

ಬೆಂಗಳೂರು: ಆಸ್ಟ್ರೇಲಿಯಾದ ಸ್ಪಿನ್ನರ್ ಶೇನ್ ವಾರ್ನ್ ಮ್ಯಾಜಿಕ್ ಎಸೆತಗಳಿಂದ ಬ್ಯಾಟ್ಸ್ಮನ್ಗಳನ್ನು ಬಲೆಗೆ ಬೀಳಿಸುತ್ತಿದ್ದರು. 1993ರಲ್ಲಿ 23ರ ಹರೆಯದ ಶೇನ್ ವಾರ್ನ್ ಆಗಷ್ಟೇ ಕ್ರಿಕೆಟ್ನಲ್ಲಿ ಛಾಪು ಮೂಡಿಸುತ್ತಿದ್ದ ಯುವ ಸ್ಪಿನ್ನರ್. ಆ ವರ್ಷದ ಆಶಸ್ ಸರಣಿಯ ಆ ಒಂದು ಎಸೆತ ಅವರ ಸ್ಪಿನ್ ಮಾಂತ್ರಿಕತೆಯ ಬಗ್ಗೆ ಎಲ್ಲರೂ ಬೆರಗು ಮೂಡಿಸುವಂತೆ ಮಾಡಿತ್ತು. ‘ಶತಮಾನದ ಎಸೆತ’ ಎಂದೇ ಹೆಸರು ಪಡೆದ ಆ ಎಸೆತಕ್ಕೆ ಶುಕ್ರವಾರ 28ನೇ ವರ್ಷದ ಸಂಭ್ರಮ.
1993ರ ಆಶಸ್ ಸರಣಿಯಲ್ಲಿ ಮ್ಯಾಂಚ್ಸ್ಟರ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟ ಜೂನ್ 4ರಂದು ಸಾಗಿತ್ತು. ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ನ 289 ರನ್ಗಳಿಗೆ ಪ್ರತಿಯಾಗಿ ಇಂಗ್ಲೆಂಡ್, 1 ವಿಕೆಟ್ಗೆ 80 ರನ್ ಗಳಿಸಿ ಉತ್ತಮ ಆರಂಭವನ್ನೇ ಪಡೆದಿತ್ತು. ಆಗ ಆಸೀಸ್ ನಾಯಕ ಅಲನ್ ಬಾರ್ಡರ್, ತಂಡದ ಯುವ ಸ್ಪಿನ್ನರ್ ಶೇನ್ ವಾರ್ನ್ ಕೈಗೆ ಚೆಂಡು ನೀಡಿದ್ದರು. ಇಂಗ್ಲೆಂಡ್ ಬ್ಯಾಟ್ಸ್ಮನ್ ಮೈಕ್ ಗ್ಯಾಟಿಂಗ್ 4 ರನ್ ಗಳಿಸಿ ಇನಿಂಗ್ಸ್ ಬೆಳೆಸುವ ಪ್ರಯತ್ನದಲ್ಲಿದ್ದರು. ಆಗ ವಾರ್ನ್ ಎಸೆದ ಎಸೆತ ಗ್ಯಾಟಿಂಗ್ರನ್ನು ತಬ್ಬಿಬ್ಬಾಗಿಸಿ ಕ್ಲೀನ್ ಬೌಲ್ಡ್ ಮಾಡಿತ್ತು. ಔಟ್ಸೈಡ್ ಲೆಗ್ಸ್ಟಂಪ್ನಲ್ಲಿ ಪಿಚ್ ಆಗಿದ್ದ ಚೆಂಡು ಕ್ಷಿಪ್ರಗತಿಯಲ್ಲಿ ತಿರುವು ಪಡೆದುಕೊಂಡು ಗ್ಯಾಟಿಂಗ್ರ ಆಫ್ ಸ್ಟಂಪ್ ಉರುಳಿಸಿತ್ತು. ನಂತರ ಇಂಗ್ಲೆಂಡ್ ಇನಿಂಗ್ಸ್ ದಿಕ್ಕತಪ್ಪಿತ್ತು. ಆಸೀಸ್ 179 ರನ್ಗಳಿಂದ ಜಯಿಸಿದ ಆ ಪಂದ್ಯದಲ್ಲಿ ವಾರ್ನ್ ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವವನ್ನೂ ಪಡೆದಿದ್ದರು.
ವಾರ್ನ್ರ ಆ ಮ್ಯಾಜಿಕ್ ಎಸೆತಕ್ಕೆ ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ‘ಶತಮಾನದ ಎಸೆತ’ ಎಂದು ಹೆಸರು ನೀಡಿದ್ದಾರೆ. ಶುಕ್ರವಾರ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ವಾರ್ನ್ ಅವರ ಆ ಎಸೆತವನ್ನು ಸಂಭ್ರಮಿಸಿದ್ದು, ಐಸಿಸಿ ಕೂಡ ಆ ಎಸೆತವನ್ನು ಶತಮಾನದ ಎಸೆತ ಎಂದೇ ಸ್ಮರಿಸಿಕೊಂಡಿದೆ. ಈಗ 51ನೇ ವಯಸ್ಸಿನವರಾಗಿರುವ ವಾರ್ನ್ ಟೆಸ್ಟ್ ಕ್ರಿಕೆಟ್ನಲ್ಲಿ 708 ಮತ್ತು ಏಕದಿನ ಕ್ರಿಕೆಟ್ನಲ್ಲಿ 293 ವಿಕೆಟ್ ಕಬಳಿಸಿ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದರು.