ಶ್ರೀಲಂಕಾ ವಿರುದ್ಧದ ಸರಣಿಯಿಂದ ಸಂಜು ಡ್ರಾಪ್​; ಬಿಸಿಸಿಐ ನಡೆಯನ್ನು ಸಮರ್ಥಿಸಿಕೊಂಡ ಕನ್ನಡಿಗ

Sanju Samson
Published on

ಬೆಂಗಳೂರು: ಈ ತಿಂಗಳಾಂತ್ಯದಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ನೂತನ ಕೋಚ್​ ಗೌತಮ್​ ಗಂಭೀರ್​ ಸಾರಥ್ಯದಲ್ಲಿ ಟೀಮ್​ ಇಂಡಿಯಾ ಕಣಕ್ಕಿಳಿಯಲಿದೆ. ಲಂಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಪ್ರಕಟಿಸುತ್ತಿದ್ದಂತೆ ವ್ಯಾಪಕ ಟೀಕೆ ಹಾಗೂ ಆಕ್ರೋಶ ವ್ಯಕ್ತಿವಾಗುತ್ತಿದ್ದು, ಹಲವರು ನೂತನ ಕೋಚ್​ ಗಂಭೀರ್ ಹಾಗೂ ಆಯ್ಕೆ ಸಮಿತಿ ಸದಸ್ಯರ ನಡೆಗೆ ಕಿಡಿಕಾರಿದ್ದಾರೆ.

ಏಕೆಂದರೆ ಇತ್ತೀಚಿಗೆ ಜಿಂಬಾಬ್ವೆ ವಿರುದ್ಧ ಮುಕ್ತಾಯಗೊಂಡ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದ ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್​ರನ್ನು ಶ್ರೀಲಂಕಾ ವಿರುದ್ಧದ ಏಕದಿನ  ಸರಣಿಗೆ ಆಯ್ಕೆ ಮಾಡದೆ ಇರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಕುರಿತು ಕರ್ನಾಟಕ ಮೂಲದ ಮಾಜಿ ಕ್ರಿಕೆಟಿಗ ರಾಬಿನ್​ ಉತ್ತಪ್ಪ ಮಾತನಾಡಿದ್ದು, ಸಂಜುರನ್ನು ಆಯ್ಕೆ ಮಾಡದಿರುವ ಕುರಿತು ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರಾಬಿನ್​, ಇದೊಂದು ಸಹಜ ಪ್ರಕ್ರಿಯೆಯಾಗಿದ್ದು,  ಸಂಜು ಸ್ಯಾಮ್ಸನ್‌ ಅವರನ್ನು ಈ ರೀತಿ ನಡೆಸಿಕೊಂಡಿರುವುದು ಇದೇ ಮೊದಲು ಅಥವಾ ಕೊನೆಯಲ್ಲ. ಆದರೆ, ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ಸಂಪೂರ್ಣ ಬದಲಾಗಿರುವುದರಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಸಂಜು ಸ್ಯಾಮ್ಸನ್‌ ಅವರಿಗೆ ಭಾರತ ಏಕದಿನ ತಂಡದಲ್ಲಿ ಅವಕಾಶ ಇನ್ನೂ ಇದೆ. ಸಂಜು ಸ್ಯಾಮ್ಸನ್‌ ಅವರ ಏಕದಿನ ಕ್ರಿಕೆಟ್‌ ಅಂಕಿಅಂಶಗಳು ಅತ್ಯುತ್ತಮವಾಗಿವೆ. ತಂಡದಲ್ಲಿ ನೆಲೆಗೊಳ್ಳಲು ಇನ್ನೂ ಸಾಕಷ್ಟು ಸಮಯವಿದೆ. ತಂಡದಲ್ಲಿ ಸಂಗತಿಗಳು ಕೂಡ ನೆಲೆಗೊಳ್ಳಲು ಇನ್ನೂ ಸಮಯ ಬೇಕು ಎಂದು ಕರ್ನಾಟಕ ಮೂಲದ ಮಾಜಿ ಕ್ರಿಕೆಟಿಗ ರಾಬಿನ್​ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯಿಂದ ಸಂಜು ಸ್ಯಾಮ್ಸನ್​ ಅವರನ್ನು ಕೈಬಿಡಲಾಗಿದ್ದು, ಬಾಂಗ್ಲಾದೇಶ ವಿರುದ್ಧದ ಸರಣಿಗೆ ಅವರನ್ನು ಖಂಡಿತವಾಗಿಯೂ ಆಯ್ಕೆ ಮಾಡಲಾಗುತ್ತದೆ ಎಂದು ಮಾತು ಕ್ರೀಡಾ ವಲಯದಲ್ಲಿ ಕೇಳಿ ಬರುತ್ತಿದೆ. ರೋಹಿತ್​ ಶರ್ಮ ಹಾಗೂ ವಿರಾಟ್​ ಕೊಹ್ಲಿ ನಿವೃತ್ತಿಗೊಂಡಿರುವ ಕಾರಣ ಟಿ20 ಮಾದರಿಗೆ ಸಂಜುರನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net