

ಬೆಂಗಳೂರು: ಏಷ್ಯಾಕಪ್ ಗೆಲುವಿನೊಂದಿಗೆ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ನಂ. 1 ಪಟ್ಟಕ್ಕೇರುವ ಅವಕಾಶವನ್ನು ಭಾರತ ತಂಡ, ಬಾಂಗ್ಲಾ ವಿರುದ್ಧ ಕಂಡ ಸೋಲಿನಿಂದಾಗಿ ಕಳೆದುಕೊಂಡಿದೆ. ಭಾರತ ಈಗ 2ರಿಂದ ಮತ್ತೆ 3ನೇ ಸ್ಥಾನಕ್ಕೆ ಜಾರಿದ್ದರೆ, ಪಾಕಿಸ್ತಾನ 2ನೇ ಸ್ಥಾನಕ್ಕೇರಿದೆ. ಆಸ್ಟ್ರೆಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಏಕದಿನದಲ್ಲಿ ಕಂಡ ಸೋಲಿನ ನಡುವೆಯೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ಹರಿಣಗಳ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನದಲ್ಲಿ ಮತ್ತೆ ಆಸೀಸ್ ಸೋತರೆ, ಪಾಕ್ಗೆ ನಂ. 1 ಪಟ್ಟವನ್ನು ಬಿಟ್ಟುಕೊಡಲಿದೆ. ಭಾರತ ಈಗ ಏಷ್ಯಾಕಪ್ ಗೆದ್ದರೂ ನಂ. 1 ಪಟ್ಟ ಒಲಿಯದು ಆದರೆ, ನಂತರ ಆಸ್ಟ್ರೆಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಗೆದ್ದರೆ ವಿಶ್ವಕಪ್ಗೆ ಮುನ್ನ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಇತ್ತ ಆಸೀಸ್ಗೆ ದಕ್ಷಿಣ ಆಫ್ರಿಕಾ ವಿರುದ್ಧ ಕೊನೇ ಪಂದ್ಯ ಮತ್ತು ಭಾರತ ವಿರುದ್ಧ ಸರಣಿ ಗೆದ್ದರೆ ವಿಶ್ವಕಪ್ವರೆಗೂ ನಂ. 1 ಪಟ್ಟ ಕಾಯ್ದುಕೊಳ್ಳಬಹುದಾಗಿದೆ.
ಪಾಕ್ಗೆ ಮತ್ತೆ ನಂ. 1 ಪಟ್ಟ ಒಲಿಯಬೇಕಾದರೆ ಭಾರತ ಏಷ್ಯಾಕಪ್ ಫೈನಲ್ ಮತ್ತು ಆಸೀಸ್ ವಿರುದ್ಧ ಸರಣಿ ಸೋಲಬೇಕು ಮತ್ತು ಆಸೀಸ್ ದಕ್ಷಿಣ ಆಫ್ರಿಕಾ ವಿರುದ್ಧ ಕಡೇ ಪಂದ್ಯ ಸೋಲಬೇಕು ಅಥವಾ ಭಾರತ ವಿರುದ್ಧ ಸರಣಿ ಕ್ಲೀನ್ಸ್ವೀಪ್ ಸಾಧಿಸಬಾರದು.