ಇಂದಿನಿಂದ ಏಕದಿನ ವಿಶ್ವಕಪ್​; ಹೇಗಿದೆ ಎಲ್ಲ 10 ತಂಡಗಳ ಬಲಾಬಲ? ಯಾರು ಫೇವರಿಟ್​?

wc web 1
Published on

ಅಹಮದಾಬಾದ್​: ಕ್ರಿಕೆಟ್​ ಜಗತ್ತಿನ ಮಹಾಸಮರ ಏಕದಿನ ವಿಶ್ವಕಪ್​ಗೆ ಗುರುವಾರ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​ ತಂಡಗಳ ನಡುವೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದೊಂದಿಗೆ 13ನೇ ಆವೃತ್ತಿ ಶುರುವಾಗಲಿದೆ. ದೇಶದ 10 ನಗರಗಳಲ್ಲಿ 46 ದಿನಗಳ ಕಾಲ 48 ಪಂದ್ಯಗಳು ನಡೆಯಲಿವೆ. ಆತಿಥೇಯ ಭಾರತ ತಂಡ ಭಾನುವಾರ ಚೆನ್ನೈನಲ್ಲಿ ಆಸ್ಟ್ರೆಲಿಯಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಟೂರ್ನಿಯಲ್ಲಿ ಆಡುವ 10 ತಂಡಗಳ ಬಲಾಬಲ ಹೀಗಿದೆ...

ಭಾರತ: ತವರಿನಲ್ಲೇ ಕೊನೇ ಬಾರಿ 2011ರಲ್ಲಿ ವಿಶ್ವಕಪ್​ ನಡೆದಾಗ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಈ ಬಾರಿ ಅದನ್ನು ಪುನರಾವರ್ತಿಸುವ ನಿರೀಕ್ಷೆ ಹೆಚ್ಚಾಗಿದೆ. ಇತ್ತೀಚೆಗೆ ಏಷ್ಯಾಕಪ್​ ಗೆಲುವಿನೊಂದಿಗೆ ಉತ್ತಮ ಸಿದ್ಧತೆಯೂ ನಡೆದಿದೆ. ಪ್ರಮುಖ ಆಟಗಾರರೆಲ್ಲ ಗಾಯದಿಂದ ಗುಣಮುಖರಾಗಿದ್ದು, 3ನೇ ಬಾರಿ ವಿಶ್ವಕಪ್​ ಗೆಲ್ಲಲು ಪೂರ್ಣ ಸಾಮರ್ಥ್ಯದ ತಂಡ ಸಿದ್ಧವಾಗಿದೆ.

ಐಸಿಸಿ ಏಕದಿನ ರ್ಯಾಂಕ್​: 1

ನಾಯಕ: ರೋಹಿತ್​ ಶರ್ಮ

ಸ್ಟಾರ್​ ಆಟಗಾರರು: ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ, ಕೆಎಲ್​ ರಾಹುಲ್​

ಟ್ರಂಪ್​ಕಾರ್ಡ್ಸ್​: ಹಾರ್ದಿಕ್​ ಪಾಂಡ್ಯ, ಕುಲದೀಪ್​ ಯಾದವ್​, ಮೊಹಮದ್​ ಸಿರಾಜ್​

ಕೋಚ್​: ರಾಹುಲ್​ ದ್ರಾವಿಡ್​

ಬಲ: ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ ಭರ್ಜರಿ ಫಾರ್ಮ್​; ತವರಿನ ಲಾಭ; ಬೌಲಿಂಗ್​ ವಿಭಾಗದ ಅನುಭವ.

ದೌರ್ಬಲ್ಯ: ಅಗ್ರ ಸರದಿಯಲ್ಲಿ ಹೆಚ್ಚಿನ ಬಲಗೈ ಬ್ಯಾಟರ್ಸ್​; ಸತತ ಪ್ರಯಾಣದ ಬಳಲಿಕೆ; ಅರೆಕಾಲಿಕ ಬೌಲರ್ಸ್​ ಕೊರತೆ.

