ಮಹಾಯುದ್ಧದ ಸಮಯದಲ್ಲೂ ಆಟ ನಡೆದಿರಲಿಲ್ಲ: ಕ್ರೀಡೆಗೆ ವಿರಾಮ!

sports 15 mar 20
Published on

ಳೆ ಬಂದಾಗ ಅಥವಾ ಪ್ರತಿಕೂಲ ಹವಾಮಾನವಿದ್ದಾಗ ಕ್ರೀಡೆಗೆ ತೊಂದರೆಯಾಗುವುದು ಸಾಮಾನ್ಯ. ಕೆಲವೊಮ್ಮೆ ಭೂಕಂಪ, ಪ್ರವಾಹ, ಚಂಡಮಾರುತ ಸಹಿತ ಪ್ರಕೃತಿ ವಿಕೋಪಗಳಾದಾಗಲೂ ಪಂದ್ಯ, ಟೂರ್ನಿ, ಕ್ರೀಡಾಕೂಟಗಳನ್ನು ನಡೆಸುವುದು ಅಸಾಧ್ಯವಾಗುತ್ತದೆ.

ಆದರೆ ಈಗ ಸಾಂಕ್ರಾಮಿಕ ಪಿಡುಗಿನಿಂದ ವಿಶ್ವದೆಲ್ಲೆಡೆ ಉಂಟಾಗಿರುವ ಆರೋಗ್ಯ ತುರ್ತು ಪರಿಸ್ಥಿತಿಯಿಂದ ಕ್ರೀಡೆಗೆ ಆಗಿರುವ ತೊಂದರೆ ಅಪಾರವಾದುದು. ಮೊದಲಿಗೆ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸುವ ಮೂಲಕ ಕರೊನಾ ಭೀತಿಯನ್ನು ಲೆಕ್ಕಿಸದೆ ಕ್ರೀಡಾ ಚಟುವಟಿಕೆಗಳು ಮುಂದುವರಿದಿದ್ದವು. ಆದರೆ ವಿಶ್ವ ಆರೋಗ್ಯ ಸಂಸ್ಥೆಯೇ ಕರೊನಾವನ್ನು ಸಾಂಕ್ರಾಮಿಕ ಪಿಡುಗು ಎಂದು ಪರಿಗಣಿಸಿದ ಮತ್ತು ಇಟಲಿ, ಅಮೆರಿಕದಂಥ ದೇಶಗಳೇ ಕರೊನಾದಿಂದ ಕಂಗೆಟ್ಟ ಬಳಿಕ ಕ್ರೀಡಾ ಚಟುವಟಿಕೆಗಳೇ ಸ್ತಬ್ಧಗೊಂಡಿವೆ.

ಸದ್ಯಕ್ಕೆ ಏಪ್ರಿಲ್ ಅಂತ್ಯದವರೆಗೆ ಯಾವುದೇ ಪ್ರಮುಖ ಕ್ರೀಡಾಕೂಟವನ್ನು ನಡೆಸಲಾಗದ ಪರಿಸ್ಥಿತಿ ವಿಶ್ವದ ಎಲ್ಲ ಕಡೆ ಇದೆ. ಕ್ರೀಡಾ ಜಗತ್ತು ಈ ರೀತಿ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಕ್ರೀಡೆಗಳಿಗೂ ಹೊಡೆತ ಬಿದ್ದ ದೃಷ್ಟಾಂತಗಳಿವೆ.

