾರ ತೆಗೆದುಕೊಂಡೆವು. ಹೀಗಾಗಿ ಹರಾಜು ಪ್ರಕ್ರಿಯೆಗೆ ಮುಕ್ತ ಮನಸ್ಸಿನಿಂದ ತೆರಳಲಿದ್ದೇವೆ.

| ಮೋ ಬೋಬಟ್​, ಆರ್​ಸಿಬಿ ತಂಡದ ಕ್ರಿಕೆಟ್​ ನಿರ್ದೇಶಕ

ಸಿರಾಜ್​ ಕೈಬಿಟ್ಟಿದ್ದು ಕಠಿಣ ಆಯ್ಕೆ

2018ರಿಂದ ಆರ್​ಸಿಬಿ ತಂಡದ ಬೌಲಿಂಗ್​ ವಿಭಾಗದಲ್ಲಿರುವ ವೇಗಿ ಮೊಹಮದ್​ ಸಿರಾಜ್​ 87 ಪಂದ್ಯಗಳಲ್ಲಿ 83 ವಿಕೆಟ್​ ಕಬಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ 15 ವಿಕೆಟ್​ ಉರುಳಿಸಿದ್ದರು. ಇದರ ನಡುವೆಯೂ ಅವರನ್ನು ಈ ಬಾರಿ ರಿಟೇನ್​ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟುಕೊಡಲಾಗಿದೆ. ಇದೊಂದು ಕಠಿಣ ನಿರ್ಧಾರವಾಗಿತ್ತು ಎಂದು ಆರ್​ಸಿಬಿ ತಂಡದ ಕ್ರಿಕೆಟ್​ ನಿರ್ದೇಶಕ ಮೋ ಬೋಬಟ್​ ತಿಳಿಸಿದ್ದಾರೆ. "ತಂಡಕ್ಕೆ ಸಿರಾಜ್​ ಕೊಡುಗೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಲವು ಆಯ್ಕೆಗಳನ್ನು ತಲೆಯಲ್ಲಿಟ್ಟುಕೊಂಡು ಹರಾಜಿಗೆ ತೆರಳಲು ನಾವು ಬಯಸಿದ್ದೇವೆ. ಅತ್ಯಂತ ಸಮತೋಲನದ ಬೌಲಿಂಗ್​ ವಿಭಾಗವನ್ನು ಕಟ್ಟುವುದು ನಮ್ಮ ಧ್ಯೇಯವಾಗಿದೆ' ಎಂದು ಬೋಬಟ್​ ವಿವರಿಸಿದ್ದಾರೆ.

ಗಾಯದಿಂದಾಗಿ ಗ್ರೀನ್​ ಗೈರು

ಆಸ್ಟ್ರೆಲಿಯಾದ ಆಲ್ರೌಂಡರ್​ ಕ್ಯಾಮರಾನ್​ ಗ್ರೀನ್​ ಕಳೆದ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್​ ತಂಡದಿಂದ 17 ಕೋಟಿ ರೂ. ಮೊತ್ತಕ್ಕೆ ಆರ್​ಸಿಬಿ ತಂಡಕ್ಕೆ ವರ್ಗಾವಣೆಗೊಂಡಿದ್ದರು. ಕಳೆದ ಆವೃತ್ತಿಯಲ್ಲಿ ಆಡಿದ 13 ಪಂದ್ಯಗಳಲ್ಲಿ 255 ರನ್​ ಮತ್ತು 10 ವಿಕೆಟ್​ ಗಳಿಸಿ ಮಿಂಚಿದ್ದರು. ಇದರ ಹೊರತಾಗಿಯೂ ಈ ಬಾರಿ ಅವರನ್ನು ರಿಟೇನ್​ ಮಾಡದಿರುವುದಕ್ಕೆ ಗಾಯದ ಸಮಸ್ಯೆಯೇ ಪ್ರಮುಖ ಕಾರಣ ಎಂದು ಬೋಬಟ್​ ಸ್ಪಷ್ಟಪಡಿಸಿದ್ದಾರೆ. ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ಗ್ರೀನ್​ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಮುಂದಿನ ಐಪಿಎಲ್​ನಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಅವರನ್ನು ರಿಟೇನ್​ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net