ಸಾಧನೆ: 1983, 2011ರಲ್ಲಿ ಚಾಂಪಿಯನ್​

ವಿಶ್ವಕಪ್​ ನಿರ್ವಹಣೆ: 84 ಪಂದ್ಯ, 53 ಗೆಲುವು, 29 ಸೋಲು, 1 ಟೈ,1 ರದ್ದು

ಪಾಕಿಸ್ತಾನ: ಉಪಖಂಡದ ವಿಶ್ವಕಪ್​ಗಳಲ್ಲಿ ಒಮ್ಮೆಯೂ ಫೈನಲ್​ಗೇರಿರದ ಪಾಕ್​ ಈ ಬಾರಿ ಹೊಸ ಇತಿಹಾಸ ಬರೆಯುವ ತವಕದಲ್ಲಿದೆ. ಇತ್ತೀಚೆಗೆ ಏಷ್ಯಾಕಪ್​ನಲ್ಲಿ ನಿರಾಸೆ ಅನುಭವಿಸಿರುವ ಪಾಕ್​ ವಿಶ್ವಕಪ್​ನಲ್ಲೂ 1999ರ ನಂತರದಲ್ಲಿ ಗೆದ್ದಿರುವುದು ಒಂದೇ ನಾಕೌಟ್​ ಪಂದ್ಯ. ಆರಂಭಿಕರು, ವೇಗಿಗಳ ನಿರ್ವಹಣೆಯೇ ನಿರ್ಣಾಯಕ.

ಐಸಿಸಿ ಏಕದಿನ ರ್ಯಾಂಕ್​: 2

ನಾಯಕ: ಬಾಬರ್​ ಅಜಮ್​

ಸ್ಟಾರ್​ ಆಟಗಾರರು: ಮೊಹಮದ್​ ರಿಜ್ವಾನ್​, ಶಾದಾಬ್​ ಖಾನ್​, ಹ್ಯಾರಿಸ್​ ರೌಫ್​

ಟ್ರಂಪ್​ಕಾರ್ಡ್ಸ್​: ಶಹೀನ್​ ಷಾ ಅಫ್ರಿದಿ, ಇಫ್ತಿಕರ್​ ಅಹ್ಮದ್​, ಮೊಹಮದ್​ ನವಾಜ್​

ಕೋಚ್​: ಗ್ರಾಂಟ್​ ಬ್ರಾಡ್​ರ್ಬನ್​

ಬಲ: ರಿಜ್ವಾನ್​, ಬಾಬರ್​ ಅಜಮ್​ ಸಹಿತ ಅಗ್ರ ಬ್ಯಾಟರ್​ಗಳ ಾಮ್​ರ್; ಶಹೀನ್​ ಷಾ ಅಫ್ರಿದಿ ಬೌಲಿಂಗ್​.

ದೌರ್ಬಲ್ಯ: ಪ್ರಮುಖ ವೇಗಿ ನಸೀಮ್​ ಷಾ ಕೊನೇಣದಲ್ಲಿ ಅಲಭ್ಯ; ಏಷ್ಯಾಕಪ್​ನಲ್ಲಿ ತಂಡದ ಕೆಲದೋಷ ಬೆಳಕಿಗೆ.

ಸಾಧನೆ: 1992ರಲ್ಲಿ ಚಾಂಪಿಯನ್​

ವಿಶ್ವಕಪ್​ ನಿರ್ವಹಣೆ: 79 ಪಂದ್ಯ, 45 ಗೆಲುವು, 32 ಸೋಲು, 2 ರದ್ದು

ಆಸ್ಟ್ರೆಲಿಯಾ: ಐದು ಬಾರಿಯ ಚಾಂಪಿಯನ್​ ತಂಡ ಆಸ್ಟ್ರೆಲಿಯಾ ಈ ಬಾರಿ ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅನುಭವಿ-ಯುವ ಆಟಗಾರರ ಮಿಶ್ರಣವಿದೆ. 1987ರಲ್ಲಿ ಮೊದಲ ಬಾರಿ ಭಾರತದಲ್ಲೇ ಪ್ರಶಸ್ತಿ ಗೆದ್ದಿರುವುದು ತಂಡಕ್ಕೆ ಸ್ಫೂರ್ತಿಯಾಗಿದೆ.

