

Rohit & Virat: ಇತ್ತೀಚೆಗಷ್ಟೇ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿ ಟೂರ್ನಿ, ರೋಹಿತ್ ಶರ್ಮ ಪಡೆ ಗೆಲುವಿನ ಮೂಲಕ ಯಶಸ್ವಿಯಾಗಿ ಕೊನೆಗೊಂಡಿತು. ಇದು ಅಪಾರ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಳಿಸಿತು. 2025ರ ಚಾಂಪಿಯನ್ಸ್ ಆಗಿ ಕೋಟ್ಯಂತರ ಭಾರತೀಯರ ಹೃದಯ ಗೆದ್ದ ಟೀಮ್ ಇಂಡಿಯಾ, ಪ್ರತಿಷ್ಠಿತ ಐಸಿಸಿ ಟ್ರೋಫಿ ಎತ್ತಿಹಿಡಿದಿದ್ದು ಇತಿಹಾಸ.
2024ರಲ್ಲಿ ಕ್ಯಾಪ್ಟನ್ ಆಗಿ ತಂಡವನ್ನು ಗೆಲುವಿನ ಹಾದಿಗೆ ಮುನ್ನಡೆಸಿದ ರೋಹಿತ್ ಶರ್ಮ, ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ, ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ತವರಿಗೆ ತಂದರು. ಅದಾದ ನಂತರ ಈಗ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತೀಯರಿಗೆ ಉಡುಗೊರೆಯಾಗಿ ನೀಡಿರುವ ರೋಹಿತ್, ಮಹೇಂದ್ರ ಸಿಂಗ್ ಧೋನಿ ಮತ್ತು ಸೌರವ್ ಗಂಗೂಲಿ ನಂತರದಲ್ಲಿ ಐಸಿಸಿ ಟ್ರೋಫಿ ಗೆದ್ದ ಯಶಸ್ವಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.
ಇಡೀ ದೇಶವೇ ರೋಹಿತ್ ನಾಯಕತ್ವವನ್ನು ಕೊಂಡಾಡುತ್ತಿದೆ. ಈ ಸಾಲಿಗೆ ಇದೀಗ ಮಾಜಿ ಹಿರಿಯ ಆಟಗಾರ ಯೋಗರಾಜ್ ಸಿಂಗ್ ಕೂಡ ಸೇರಿದ್ದಾರೆ. "ರೋಹಿತ್ ವಿಷಯದಲ್ಲಿ ನನಗೆ ಬಹಳ ಇಷ್ಟವಾದ ಸಂಗತಿ ಎಂದರೆ ಅದು ಮುಂದುವರಿಯುವ ಗುಣ. ಎಲ್ಲರೂ ನಿವೃತ್ತಿ ಕುರಿತಂತೆ ಶರ್ಮ ಬೆನ್ನತ್ತಿದ್ದರು. ಆದರೆ, ತಾನು ನಿವೃತ್ತಿ ಪಡೆಯುತ್ತಿಲ್ಲ. ನನ್ನ ಆಟವನ್ನು ಮುಂದುವರಿಸಲು ಬಯಸಿದ್ದೇನೆ ಎಂದು ಹೇಳಿದ್ದು ನನ್ನಲ್ಲಿ ಅತೀವ ಖುಷಿ ತಂದಿದೆ. ಮೆಚ್ಚಿದೆ ಮಗನೇ. ರೋಹಿತ್ ಮತ್ತು ವಿರಾಟ್ರನ್ನು ನಿವೃತ್ತಿಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದರು.
"ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ನಿಮ್ಮಬ್ಬರಿಗೂ ನಿವೃತ್ತಿ ಸಮಯ ಇನ್ನೂ ದೂರವಿದೆ. ನೀವೇನಾದರೂ ನಿವೃತ್ತಿ ಘೋಷಿಸುವ ಬಗ್ಗೆ ಚಿಂತಿಸಿದರೆ, 2027ರ ಏಕದಿನ ವಿಶ್ವಕಪ್ ಗೆದ್ದ ನಂತರವೇ ಘೋಷಿಸಿ" ಎಂದು ಸಲಹೆ ನೀಡಿದರು,(ಏಜೆನ್ಸೀಸ್).