ಮಹಾಯುದ್ಧದಿಂದ ಹೊಡೆತ: ಈ ಹಿಂದೆ ಮಹಾಯುದ್ಧದ ಸಮಯಗಳಲ್ಲಿ ಮೊದಲ ಬಾರಿ ಜಗತ್ತಿನ ಬಹುತೇಕ ದೇಶಗಳಲ್ಲಿ ಕ್ರೀಡಾ ಚಟುವಟಿಕೆಗಳೇ ಸ್ಥಗಿತಗೊಂಡಿದ್ದವು. ಇದರಿಂದಾಗಿ ಮೂರು ಆವೃತ್ತಿಯ ಒಲಿಂಪಿಕ್ಸ್ ಕ್ರೀಡಾಕೂಟಗಳೇ ರದ್ದುಗೊಂಡಿದ್ದವು. 1916ರಲ್ಲಿ ಬರ್ಲಿನ್​ನಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಒಂದನೇ ಮಹಾಯುದ್ಧದಿಂದಾಗಿ ರದ್ದುಗೊಂಡಿತ್ತು. 1940ರಲ್ಲಿ ಟೋಕಿಯೊದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್, 2ನೇ ಮಹಾಯುದ್ಧದ ಕಾರಣದಿಂದಾಗಿ ರದ್ದುಗೊಂಡಿತ್ತು. 1944ರಲ್ಲಿ ಲಂಡನ್​ನಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕೂಡ ಇದೇ ಕಾರಣದಿಂದಾಗಿ ರದ್ದಾಗಿತ್ತು. ಇದರಿಂದಾಗಿ 1936ರ ಬರ್ಲಿನ್ ಒಲಿಂಪಿಕ್ಸ್​ನಲ್ಲಿ 100 ಮೀಟರ್ ಓಟದಲ್ಲಿ 10.3 ಸೆಕೆಂಡ್​ಗಳಲ್ಲಿ ಓಡಿ ಚಿನ್ನ ಗೆದ್ದ ಅಮೆರಿಕದ ಅಥ್ಲೀಟ್ ಜೆಸ್ಸಿ ಓವನ್ಸ್​ಗೆ ಬಳಿಕ ಒಲಿಂಪಿಕ್ಸ್​ನಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ಅವಕಾಶ ಇಲ್ಲದಾಯಿತು. 2ನೇ ಮಹಾಯುದ್ಧದ ಸಮಯದಲ್ಲಿ 1936ರ ಒಲಿಂಪಿಕ್ಸ್ ಆಯೋಜಿಸಿದ್ದ ಕ್ರೀಡಾಂಗಣವನ್ನೇ ಬಂಕರುಗಳನ್ನು ಸ್ಥಾಪಿಸಲು ಉಪಯೋಗಿಸಲಾಗಿತ್ತು.

ಕ್ರಿಕೆಟ್​ಗೂ ಬಿದ್ದಿತ್ತು ಬ್ರೇಕ್!

ಐಪಿಎಲ್ ಜತೆಗೆ ವಿಶ್ವದ ಬಹುತೇಕ ಎಲ್ಲ ಕ್ರಿಕೆಟ್ ದೇಶಗಳಲ್ಲೂ ದೇಶೀಯ ಕ್ರಿಕೆಟ್​ಗೂ ಕರೊನಾದಿಂದಾಗಿ ಬ್ರೇಕ್ ಬಿದ್ದಿದೆ. ಕ್ರಿಕೆಟ್​ಗೆ ಈ ರೀತಿ ದಿಢೀರ್ ಬ್ರೇಕ್ ಬಿದ್ದಿರುವುದು ಹೊಸದಲ್ಲ. ಹಿಂದೆ ಮಹಾಯುದ್ಧದ ದಿನಗಳಲ್ಲೂ ಕ್ರಿಕೆಟ್​ಗೆ ಕಡಿವಾಣ ಬಿದ್ದಿತ್ತು. ಮೊದಲ ಮಹಾಯುದ್ಧದಿಂದಾಗಿ 1914ರಿಂದ 1920ರವರೆಗೆ 6 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಪೂರ್ಣ ಸ್ಥಗಿತಗೊಂಡಿತ್ತು. ನಂತರ 2ನೇ ಮಹಾಯುದ್ಧದ ಸಮಯದಲ್ಲಿ 1939ರ ಆಗಸ್ಟ್​ನಿಂದ 1946ರ ಮಾರ್ಚ್​ವರೆಗೆ ಸುಮಾರು 7 ವರ್ಷಗಳ ಕಾಲ ಕ್ರಿಕೆಟ್ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿತ್ತು.