ಐಸಿಸಿ ಏಕದಿನ ರ್ಯಾಂಕ್​: 3

ನಾಯಕ: ಪ್ಯಾಟ್​ ಕಮ್ಮಿನ್ಸ್​

ಸ್ಟಾರ್​ ಆಟಗಾರರು: ಸ್ಟೀವನ್​ ಸ್ಮಿತ್​, ಮಿಚೆಲ್​ ಸ್ಟಾರ್ಕ್​, ಗ್ಲೆನ್​ ಮ್ಯಾಕ್ಸ್​ವೆಲ್​

ಟ್ರಂಪ್​ಕಾರ್ಡ್ಸ್​: ಡೇವಿಡ್​ ವಾರ್ನರ್​, ಮಿಚೆಲ್​ ಮಾರ್ಷ್​ ಕ್ಯಾಮರಾನ್​ ಗ್ರೀನ್​

ಕೋಚ್​: ಆಂಡ್ರೋ ಮೆಕ್​ಡೊನಾಲ್ಡ್​

ಬಲ: ಹಲವು ಆಲ್ರೌಂಡರ್​ಗಳು; ಅನುಭವಿ ಆಲ್ರೌಂಡರ್​ಗಳು; ವಾರ್ನರ್​, ಮ್ಯಾಕ್ಸ್​ವೆಲ್​ ಸ್ಫೋಟಕ ಆಟ.

ದೌರ್ಬಲ್ಯ: ಆಡಂ ಜಂಪಾ ಒಬ್ಬರೇ ಪರಿಣತ ಸ್ಪಿನ್ನರ್​; ಕೆಲ ಆಟಗಾರರು ಈಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದಾರೆ.

ಸಾಧನೆ: 1987, 1999, 2003, 2007, 2015ರಲ್ಲಿ ಚಾಂಪಿಯನ್​

ವಿಶ್ವಕಪ್​ ನಿರ್ವಹಣೆ: 94 ಪಂದ್ಯ, 69 ಗೆಲುವು, 23 ಸೋಲು, 1 ಟೈ, 1 ರದ್ದು

ದಕ್ಷಿಣ ಆಫ್ರಿಕಾ: ಯಾವಾಗಲೂ ಪ್ರಶಸ್ತಿಗೆ ಪ್ರಮುಖ ಸ್ಪರ್ಧಿ ಎನಿಸಿದರೂ, ಕನಿಷ್ಠ ಫೈನಲ್​ಗೂ ಪ್ರವೇಶಿಸದಿರುವ ಪ್ರಮುಖ ತಂಡವಿದು. ಇತ್ತೀಚೆಗೆ ಆಸ್ಟ್ರೆಲಿಯಾ ವಿರುದ್ಧ ಸತತ 3 ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿದ್ದು ತಂಡಕ್ಕೆ ಆತ್ಮವಿಶ್ವಾಸ ತುಂಬಿದೆ. ಐಪಿಎಲ್​ನಲ್ಲಿ ಮಿಂಚಿರುವ ಆಟಗಾರರೇ ಈ ಬಾರಿ ತಂಡದ ಪ್ರಮುಖ ಆಸ್ತಿ.

