ಟೀಮ್ ಇಂಡಿಯಾಗೂ ಆರ್ಥಿಕ ಬಿಕ್ಕಟ್ಟಿನ ಬಿಸಿ, ಕಿಟ್ ಪ್ರಾಯೋಜಕತ್ವ ಕೇಳೋರಿಲ್ಲ!

team india kit
Published on

ನವದೆಹಲಿ: ಕಳೆದ 2 ದಶಕಗಳಿಂದ ಭಾರತೀಯ ಕ್ರಿಕೆಟ್‌ನಲ್ಲಿ ಪ್ರಾಯೋಜಕತ್ವ ಹಕ್ಕುಗಳಿಗಾಗಿ ಪ್ರತಿಷ್ಠಿತ ಕಂಪನಿಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದ್ದವು. ಆದರೆ, ಕರೊನಾದಿಂದಾಗಿ ಎದುರಾಗಿರುವ ಹಾಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಿಂದಾಗಿ ಎಲ್ಲವೂ ಬದಲಾಗಿದ್ದು, ಟೀಮ್ ಇಂಡಿಯಾ ಕಿಟ್ ಪ್ರಾಯೋಜಕತ್ವ ಹಕ್ಕು ಪಡೆದುಕೊಳ್ಳಲು ಯಾವ ಕಂಪನಿಯೂ ಮುಂದೆ ಬಂದಿಲ್ಲ. ಇದರಿಂದಾಗಿ ಬಿಸಿಸಿಐ ಟೆಂಡರ್ ಪ್ರಕ್ರಿಯೆಯನ್ನೇ ಮುಂದೂಡಿದೆ. ಈಗಾಗಲೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಹಿಂದಿಗಿಂತ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿರುವ ಬಿಸಿಸಿಐಗೆ ಇದು ಮತ್ತೊಂದು ಹೊಡೆತವಾಗಿದೆ.

2006ರಿಂದಲೂ ನೈಕಿ ಕಂಪನಿ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕತ್ವ ಹೊಂದಿತ್ತು ಮತ್ತು 4 ವರ್ಷಗಳ ಹಿಂದಿನ ಕೊನೆಯ ಒಪ್ಪಂದದ ಅನ್ವಯ ಬಿಸಿಸಿಐಗೆ, ಭಾರತ ತಂಡದ ಪ್ರತಿ ಪಂದ್ಯಕ್ಕೆ 85 ಲಕ್ಷ ರೂ. ಪಾವತಿಸುತ್ತಿತ್ತು. ನೈಕಿ ಕಂಪನಿ ಹಾಲಿ ಆರ್ಥಿಕ ಸಂಕಷ್ಟದಿಂದಾಗಿ ಒಪ್ಪಂದವನ್ನು ಮುಂದುವರಿಸಲಾಗಿಲ್ಲ. ಹೀಗಾಗಿ ಆಗಸ್ಟ್ ಅಂತ್ಯದಲ್ಲಿ ಬಿಸಿಸಿಐ ಬಿಡ್ ಆಹ್ವಾನಿಸಿತ್ತು ಮತ್ತು ಹಾಲಿ ಆರ್ಥಿಕ ಮುಗ್ಗಟ್ಟಿನ ಸ್ಥಿತಿ ಮನಗಂಡು ಪ್ರತಿ ಪಂದ್ಯಕ್ಕೆ ಹಿಂದಿಗಿಂತ ಕಡಿಮೆ ಅಂದರೆ 65 ಲಕ್ಷ ರೂ. ನಿಗದಿಪಡಿಸಿತ್ತು. ಆದರೂ ಯಾವ ಕಂಪನಿ ಕೂಡ ಬಿಡ್ ಸಲ್ಲಿಸಲು ಆಸಕ್ತಿ ತೋರದಿರುವುದು ಅಚ್ಚರಿಯಾಗಿದೆ.

ನೈಕಿ ಜತೆಗೆ ಅಡಿಡಾಸ್, ಪೂಮಾ ಮತ್ತು ಫ್ಯಾನ್‌ಕೋಡ್ ಕೂಡ ಕಿಟ್ ಪ್ರಾಯೋಜಕತ್ವ ಸಲ್ಲಿಸಲು ಮುಂದೆ ಬಂದಿದ್ದರೂ, ಯಾವುದೇ ಬಿಡ್ ಮೊತ್ತವನ್ನು ಸಲ್ಲಿಸಿಲ್ಲ ಎನ್ನಲಾಗಿದೆ. ಹೀಗಾಗಿ ಬಿಸಿಸಿಐ, ಹಾಲಿ ಪರಿಸ್ಥಿತಿ ಸುಧಾರಿಸಿದ ಬಳಿಕ ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಕಿಟ್ ಪ್ರಾಯೋಜಕತ್ವದ ಟೆಂಡರ್ ಆಹ್ವಾನಿಸಲು ಬಯಸಿದೆ ಎನ್ನಲಾಗಿದೆ. ಒಂದು ವೇಳೆ ಆಗಲೂ ಯಾರೂ ಆಸಕ್ತಿ ತೋರದಿದ್ದರೆ, ಭಾರತ ತಂಡ ವರ್ಷಾಂತ್ಯದ ಆಸ್ಟ್ರೇಲಿಯಾ ಪ್ರವಾಸಕ್ಕೆ ಕಿಟ್ ಪ್ರಾಯೋಜಕರಿಲ್ಲದೆ ತೆರಳಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net