ಉಗ್ರರ ದಾಳಿ ಸಮಸ್ಯೆ

2001ರ ಸೆಪ್ಟೆಂಬರ್ 11ರಂದು ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಉಗ್ರರ ದಾಳಿ ನಡೆದಾಗ ಅಮೆರಿಕದಲ್ಲಿ ಬಹುತೇಕ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಅಮೆರಿಕದ ಪ್ರತಿಷ್ಠಿತ ಬೇಸ್​ಬಾಲ್, ಬಾಸ್ಕೆಟ್​ಬಾಲ್, ಫುಟ್​ಬಾಲ್ ಟೂರ್ನಿಗಳು ಆ ಸಮಯದಲ್ಲಿ ರದ್ದುಗೊಂಡಿದ್ದವು. ಬಳಿಕ ಕ್ರೀಡಾ ಚಟುವಟಿಕೆಗಳು ಸಹಜಸ್ಥಿತಿಗೆ ಬರಲು ಬಹಳ ಸಮಯ ಹಿಡಿದಿತ್ತು. 2008ರಲ್ಲಿ ಮುಂಬೈನಲ್ಲಿ ಉಗ್ರರ ದಾಳಿ ನಡೆದಾಗ ಭಾರತದಲ್ಲಿ ನಡೆಯುತ್ತಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಅಕಾಲಿಕ ಅಂತ್ಯ ಬಿದ್ದಿತ್ತು. ಕೆಲ ಸಮಯದ ನಂತರ ಇಂಗ್ಲೆಂಡ್ ತಂಡ ಭಾರತಕ್ಕೆ ಮರಳಿ ಟೆಸ್ಟ್ ಸರಣಿಯಲ್ಲಿ ಆಡಿತ್ತು. ಇನ್ನು 2009ರಲ್ಲಿ ಲಾಹೋರ್​ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಉಗ್ರರ ದಾಳಿ ನಡೆದ ಬಳಿಕ ಪಾಕಿಸ್ತಾನಕ್ಕೆ ಇತ್ತೀಚೆಗಿನ ವರೆಗೂ ಕ್ರೀಡಾ ಚಟುವಟಿಕೆಗಳನ್ನು ಸಹಜಸ್ಥಿತಿಗೆ ತರಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ 2011ರ ಏಕದಿನ ವಿಶ್ವಕಪ್​ನ ಜಂಟಿ ಆತಿಥ್ಯ ಪಾಕಿಸ್ತಾನದ ಕೈತಪ್ಪಿದ್ದರೆ, ಈಗಲೂ ಹಲವು ದೇಶಗಳ ಕ್ರೀಡಾ ತಂಡಗಳು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿವೆ.

ಕ್ಯಾಂಡಿಡೇಟ್ ಚೆಸ್ ಟೂರ್ನಿಗೆ ತಡೆಯಿಲ್ಲ

ಯಕಟರಿನ್​ಬರ್ಗ್: ಕರೊನಾ ಭೀತಿಯಿಂದಾಗಿ ವಿಶ್ವದೆಲ್ಲಡೆ ಹಲವು ಪ್ರಮುಖ ಕ್ರೀಡಾಕೂಟಗಳು ಮುಂದೂಡಿಕೆಯಾಗಿರುವ ನಡುವೆ 2020ರ ಕ್ಯಾಂಡಿಡೇಟ್ ಚೆಸ್ ಟೂರ್ನಿ ರಷ್ಯಾದಲ್ಲಿ ನಿಗದಿಯಂತೆಯೇ ಸಾಗಲಿದೆ. ಹಾಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್​ಸೆನ್​ಗೆ ವಿಶ್ವ ಚೆಸ್ ಚಾಂಪಿಯನ್​ಷಿಪ್​ನಲ್ಲಿ ಸವಾಲೊಡ್ಡುವ ಆಟಗಾರನನ್ನು ಆಯ್ಕೆ ಮಾಡುವ ಪ್ರತಿಷ್ಠಿತ ಟೂರ್ನಿ ಇದಾಗಿದೆ. ಮಾರ್ಚ್ 17ರಿಂದ ಏಪ್ರಿಲ್ 4ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ 8 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಚೀನಾದ ಇಬ್ಬರು ಆಟಗಾರರಾದ ಡಿಂಗ್ ಲಿರೆನ್ ಮತ್ತು ವಾಂಗ್ ಹಾವೊ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಿಬ್ಬರು ತವರಿನಿಂದ ಹೊರಗೆ ಉಳಿದುಕೊಂಡು ಟೂರ್ನಿಗೆ ಸಿದ್ಧತೆ ನಡೆಸಿದ್ದಾರೆ. ರಷ್ಯಾ ಫೆ. 19ರಿಂದ ಚೀನಾ ಪ್ರಜೆಗಳಿಗೆ ನಿರ್ಬಂಧ ಹೇರಿದ್ದರೂ, ಇವರಿಬ್ಬರಿಗೆ ಟೂರ್ನಿಯಲ್ಲಿ ಭಾಗವಹಿಸಲು ವಿಶೇಷ ಅನುಮತಿ ನೀಡಲಾಗಿದೆ. ಈ ನಡುವೆ ಅಜರ್​ಬೈಜಾನ್​ನ ಆಟಗಾರ ತೈಮೋರ್ ರಜಬೋವ್ ಸೋಂಕಿನ ಭೀತಿಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದು, ಅವರ ಬದಲಿಗೆ ಫ್ರಾನ್ಸ್​ನ ಮ್ಯಾಕ್ಸಿಮ್ ವಚೆರ್ ಲಾಗ್ರೇವ್ ಆಡಲಿದ್ದಾರೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು ಹ್ಯಾಂಡ್ ಶೇಕ್ ಮಾಡದೆಯೂ ಇರಬಹುದು ಎಂದು ಫಿಡೆ ತಿಳಿಸಿದೆ.