ಐಸಿಸಿ ಏಕದಿನ ರ್ಯಾಂಕ್​: 4

ನಾಯಕ: ಟೆಂಬಾ ಬವುಮಾ

ಸ್ಟಾರ್​ ಆಟಗಾರರು: ಕಗಿಸೊ ರಬಾಡ, ಡೇವಿಡ್​ ಮಿಲ್ಲರ್​, ಏಡನ್​ ಮಾರ್ಕ್ರಮ್​

ಟ್ರಂಪ್​ಕಾರ್ಡ್ಸ್​: ಕ್ವಿಂಟನ್​ ಡಿಕಾಕ್​, ಹೆನ್ರಿಕ್​ ಕ್ಲಾಸೆನ್​, ಮಾಕೋರ್ ಜಾನ್ಸೆನ್​.

ಕೋಚ್​: ರಾಬ್​ ವಾಲ್ಟರ್​

ಬಲ: ಕ್ಲಾಸೆನ್​, ಮಿಲ್ಲರ್​ ಫಾರ್ಮ್​; ವೈವಿಧ್ಯತೆಯಿಂದ ಕೂಡಿದ ಬೌಲಿಂಗ್​ ವಿಭಾಗ.

ದೌರ್ಬಲ್ಯ: ಪ್ರಮುಖ ವೇಗಿಗಳಾದ ಅನ್ರಿಚ್​ ನೋಕಿಯಾ, ಸಿಸಂಡ ಮಗಲ ಗಾಯದಿಂದ ಅಲಭ್ಯ; ಚೋಕರ್ಸ್​ ಹಣೆಪಟ್ಟಿ.

ಸಾಧನೆ: 1992, 1999, 2007, 2015ರಲ್ಲಿ ಸೆಮಿೈನಲ್​

ವಿಶ್ವಕಪ್​ ನಿರ್ವಹಣೆ: 64 ಪಂದ್ಯ, 38 ಗೆಲುವು, 23 ಸೋಲು, 2 ಟೈ, ರದ್ದು: 1.

ಇಂಗ್ಲೆಂಡ್​: ವಿಶ್ವಕಪ್​ನಲ್ಲಿ ಮೊದಲ ಬಾರಿ ಹಾಲಿ ಚಾಂಪಿಯನ್​ ಆಗಿ ಅಭಿಯಾನ ಆರಂಭಿಸುವ ಅವಕಾಶ ಈ ಬಾರಿ ಆಂಗ್ಲರಿಗೆ ಲಭಿಸಿದ್ದು, ವಿಂಡೀಸ್​, ಆಸೀಸ್​ ಬಳಿಕ ಪ್ರಶಸ್ತಿ ಉಳಿಸಿಕೊಂಡ 3ನೇ ತಂಡವೆನಿಸುವ ಉತ್ಸಾಹದಲ್ಲಿದೆ. ಇತ್ತೀಚೆಗೆ ಟೆಸ್ಟ್​ನಲ್ಲೇ ಏಕದಿನದಂತೆ ಆಡುತ್ತಿರುವ ತಂಡದಿಂದ ವಿಶ್ವಕಪ್​ನಲ್ಲೂ ಆಕ್ರಮಣಕಾರಿ ಕಾರ್ಯತಂತ್ರ ನಿರೀಕ್ಷೆ ಇದೆ.

ಐಸಿಸಿ ಏಕದಿನ ರ್ಯಾಂಕ್​: 5

ನಾಯಕ: ಜೋಸ್​ ಬಟ್ಲರ್​

ಸ್ಟಾರ್​ ಆಟಗಾರರು: ಮೊಯಿನ್​ ಅಲಿ, ಜಾನಿ ಬೇರ್​ಸ್ಟೋ, ಜೋ ರೂಟ್​

ಟ್ರಂಪ್​ಕಾರ್ಡ್ಸ್​: ಬೆನ್​ಸ್ಟೋಕ್ಸ್​, ಸ್ಯಾಮ್​ ಕರನ್​, ಹ್ಯಾರಿ ಬ್ರೂಕ್​

ಕೋಚ್​: ಮ್ಯಾಥ್ಯೂ ಮೋಟ್​

ಬಲ: ಬೆನ್​ ಸ್ಟೋಕ್ಸ್​ ನಿವೃತ್ತಿಯಿಂದ ವಾಪಸ್​; ಅನುಭವಿಗಳ ಉಪಸ್ಥಿತಿ; ಸ್ಪೋಟಕ ಬ್ಯಾಟರ್​ಗಳು.

