

ಕೊಲಂಬೊ: ಇಂದಿನಿಂದ (ಜುಲೈ 27) ಶ್ರೀಲಂಕಾ ವಿರುದ್ಧ ಆರಂಭವಾಗಲಿರುವ ಟಿ20 ಹಾಗೂ ಏಕದಿನ ಸರಣಿಗೆ ನೂತನ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಆತಿಥೇಯರ ಸವಾಲನ್ನು ಸ್ವೀಕರಿಸಲು ಸಜ್ಜಾಗಿದೆ. ಇನ್ನೂ ಟಿ20 ಮಾದರಿಗೆ ಸೂರ್ಯಕುಮಾರ್ ಯಾದವ್ ಪೂರ್ಣಪ್ರಮಾಣದ ನಾಯಕನಾಗಿ ನೇಮಕವಾಗಿದ್ದು, ಟಿ20 ಸರಣಿಯ ಮೊದಲ ಪಂದ್ಯ ಶುರುವಾಗುವುದಕ್ಕೂ ಮುನ್ನ ನೂತನ ನಾಯಕ ಸೂರ್ಯಕುಮಾರ್ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಾಯಕನಾಗಿ ಪದಾರ್ಪಣೆಗೂ ಮುನ್ನ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸೂರ್ಯಕುಮಾರ್, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆಡಿದ ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಅನ್ನು ನಾವು ಕೂಡ ಮುಂದುವರೆಸುತ್ತೇವೆ. ಇಲ್ಲಿ ಬದಲಾಗಿರುವುದು ರೈಲಿನ ಇಂಜಿನ್ ಮಾತ್ರ. ಬೋಗಿಗಳು ಹಾಗೆಯೇ ಉಳಿದಿವೆ. ಹಾಗಾಗಿ ಹಳೆಯ ರೈಲೇ ಚಲಿಸಲಿದೆ. ನನ್ನ ಪ್ರಕಾರ, ಟೀಮ್ ಇಂಡಿಯಾದಲ್ಲಿ ಏನೂ ಬದಲಾಗುವುದಿಲ್ಲ. ಕ್ರಿಕೆಟ್ ಬ್ರ್ಯಾಂಡ್ ಒಂದೇ ಆಗಿರುತ್ತದೆ. ರೋಹಿತ್ ಶರ್ಮಾ ಅವರ ಜಾಗ ತುಂಬಿದ್ದಿರಂದ ನನ್ನಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಹೀಗಾಗಿ ರೋಹಿತ್ ಶರ್ಮಾ ಹಾಕಿಕೊಟ್ಟ ಹಾದಿಯಲ್ಲಿ ಸಾಗಲು ಬಯಸುತ್ತೇನೆ.
ರೋಹಿತ್ ಶರ್ಮರಿಂದ ನಾನು ಕಲಿತದ್ದು ತುಂಬಾ ಇದೆ. ಮೈದಾನದ ಒಳಗೆ ಮತ್ತು ಹೊರಗೆ ನಾಯಕನಾಗಿ ಇರುವುದು ಹಾಗೂ ಎಲ್ಲರೊಂದಿಗೂ ಬರೆಯುವುದನ್ನು ನಾನು ಅವರಿಂದ ಕಲಿತೆ. ಆದರೆ ನಮ್ಮಿಬ್ಬರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇದಾಗ್ಯೂ ಟಿ20 ಕ್ರಿಕೆಟ್ ಆಡುವುದು ಹೇಗೆ ಮತ್ತು ಪಂದ್ಯಾವಳಿಯನ್ನು ಗೆಲ್ಲುವುದು ಹೇಗೆ ಎಂಬುದನ್ನು ನಾನು ರೋಹಿತ್ ಶರ್ಮಾ ಅವರ ನಾಯಕತ್ವದಿಂದ ಕಲಿತಿದ್ದೇನೆ. ಅದನ್ನೇ ಮುಂದುವರೆಸುತ್ತೇನೆ.
ಹಾರ್ದಿಕ್ ಪಾಂಡ್ಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ಅವರು ಆಲ್ರೌಂಡರ್ ಆಗಿ ತಂಡದ;ಲ್ಲಿ ಇರಲಿದ್ದಾರೆ. ಅವರ ಪಾತ್ರದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ. ಏಕೆಂದರೆ ಅವರು ತಂಡಕ್ಕೆ ಅತ್ಯಂತ ಪ್ರಮುಖ ಆಟಗಾರ. ವಿಶ್ವಕಪ್‌ನಲ್ಲಿ ಅವರು ಪ್ರದರ್ಶನ ನೀಡಿದ ರೀತಿಯೇ ಇಲ್ಲೂ ಕೂಡ ಆಡಲಿದ್ದಾರೆ.
ರೋಹಿತ್, ವಿರಾಟ್, ಜಡೇಜಾ ಸ್ಥಾನದ ಕುರಿತಾಗಿ ಕೇಳಿದಾಗ, ಈ ಮೂವರ ಸ್ಥಾನ ತುಂಬುವುದು ನನ್ನ ಪ್ರಕಾರ ದೊಡ್ಡ ಸವಾಲು. ಇದಾಗ್ಯೂ ಹೊಸ ಆಟಗಾರರು ಸಾಕಷ್ಟು ಪ್ರಯತ್ನದಲ್ಲಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಕೆಲ ಆಟಗಾರರು ದಿಗ್ಗಜರ ಸ್ಥಾನಗಳನ್ನು ತುಂಬುವ ನಿರೀಕ್ಷೆಯಿದೆ ಎಂದು ಟಿ20 ಮಾದರಿಯ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.