ಡಾನ್ ಬ್ರಾಡ್ಮನ್ ಆಟವೂ ನಿಂತಿತ್ತು!

ಆಟ ನಿಲ್ಲುವುದರಿಂದ ಹಲವು ಕ್ರೀಡಾಪಟುಗಳು ದಾಖಲೆ ಸುಧಾರಿಸಿಕೊಳ್ಳುವ ಅವಕಾಶದಿಂದಲೂ ವಂಚಿತರಾಗುತ್ತಾರೆ. 2ನೇ ಮಹಾಯುದ್ಧದ ಸಮಯದಲ್ಲಿ ಕ್ರಿಕೆಟ್ ಚಟುವಟಿಕೆ ಸಂಪೂರ್ಣವಾಗಿ ನಿಂತಿದ್ದ ಕಾರಣ ದಿಗ್ಗಜ ಬ್ಯಾಟ್ಸ್​ಮನ್ ಡಾನ್ ಬ್ರಾಡ್ಮನ್​ಗೆ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶವೇ ಇಲ್ಲದಾಗಿತ್ತು. ಬ್ರಾಡ್ಮನ್ 1928ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದರು. ಆದರೆ ಮಹಾಯುದ್ಧದಿಂದಾಗಿ ಅವರ ವೃತ್ತಿಜೀವನದ ಅಮೂಲ್ಯ 7 ವರ್ಷಗಳು ನಷ್ಟವಾಗಿದ್ದವು. ಇದರಿಂದಾಗಿ ಅವರು 20 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನವನ್ನು ಕೇವಲ 52 ಟೆಸ್ಟ್ ಪಂದ್ಯಗಳೊಂದಿಗೆ ಮುಗಿಸುವಂತಾಗಿತ್ತು. 2ನೇ ಮಹಾಯುದ್ಧದ ಬಳಿಕ ಮತ್ತೆ ಕ್ರಿಕೆಟ್ ಆರಂಭಗೊಂಡಾಗ ಅವರು 2 ವರ್ಷಗಳ ಕಾಲ ಮಾತ್ರ ಆಡಿ 1948ರಲ್ಲಿ ತಮ್ಮ 40ನೇ ವಯಸ್ಸಿನಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇಲ್ಲದಿದ್ದರೆ 29 ಶತಕ ಮತ್ತು 99.94ರ ಸರಾಸರಿಯ ಅಮೋಘ ವೃತ್ತಿಜೀವನದಲ್ಲಿ ಇನ್ನಷ್ಟು ದಾಖಲೆಗಳನ್ನು ಬರೆಯುವ ಅವಕಾಶ ಅವರದಾಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net