ದೌರ್ಬಲ್ಯ: ವಿಶ್ವಕಪ್​ ವರ್ಷದಲ್ಲಿ ಇದುವರೆಗೆ ಹತ್ತೇ ಏಕದಿನ ಆಡಿರುವುದು; ಬೌಲರ್​ಗಳಿಗೆ ಭಾರತದ ಪಿಚ್​ ಪರಿಚಿತವಲ್ಲ.

ಸಾಧನೆ: 2019ರಲ್ಲಿ ಚಾಂಪಿಯನ್​

ವಿಶ್ವಕಪ್​ ನಿರ್ವಹಣೆ: 83 ಪಂದ್ಯ, 48 ಗೆಲುವು, 32 ಸೋಲು, 2 ಟೈ, 1 ರದ್ದು

ನ್ಯೂಜಿಲೆಂಡ್​: ಕಳೆದ 2 ಆವೃತ್ತಿಗಳಲ್ಲಿ ಫೈನಲ್​ಗೇರಿ ನಿರಾಸೆ ಅನುಭವಿಸಿದ್ದ ನ್ಯೂಜಿಲೆಂಡ್​ 3ನೇ ಪ್ರಯತ್ನದಲ್ಲಿ ವಿಶ್ವಕಪ್​ಗೆ ಮುತ್ತಿಡುವ ಹಂಬಲದಲ್ಲಿದೆ. ಆದರೆ ಭಾರತದಲ್ಲಿನ ಕೆಟ್ಟ ದಾಖಲೆ ತಂಡಕ್ಕೆ ಪ್ರಮುಖ ಹಿನ್ನಡೆಯಾಗಿದೆ. ಈ ಬಾರಿಯೂ ಕರಿಗುದುರೆಯಾಗಿ ಅಭಿಯಾನ ಆರಂಭಿಸಲಿದೆ.

ಐಸಿಸಿ ಏಕದಿನ ರ್ಯಾಂಕ್​: 6

ನಾಯಕ: ಕೇನ್​ ವಿಲಿಯಮ್ಸನ್​

ಸ್ಟಾರ್​ ಆಟಗಾರರು: ಟ್ರೆಂಟ್​ ಬೌಲ್ಟ್​, ಜಿಮ್ಮಿ ನೀಶಾಮ್​, ಟಾಮ್​ ಲಾಥಮ್​

ಟ್ರಂಪ್​ಕಾರ್ಡ್ಸ್​: ಡೆವೊನ್​ ಕಾನ್​ವೇ, ಮಿಚೆಲ್​ ಸ್ಯಾಂಟ್ನರ್​, ಇಶ್​ ಸೋಧಿ

ಕೋಚ್​: ಗ್ಯಾರಿ ಸ್ಟೀಡ್​

ಬಲ: ಟ್ರೆಂಟ್​ ಬೌಲ್ಟ್​ ಬೌಲಿಂಗ್​; ಪರಿಣತ ಸ್ಪಿನ್ನರ್​ಗಳು; ಕಾನ್​ವೇ ಐಪಿಎಲ್​ ಅನುಭವ.

ದೌರ್ಬಲ್ಯ: ನಾಯಕ ಕೇನ್​ ವಿಲಿಯಮ್ಸನ್​ ಗಾಯದ ಸಮಸ್ಯೆ; ಭಾರತದಲ್ಲಿನ ಪಂದ್ಯಗಳಲ್ಲಿ ಕೆಟ್ಟ ನಿರ್ವಹಣೆ ದಾಖಲೆ.

