ಕ್ಲಾಸೆನ್​-ಮಿಲ್ಲರ್​ ಅತಿವೇಗದ ದ್ವಿಶತಕದ ಜತೆಯಾಟ ಸಾಧನೆ; ಆಸೀಸ್​ ಎದುರು ಸಮಬಲ ಸಾಧಿಸಿದ ದಕ್ಷಿಣ ಆಫ್ರಿಕಾ

sa vs aus
Published on

ಸೆಂಚುರಿಯನ್​: ಹೆನ್ರಿಕ್​ ಕ್ಲಾಸೆನ್​-ಡೇವಿಡ್​ ಮಿಲ್ಲರ್​ ಜೋಡಿ 94 ಎಸೆತಗಳಲ್ಲೇ 222 ರನ್​ ಸಿಡಿಸಿ ಅತಿವೇಗದ ದ್ವಿಶತಕದ ಜತೆಯಾಟದ ವಿಶ್ವದಾಖಲೆ ಬರೆದ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ ಏಕದಿನ ಸರಣಿಯ 4ನೇ ಪಂದ್ಯದಲ್ಲಿ 164 ರನ್​ಗಳಿಂದ ಜಯಿಸಿದೆ. ಇದರಿಂದ 5 ಪಂದ್ಯಗಳ ಸರಣಿ 2-2 ಸಮಬಲಗೊಂಡಿದ್ದು, ನಿರ್ಣಾಯಕ ಅಂತಿಮ ಪಂದ್ಯ ಭಾನುವಾರ ಜೊಹಾನ್ಸ್​ರ್ಬಗ್​ನಲ್ಲಿ ನಡೆಯಲಿದೆ.

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆಸೀಸ್​ 5 ವಿಕೆಟ್​ಗೆ 416 ರನ್​ ಪೇರಿಸಿದರೆ, ಆಸೀಸ್​ 34.5 ಓವರ್​ಗಳಲ್ಲಿ 252 ರನ್​ಗಳಿಗೆ ಆಲೌಟ್​ ಆಗಿ ಶರಣಾಯಿತು. ಕ್ಲಾಸೆನ್​-ಮಿಲ್ಲರ್​ ಜೋಡಿಯ ಜತೆಯಾಟವು, 2019ರಲ್ಲಿ ಇಂಗ್ಲೆಂಡ್​ನ ಜೋಸ್​ ಬಟ್ಲರ್​-ಇವೊಯಿನ್​ ಮಾರ್ಗನ್​ ನಡುವಿನ ದ್ವಿಶತಕದ ಜತೆಯಾಟದ ದಾಖಲೆಯನ್ನು ಮುರಿಯಿತು. ಕ್ಲಾಸೆನ್​-ಮಿಲ್ಲರ್​ ಓವರ್​ಗೆ 14.47ರ ಸರಾಸರಿಯಲ್ಲಿ ರನ್​ ದೋಚಿದರೆ, ಬಟ್ಲರ್​-ಮಾರ್ಗನ್​ ವೆಸ್ಟ್​ ಇಂಡೀಸ್​ ಎದುರು 10.03ರ ಸರಾಸರಿಯಲ್ಲಿ 204 ರನ್​ (122 ಎಸೆತ) ಸೇರಿಸಿದ್ದರು. ಇನ್ನು ಕ್ಲಾಸೆನ್​ (174) 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಿದ ಬ್ಯಾಟರ್​ನ 2ನೇ ಗರಿಷ್ಠ ರನ್​ ಗಳಿಕೆಯ ಸಾಧನೆ ಮಾಡಿದರು. 1983ರ ವಿಶ್ವಕಪ್​ನಲ್ಲಿ ಕಪಿಲ್​ ದೇವ್​ ಜಿಂಬಾಬ್ವೆ ವಿರುದ್ಧ ಅಜೇಯ 175 ರನ್​ ಬಾರಿಸಿರುವುದು ಈಗಲೂ ಗರಿಷ್ಠವಾಗಿ ಉಳಿದಿದೆ.

ದಕ್ಷಿಣ ಆಫ್ರಿಕಾ: 5 ವಿಕೆಟ್​ಗೆ 416 (ಕ್ಲಾಸೆನ್​ 174, ಮಿಲ್ಲರ್​ 82*), ಆಸ್ಟ್ರೆಲಿಯಾ: 34.5 ಓವರ್​ಗಳಲ್ಲಿ 252 (ಕ್ಯಾರಿ 99, ಎನ್​ಗಿಡಿ 51ಕ್ಕೆ 4, ರಬಾಡ 41ಕ್ಕೆ 3).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net