ಕರೊನಾ ಸೋಂಕಿನ ಭೀತಿ: ಜೂ. 7ರವರೆಗೆ ಟೆನಿಸ್ ಟೂರ್ನಿಗಳಿಲ್ಲ

tennis mar 20
Published on

ವಾಷಿಂಗ್ಟನ್: ಮಾರಕ ಕರೊನಾ ಸೋಂಕಿನ ಭೀತಿಯಿಂದಾಗಿ ಎಲ್ಲ ಪುರುಷರ ಮತ್ತು ಮಹಿಳಾ ವೃತ್ತಿಪರ ಟೆನಿಸ್ ಟೂರ್ನಿಗಳನ್ನು ಜೂನ್ 7ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕ್ಲೇ-ಕೋರ್ಟ್ ಋತುವಿನ ಎಲ್ಲ ಟೂರ್ನಿಗಳನ್ನು ನಿಗದಿಯಂತೆ ನಡೆಸದಿರಲು ನಿರ್ಧರಿಸಿರುವುದಾಗಿ ಪುರುಷರ ವೃತ್ತಿಪರ ಟೆನಿಸ್ ಸಂಸ್ಥೆ ಎಟಿಪಿ ಮತ್ತು ಮಹಿಳೆಯರ ಟೆನಿಸ್ ಸಂಸ್ಥೆ ಡಬ್ಲ್ಯುಟಿಎ ಗುರುವಾರ ಜಂಟಿಯಾಗಿ ಪ್ರಕಟಿಸಿವೆ.

ಕ್ಲೇ-ಕೋರ್ಟ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಫ್ರೆಂಚ್ ಓಪನ್ ಈಗಾಗಲೆ ಮೇನಿಂದ ಸೆಪ್ಟೆಂಬರ್​ಗೆ ಮುಂದೂಡಲ್ಪಟ್ಟಿದೆ. ಈ ಮುನ್ನ ಏಪ್ರಿಲ್ ಅಂತ್ಯದವರೆಗೆ ಎಲ್ಲ ವೃತ್ತಿಪರ ಟೆನಿಸ್ ಚಟುವಟಿಕೆಗಳನ್ನು ನಿಲ್ಲಿಸಲು ನಿರ್ಧರಿಸಲಾಗಿತ್ತು. ಮ್ಯಾಡ್ರಿಡ್, ರೋಮ್ ಮಾಸ್ಟರ್ಸ್ ಸಹಿತ ಹಲವು ಪುರುಷರ ಮತ್ತು ಟೆನಿಸ್ ಟೂರ್ನಿಗಳಿಗೆ ಕರೊನಾ ಹೊಡೆತ ಬಿದ್ದಿದೆ. ಏಪ್ರಿಲ್​ನಿಂದ ಕ್ಲೇ-ಕೋರ್ಟ್ ಟೂರ್ನಿಗಳು ಆರಂಭಗೊಳ್ಳಬೇಕಾಗಿತ್ತು. ಸ್ಟಾಸ್​ಬರ್ಗ್, ಫ್ರಾನ್ಸ್, ರಾಬಟ್, ಮೊರೊಕ್ಕೊದಲ್ಲಿ ನಡೆಯಬೇಕಿದ್ದ ಡಬ್ಲ್ಯುಟಿಎ ಮತ್ತು ಮ್ಯೂನಿಚ್, ಇಸ್ಟ್ರೋರಿಲ್, ಪೋರ್ಚುಗಲ್, ಜೆನೆವಾ ಮತ್ತು ಲ್ಯಾನ್​ನಲ್ಲಿ ನಡೆಯಬೇಕಿದ್ದ ಎಟಿಪಿ ಟೂರ್ನಿಗಳು ರದ್ದುಗೊಂಡಿವೆ. ಇದರಿಂದಾಗಿ ಎಟಿಪಿ ಮತ್ತು ಡಬ್ಲ್ಯುಟಿಎ ರ್ಯಾಂಕಿಂಗ್​ಗಳನ್ನೂ ಸದ್ಯದ ಮಟ್ಟಿಗೆ ತಾತ್ಕಾಲಿಕವಾಗಿ ನಿಷ್ಕಿ ›ಯಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಟೆನಿಸ್ ಒಕ್ಕೂಟವೂ (ಐಟಿಎಫ್) ಜೂನ್ 7ರವರೆಗೆ ಎಲ್ಲ ಮಟ್ಟದ ಟೂರ್ನಿಗಳನ್ನೂ ಸ್ಥಗಿತಗೊಳಿಸಿದೆ.

ಸದ್ಯದ ಮಟ್ಟಿಗೆ ಜೂನ್ 8ರ ನಂತರ ನಡೆಯಬೇಕಿರುವ ಎಲ್ಲ ಟೂರ್ನಿಗಳನ್ನು ನಿಗದಿಯಂತೆಯೇ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಜೂನ್ 29ರಿಂದ ಜುಲೈ 12ರವರೆಗೆ ನಿಗದಿಯಾಗಿದ್ದು, ಅದಕ್ಕೆ ಪೂರ್ವಭಾವಿಯಾಗಿ ಗ್ರಾಸ್ ಕೋರ್ಟ್ ಟೂರ್ನಿಗಳು ನಡೆಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net