ಸಾಧನೆ: 2015, 2019ರಲ್ಲಿ ರನ್ನರ್​ಅಪ್​

ವಿಶ್ವಕಪ್​ ನಿರ್ವಹಣೆ: 89 ಪಂದ್ಯ, 54 ಗೆಲುವು, 33 ಸೋಲು, 1 ಟೈ 1 ರದ್ದು

ಶ್ರೀಲಂಕಾ: ಇತ್ತೀಚೆಗೆ ಏಷ್ಯಾಕಪ್ ಫೈನಲ್​ ನಿರ್ವಹಣೆ ದುಃಸ್ವಪ್ನ ಎನಿಸಿರುವ ನಡುವೆ, ಉಪಖಂಡದ ಕಳೆದೆರಡು ವಿಶ್ವಕಪ್​ಗಳಲ್ಲಿ ಕ್ರಮವಾಗಿ ಚಾಂಪಿಯನ್​, ರನ್ನರ್​ಅಪ್​ ಎನಿಸಿರುವುದು ಲಂಕಾ ಉತ್ಸಾಹವನ್ನು ಹೆಚ್ಚಿಸಲಿದೆ. ವಿಶ್ವಕಪ್​ ಅರ್ಹತಾ ಸುತ್ತಿನಿಂದ ಆಡಿರುವ ಕಳೆದ 15 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಸೋತಿರುವುದು ತಂಡದ ಸಾಮರ್ಥ್ಯ ತೋರಿಸುತ್ತದೆ.

ಐಸಿಸಿ ಏಕದಿನ ರ್ಯಾಂಕ್​: 7

ನಾಯಕ: ದಸುನ್​ ಶನಕ

ಸ್ಟಾರ್​ ಆಟಗಾರರು: ಮಹೀಶ್​ ತೀಣ, ಕುಸಲ್​ ಮೆಂಡಿಸ್​, ಧನಂಜಯ ಡಿಸಿಲ್ವ

ಟ್ರಂಪ್​ಕಾರ್ಡ್ಸ್​: ಚರಿತ್​ ಅಸಲಂಕಾ, ಮಥೀಶ ಪಥಿರಣ, ಸಧೀರ ಸಮರವಿಕ್ರಮ

ಕೋಚ್​: ಕ್ರಿಸ್​ ಸಿಲ್ವರ್​ವುಡ್​

ಬಲ: ಮಧ್ಯಮ ಕ್ರಮಾಂಕಕ್ಕೆ ಅಸಲಂಕಾ ಆಟದ ಶಕ್ತಿ; ಮಾಲಿಂಗ ಶೈಲಿಯ ಮಥೀಶ ಪಥಿರಣ ಬೌಲಿಂಗ್​.

ದೌರ್ಬಲ್ಯ: ವಾನಿಂದು ಹಸರಂಗ ಗಾಯದಿಂದಾಗಿ ಅಲಭ್ಯ; ನಾಯಕ ಶನಕಗೆ ಫಾರ್ಮ್​ ಕೈಕೊಟ್ಟಿದೆ.

ಸಾಧನೆ: 1996ರಲ್ಲಿ ಚಾಂಪಿಯನ್​

ವಿಶ್ವಕಪ್​ ನಿರ್ವಹಣೆ: 80 ಪಂದ್ಯ, 38 ಗೆಲುವು, 39 ಸೋಲು, 1 ಟೈ, 2 ರದ್ದು

ಬಾಂಗ್ಲಾದೇಶ: ಭಾರತಕ್ಕೆ 2007ರಲ್ಲಿ ಆಘಾತ ನೀಡಿ ಗಮನಸೆಳೆದಿದ್ದ ತಂಡ ಕಳೆದ 4 ವಿಶ್ವಕಪ್​ಗಳಲ್ಲಿ ಗೆದ್ದಿರುವುದು ಬರೀ 3 ಪಂದ್ಯ. ತಮೀಮ್​ ಇಕ್ಬಾಲ್​ ಕೊನೇಣದಲ್ಲಿ ತಂಡದಿಂದ ಹೊರಬಿದ್ದ ಬಳಿಕ ಮಾಡಿದ ಆರೋಪಗಳು ತಂಡದ ಬಿಕ್ಕಟ್ಟು ಬಹಿರಂಗಪಡಿಸಿದೆ.

