ಐಪಿಎಲ್ ಪಂದ್ಯಗಳನ್ನು ಮೊಹಾಲಿಯಿಂದ ದೂರವಿಟ್ಟ ಕಾರಣ ಬಹಿರಂಗ

ipl web
Published on

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ವೇದಿಕೆಯಾಗುವ ಭೀತಿಯಿಂದ ಬಿಸಿಸಿಐ, ಮೊಹಾಲಿಯನ್ನು ಐಪಿಎಲ್ ಆತಿಥ್ಯದಿಂದ ಹೊರಗಿಟ್ಟಿದೆ ಎಂದು ವರದಿಯಾಗಿದೆ.

ಐಪಿಎಲ್ ಪಂದ್ಯದ ವೇಳೆ ಮೊಹಾಲಿ ಸ್ಟೇಡಿಯಂನ ಒಳಗೆ ಅಥವಾ ಹೊರಗೆ ಯಾವುದೇ ರೀತಿಯಲ್ಲಿ ರೈತರ ಪ್ರತಿಭಟನೆ ನಡೆದರೆ ಅದು ವಿಶ್ವದೆಲ್ಲೆಡೆಯ ಮಾಧ್ಯಮಗಳ ಗಮನ ಸೆಳೆಯಲಿದೆ. ಇದು ಐಪಿಎಲ್ ಹೆಸರು ಕೆಡಿಸಲಿದೆ ಎಂಬ ಭೀತಿಯಿಂದಾಗಿ ಮೊಹಾಲಿಯನ್ನು ಐಪಿಎಲ್ ಪಂದ್ಯಗಳನ್ನು ನಡೆಸುವ ತಾಣಗಳ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಸಿಸಿಐ ಹಾಲಿ ಯೋಜನೆಯ ಅನ್ವಯ ಬೆಂಗಳೂರು, ಅಹಮದಾಬಾದ್, ಕೋಲ್ಕತ, ದೆಹಲಿ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲಾಗುವುದು. ಮಹಾರಾಷ್ಟ್ರದಲ್ಲಿ ಕರೊನಾ ಪ್ರಕರಣಗಳ ಏರಿಕೆಯಿಂದ ಸದ್ಯ ಮುಂಬೈಯನ್ನು ಕೂಡ ಪಟ್ಟಿಯಿಂದ ಹೊರಗಿಡಲಾಗಿದೆ. ಪಂಜಾಬ್ ಕಿಂಗ್ಸ್ ತಂಡಕ್ಕೆ ಮೊಹಾಲಿ ತವರು ತಾಣವಾಗಿದೆ. ಆದರೆ ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪಂಜಾಬ್‌ನ ರೈತರೇ ಹೆಚ್ಚಾಗಿ ಪಾಲ್ಗೊಂಡಿರುವುದರಿಂದ ಅಲ್ಲಿ ಬಿಸಿಸಿಐಗೆ ಮುಜುಗರವಾಗುವ ಅಪಾಯ ಹೆಚ್ಚಿದೆ.

ಕಳೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲೂ ಇದೇ ಭೀತಿಯಿಂದ ಮೊಹಾಲಿಯಲ್ಲಿ ಪಂದ್ಯಗಳನ್ನು ಆಯೋಜಿಸಿರಲಿಲ್ಲ. ಐಪಿಎಲ್ ತಾಣಗಳ ಪಟ್ಟಿಯನ್ನು ಮೊಹಾಲಿಯನ್ನು ಕೈಬಿಟ್ಟ ಬಗ್ಗೆ ಈಗಾಗಲೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮಾಲೀಕರು ಮತ್ತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net