

ನವದೆಹಲಿ: ಟೀಮ್ ಇಂಡಿಯಾ ಪರ ಅತ್ಯದ್ಭುತ ಪ್ರದರ್ಶನ ನೀಡಿದ ಆಟಗಾರರು ಅನೇಕ ಮಂದಿ ಇದ್ದು, ದಂತಕಥೆಯಾಗಿ ಉಳಿದವರು ಕೆಲವರು ಎಂದು ಹೇಳಿದರೆ ತಪ್ಪಾಗಲಾರದು. ಅದರಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರೆಂದರೆ ಅದು 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಹಾಗೂ 2011 ಒಡಿಐ ವರ್ಲ್ಡ್ಕಪ್ ವಿನ್ನಿಂಗ್ ಟೀಮ್ನ ಸದಸ್ಯ ಜಹೀರ್ ಖಾನ್ ಎಂದು ಹೇಳಬಹುದಾಗಿದೆ. ಆಲ್ರೌಂಡರ್ ಆಗಿದ್ದ ಕಪಿಲ್ ದೇವ್ ತಂಡ ಸಂಕಷ್ಟದಲ್ಲಿರುವ ಸಮಯದಲ್ಲಿ ಆಸರೆಯಾಗುವ ಮೂಲಕ ಅವರು ಭಾರತೀಯ ಕ್ರಿಕೆಟ್ನ ಇತಿಹಾಸದ ಪುಟ ಸೇರಿದ್ದಾರೆ. ಜಹೀರ್ ಕೂಡ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇವರಿಬ್ಬರು ಭಾರತ ಕ್ರಿಕೆಟ್ ತಂಡದ ದಂತಕಥೆಗಳಾಗಿದ್ದಾರೆ.
ಈಗಿನ ಯುಗದಲ್ಲಿ ವೇಗಿಗಳಾದ ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ತಮ್ಮದೇ ಆದ ಬೆಂಚ್ಮಾರ್ಕ್ಅನ್ನು ಸೆಟ್ ಮಾಡಿದ್ದು, ಮಾಜಿ ಸ್ಪಿನ್ನರ್ಗಳಾದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಮತ್ತು ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ಸ್ಪಿನ್ನರ್ಗಳಲ್ಲಿ ಒಬ್ಬರಾಗಿದ್ದಾರೆ. ಇವರೆಲ್ಲರ ಹೊರತಾಗಿಯೂ ಮೊಹಮ್ಮದ್ ಶಮಿಗೆ ಈ ಇಬ್ಬರು ವೇಗಿಗಳೆಂದರೆ ಅಚ್ಚುಮೆಚ್ಚಂತೆ. ಈ ಬಗ್ಗೆ ಮಾತನಾಡಿರುವ ಶಮಿ ತಮ್ಮ ಅತ್ಯುತ್ತಮ ಬೌಲರ್ಗಳನ್ನು ಹೆಸರಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಶಮಿ, ನನ್ನ ಲಿಸ್ಟ್ನಲ್ಲಿ ಬಹಳಷ್ಟು ಮಂದಿ ಅಚ್ಚುಮೆಚ್ಚಿನ ಬೌಲರ್ಗಳಿದ್ದಾರೆ. ಅದರಲ್ಲಿ ಪ್ರಮುಖವಾಗಿ ವಕಾರ್ ಯೂನಿಸ್ ಹಾಗೂ ಡೇಲ್ ಸ್ಟೇನ್ ನನ್ನ ಆಲ್ ಟೈಮ್ ಫೇವರಿಟ್ ಎಂದು ಹೇಳುತ್ತೇನೆ. ಇದಲ್ಲದೆ ಹಲವು ವಿಚಾರಗಳ ಕುರಿತು ಶಮಿ ಮಾತನಾಡಿದ್ದು, ತಮಗೆ ಅಡ್ಡ ಹೆಸರು ಬಂದ ಕುರಿತು ಹಾಗೂ ಪ್ರಸ್ತುತ ವಿಚಾರಗಳ ಕುರಿತು ಮಾತನಾಡಿದ್ದಾರೆ.
2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ ಶಮಿ ಮೊದಲ ಪಂದ್ಯದಲ್ಲೇ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಎಲ್ಲಾ ಮಾದರಿಯಲ್ಲೂ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಶಮಿ ಟೀಮ್ ಇಂಡಿಯಾ ಪಾಲಿಗೆ ಟ್ರಬಲ್ ಶೂಟರ್ ಆಗಿದ್ದಾರೆ ಎಂದರೆ ತಪ್ಪಾಗಲಾರದು.