ಐಸಿಸಿ ಏಕದಿನ ರ್ಯಾಂಕ್​: 8

ನಾಯಕ: ಶಕೀಬ್​ ಅಲ್​ ಹಸನ್​

ಸ್ಟಾರ್​ ಆಟಗಾರರು: ಲಿಟನ್​ ದಾಸ್​, ಮುಸ್ತಾಫಿಜುರ್​ ರೆಹಮಾನ್​, ಮುಶ್ಫಿಕರ್​ ರಹೀಂ

ಟ್ರಂಪ್​ಕಾರ್ಡ್ಸ್​: ಮೆಹಿದಿ ಹಸನ್​ ಮಿರಾಜ್​, ನಜ್ಮಲ್​ ಹೊಸೈನ್​ ಶಾಂಟೊ, ಟಸ್ಕಿನ್​ ಅಹ್ಮದ್​

ಕೋಚ್​: ಚಂಡಿಕಾ ಹತುರುಸಿಂ

ಬಲ: ನಾಯಕ ಶಕೀಬ್​ ಆಲ್ರೌಂಡ್​ ಆಟ; ಎಡಗೈ ಬೌಲರ್​ಗಳ ಶಕ್ತಿ; ಯುವ ಆಟಗಾರರ ಫಾರ್ಮ್​.

ದೌರ್ಬಲ್ಯ: ವಿಶ್ವಕಪ್​ ತಂಡ ಆಯ್ಕೆಯ ವಿವಾದ; ಶಕೀಬ್​, ಮೆಹಿದಿ ಹಸನ್​ ಮಿರಾಜ್​ ಗಾಯದ ಕಳವಳ.

ಸಾಧನೆ: 2015ರಲ್ಲಿ ಕ್ವಾರ್ಟರ್​ಫೈನಲ್​​

ವಿಶ್ವಕಪ್​ ನಿರ್ವಹಣೆ: 40 ಪಂದ್ಯ, 14 ಗೆಲುವು, 25 ಸೋಲು, 1 ರದ್ದು

ಅಫ್ಘಾನಿಸ್ತಾನ: ವಿಶ್ವಕಪ್​ನಲ್ಲಿ ಇದುವರೆಗೆ ಆಡಿರುವ 15 ಪಂದ್ಯಗಳಲ್ಲಿ ಗೆದ್ದಿರುವುದು ಒಂದೇ ಪಂದ್ಯವಾದರೂ, ಈ ಬಾರಿ ಉಪಖಂಡದ ಪರಿಚಿತ ವಾತಾವರಣದಲ್ಲಿ ಕೆಲ ಅಚ್ಚರಿಯ ಫಲಿತಾಂಶಗಳನ್ನು ನೀಡುವ ಹುಮ್ಮಸ್ಸು ತಂಡದಲ್ಲಿದೆ.

ಐಸಿಸಿ ಏಕದಿನ ರ್ಯಾಂಕ್​: 9

ನಾಯಕ: ಹಶ್ಮತ್​ಉಲ್ಲಾ ಶಾಹಿದಿ

ಸ್ಟಾರ್​ ಆಟಗಾರರು: ಮೊಹಮದ್​ ನಬಿ, ರಹ್ಮಾನುಲ್ಲಾ ಗುರ್ಬಜ್​, ನವೀನ್​ ಉಲ್​ ಹಕ್​

ಟ್ರಂಪ್​ಕಾರ್ಡ್ಸ್​: ರಶೀದ್​ ಖಾನ್​, ನಜಿಬುಲ್ಲಾ ಜದ್ರಾನ್​, ನೂರ್​ ಅಹ್ಮದ್​

ಕೋಚ್​: ಜೊನಾಥನ್​ ಟ್ರಾಟ್​

ಬಲ: ರಶೀದ್​ ಖಾನ್​ ಸಹಿತ ಗುಣಮಟ್ಟದ ಸ್ಪಿನ್ನರ್ಸ್​; ಉಪಖಂಡದ ಪಿಚ್​ಗಳ ಅನುಭವ.

