

ನ್ಯೂಯಾರ್ಕ್: ಸೆರ್ಬಿಯಾದ ತಾರೆ ನೊವಾಕ್ ಜೋಕೊವಿಕ್ ಯುಎಸ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಗೆ ಗೆಲುವಿನ ಪುನರಾಗಮನ ಕಂಡಿದ್ದಾರೆ. ಜತೆಗೆ ಟೂರ್ನಿಯ ನಂತರದಲ್ಲಿ ಮರಳಿ ವಿಶ್ವ ನಂ. 1 ಪಟ್ಟಕ್ಕೇರುವುದನ್ನೂ ಖಚಿತಪಡಿಸಿಕೊಂಡಿದ್ದಾರೆ.
2ನೇ ಶ್ರೇಯಾಂಕಿತ ಜೋಕೊವಿಕ್ ಟೂರ್ನಿಯ ಮೊದಲ ದಿನವಾದ ಸೋಮವಾರ ನಡೆದ ಆರಂಭಿಕ ಪಂದ್ಯದಲ್ಲಿ ಫ್ರಾನ್ಸ್ನ ಅಲೆಕ್ಸಾಂಡ್ರೆ ಮುಲ್ಲರ್ ವಿರುದ್ಧ 6-0, 6-2, 6-3 ನೇರಸೆಟ್ಗಳಿಂದ ಗೆಲುವು ಸಾಧಿಸಿದರು. ಕೋವಿಡ್-19 ಲಸಿಕೆ ಹಾಕಿಸಿಕೊಳ್ಳದ ಕಾರಣಕ್ಕಾಗಿ ಕಳೆದ ವರ್ಷದ ಟೂರ್ನಿಗೆ ಅಮೆರಿಕಕ್ಕೆ ಪ್ರವೇಶ ಸಿಗದ ಕಾರಣ ಆಡಿರದಿದ್ದ ಜೋಕೊವಿಕ್, ಈ ಬಾರಿ 23 ನಿಮಿಷಗಳಲ್ಲೇ ಮೊದಲ ಸೆಟ್ ಗೆದ್ದು ಭರ್ಜರಿ ಪುನರಾಗಮನ ಕಂಡರು.
ಕಳೆದ ವರ್ಷ ಆಡದ ಕಾರಣ ಯಾವುದೇ ರ್ಯಾಂಕಿಂಗ್ ಅಂಕ ರಕ್ಷಿಸಿಕೊಳ್ಳಲು ಇರದ ಕಾರಣ ಜೋಕೋ, 2ನೇ ಸುತ್ತಿಗೇರಿದ ಬೆನ್ನಲ್ಲೇ, ಟೂರ್ನಿಯ ನಂತರ ವಿಶ್ವ ನಂ. 1 ಪಟ್ಟಕ್ಕೆ ಮರಳುವುದು ಖಚಿತಗೊಂಡಿದೆ.