ಬಜೆಟ್​ ನೋಡಿದರೆ ಯಾವಾಗ ಬೇಕಾದರೂ ಸರ್ಕಾರ ಪತನವಾಗಬಹುದು: ಮಮತಾ ಬ್ಯಾನರ್ಜಿ

Mamata Banerjee
Published on

ಕಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ 3.0 ಮೊದಲ ಬಜೆಟ್​ಅನ್ನು ಜುಲೈ 23ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿದ್ದು, ಆಂಧ್ರಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯ ಹಾಗೂ ಕ್ಷೇತ್ರಗಳಿಗೆ ಬಂಪರ್​ ಅನುದಾನವನ್ನು ಘೋಷಿಸಿದ್ದಾರೆ. ಇನ್ನೂ ಈ ಬಜೆಟ್​ ಕುರಿತು ಅಸಮಾಧಾನ ಹೊರಹಾಕಿರುವ ಪಶ್ಚಿಮ ಬಂಗಾಳ ಮುಖ್ಯುಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕಲ್ಕತ್ತಾದಲ್ಲಿ ಈ ಕುರಿತು ಮಾತನಾಡಿದ ಮಮತಾ, ಆಂಧ್ರ, ಬಿಹಾರ ಸರ್ಕಾರ ಹೇಳಿದ ಮಾತನ್ನು ಎನ್​ಡಿಎ ಪಾಲಿಸುತ್ತಿದೆ. ಈ ಎರಡು ರಾಜ್ಯಗಳಿಗೆ ಬಜೆಟ್​ನಲ್ಲಿ ಸಿಂಹಪಾಲನ್ನು ನೀಡಲಾಗಿದ್ದು, ಬಂಗಾಳವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಹೊಡೆತ ಬೀಳಲಿದ್ದು, ಅನುದಾನ ಬಿಡುಗಡೆ ವಿಚಾರದಲ್ಲೂ ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಬಜೆಟ್​ನಲ್ಲಿ ಪೂರ್ವೋದಯ ಎಂಬ ಯೋಜನೆ ಘೋಷಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಪೂರ್ವಭಾಗದ ರಾಜ್ಯಗಳನ್ನು ಆಭಿವೃದ್ಧಿ ಮಾಡಲಾಗುವುದು ಎಂದು ವಿತ್ತ ಸಚಿವರು ಹೇಳಿದ್ದಾರೆ. ಆದರೆ, ಇದು ಬಿಹಾರಕ್ಕೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೇ, ಅಮೃತಸರ - ಕಲ್ಕತ್ತಾ ಕಮರ್ಷಿಯಲ್ ಕಾರಿಡರ್ ಗಯಾಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್​ ಅವರು ಹೇಳಿದ್ದಾರೆ. ನನ್ನ ಪ್ರಕಾರ ಈ ನಿರ್ಧಾರ ಸರಿಯಲ್ಲ. ಈ ಬಜೆಟ್​ಗೆ ಯಾವುದೇ ಗುರಿಯಿಲ್ಲ.

ಯಾವಾಗ ಬೇಕಾದರೂ ಸರ್ಕಾರ ಪತನವಾಗಬಹುದು

ಎನ್​ಡಿಎ ಮೈತ್ರಿಕೂಟದಲ್ಲಿರುವ ಪಕ್ಷಗಳಿಗೆ ಯಾವುದೇ ಪವರ್​ಫುಲ್​ ಖಾತೆಯನ್ನು ನೀಡಿಲ್ಲ. ಖಾತೆ ಬಿಟ್ಟುಬಿಡಿ ಸ್ಪೀಕರ್​ ಹುದ್ದೆಯನ್ನು ಬಿಟ್ಟುಕೊಟ್ಟಿಲ್ಲ. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಟಿಡಿಪಿ ಹಾಗೂ ಜೆಡಿಯು ತಪ್ಪು ಮಾಡಿವೆ. ಈ ಬಜೆಟ್​ ನೋಡಿದರೆ ಯಾವಾಗ ಬೇಕಾದರೂ ಸರ್ಕಾರ ಪತನವಾಗುತ್ತದೆ ಎಂಬುದನ್ನು ನಾನು ಸ್ಪಷ್ಟವಾಗಿ ಹೇಳುತ್ತೇನೆ.

ಬಂಗಾಳ ಸೇರಿದಂತೆ ಪೂರ್ವಭಾಗದ ರಾಜ್ಯಗಳು ಪ್ರವಾಹಕ್ಕೆ ಸಿಲುಕಿದರೂ ಬಜೆಟ್​ನಲ್ಲಿ ಯಾವುದೇ ಯೋಜನೆ ಘೋಷಿಸಿಲ್ಲ. ಚುನಾವಣೆ ವೇಳೆ ಈ ಭಾಗದ ಡಾರ್ಜಲಿಂಗ್, ಕಾಲಿಮ್​ಪಿಂಗ್ ಸೇರಿದಂತೆ ಆನೇಕ ಕಡೆಗಳಲ್ಲಿ ಜನರಿಂದ ವೋಟ್ ಪಡೆದು ಬಿಜೆಪಿ ಹಾಗೂ ಅದರ ಮಿತ್ರ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಪ್ರವಾಹವಾದ ಬಳಿಕ ಆಯ್ಕೆಯಾಗಿರುವ ಸಂಸದರು ಯಾರು ಕೂಡ ಇತ್ತ ನೋಡಿಲ್ಲ. ಕೇಂದ್ರ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net