ದೌರ್ಬಲ್ಯ: ಬ್ಯಾಟಿಂಗ್​ ವಿಭಾಗದ ಅಸ್ಥಿರ ನಿರ್ವಹಣೆ; ವಿಶ್ವಕಪ್​ನ ಕಳಪೆ ದಾಖಲೆ.

ಸಾಧನೆ: 2015, 2019ರಲ್ಲಿ ಲೀಗ್​ ಹಂತ

ವಿಶ್ವಕಪ್​ ನಿರ್ವಹಣೆ: 15 ಪಂದ್ಯ, 1 ಗೆಲುವು, 14 ಸೋಲು

ನೆದರ್ಲೆಂಡ್​: ವೆಸ್ಟ್​ ಇಂಡೀಸ್​, ಸ್ಕಾಟ್ಲೆಂಡ್​ನಂಥ ತಂಡಗಳನ್ನು ಹಿಮ್ಮೆಟ್ಟಿಸಿ ವಿಶ್ವಕಪ್​ಗೆ ಅರ್ಹತೆ ಪಡೆದಿರುವುದೇ ತಂಡದ ಮೊದಲ ಗೆಲುವು. ವಿಶ್ವಕಪ್​ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಕಠಿಣ ಅಭ್ಯಾಸ ನಡೆಸಿರುವ ತಂಡವನ್ನು ಲಘುವಾಗಿ ಪರಿಗಣಿಸಿದರೆ ಅಪಾಯ ಖಚಿತ.

ಐಸಿಸಿ ಏಕದಿನ ರ್ಯಾಂಕ್​: 14

ನಾಯಕ: ಸ್ಕಾಟ್​ ಎಡ್ವರ್ಡ್ಸ್​

ಸ್ಟಾರ್​ ಆಟಗಾರರು: ರೋಲ್​ೊ ವಾನ್​ ಡರ್​ ಮರ್ವ್​, ಮ್ಯಾಕ್ಸ್​ ಒಡೌಡ್​, ವಿಕ್ರಮ್​ ಸಿಂಗ್​

ಟ್ರಂಪ್​ಕಾರ್ಡ್ಸ್​: ರ್ಯಾನ್​ ಕ್ಲೆನ್​, ಕಾಲಿನ್​ ಆಕೆರ್​ಮನ್​, ಲೋಗನ್​ ವಾನ್​ ಬೀಕ್​

ಕೋಚ್​: ರ್ಯಾನ್​ ಕುಕ್​

ಬಲ: ಭಾರತದಲ್ಲಿ ಈ ಹಿಂದೆ 2 ವಿಶ್ವಕಪ್​ ಆಡಿರುವ ಅನುಭವ; ಕೆಲ ಭಾರತ ಮೂಲದ ಆಟಗಾರರ ಉಪಸ್ಥಿತಿ.

ದೌರ್ಬಲ್ಯ: ಟೂರ್ನಿಯ ತಂಡಗಳ ಪೈಕಿ ಕನಿಷ್ಠ ರ್ಯಾಂಕ್​; ಗುಣಮಟ್ಟದ ಸ್ಪಿನ್ನರ್ಸ್​ ಎದುರು ಪರದಾಟ.

ಸಾಧನೆ: 1996, 2003, 2007, 2011ರಲ್ಲಿ ಲೀಗ್​ ಹಂತ.

ವಿಶ್ವಕಪ್​ ನಿರ್ವಹಣೆ: 20 ಪಂದ್ಯ, 2 ಗೆಲುವು, 18 ಸೋಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net