

ಮಹಾಮಾರಿ ಕರೊನಾ ಸೋಂಕಿನ ಭೀತಿಯಿಂದಾಗಿ ಜಾಗತಿಕ ಕ್ರೀಡಾ ಚಟುವಟಿಕೆಯೇ ಬಹುತೇಕ ಸ್ತಬ್ಧಗೊಂಡಿದೆ. ಭಾರತದಲ್ಲಿ ಕ್ರಿಕೆಟ್ ಸಹಿತ ಬಹುತೇಕ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದರೆ, ಜಗತ್ತಿನ ಇತರೆಡೆಗಳಲ್ಲಿ ದೊಡ್ಡ ದೊಡ್ಡ ಕ್ರೀಡಾಕೂಟಗಳೇ ರದ್ದುಗೊಂಡಿವೆ ಅಥವಾ ಮುಂದೂಡಲ್ಪಟ್ಟಿವೆ. ಇದರಿಂದಾಗಿ ಫುಟ್ಬಾಲ್, ಗಾಲ್ಪ್, ರಗ್ಬಿ, ಬಾಸ್ಕೆಟ್ಬಾಲ್, ಎಫ್1, ಟೆನಿಸ್, ಹಾಕಿ, ಟೇಬಲ್ ಟೆನಿಸ್, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಶೂಟಿಂಗ್, ಬಾಕ್ಸಿಂಗ್, ಕುಸ್ತಿ ಸಹಿತ ಎಲ್ಲ ಕ್ರೀಡಾ ಚಟುವಟಿಕೆಗಳು ಬಂದ್ ಆಗಿವೆ.
ಪ್ರತಿಷ್ಠಿತ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಸೇರಿದಂತೆ ಎಲ್ಲ ಬ್ಯಾಡ್ಮಿಂಟನ್ ಟೂರ್ನಿಗಳನ್ನು ಮಾರ್ಚ್ 16ರಿಂದ ಏಪ್ರಿಲ್ 12ರವರೆಗೆ ನಡೆಸದಿರಲು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ನಿರ್ಧರಿಸಿದೆ. ಈ ಅವಧಿಯಲ್ಲಿ ಸ್ವಿಸ್ ಓಪನ್, ಒರ್ಲೆಯಾನ್ಸ್ ಮಾಸ್ಟರ್ಸ್, ಮಲೇಷ್ಯಾ ಓಪನ್ ಹಾಗೂ ಸಿಂಗಾಪುರ ಓಪನ್ ಟೂರ್ನಿಗಳೂ ನಡೆಯಬೇಕಿತ್ತು. ಜತೆಗೆ ಗ್ರೇಡ್-3 ಮಟ್ಟದ ಹಲವು ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳನ್ನು ಮುಂದೂಡಲಾಗಿದೆ. ಇಂಗ್ಲೆಂಡ್ನ ಬರ್ವಿುಂಗ್ಹ್ಯಾಂನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ವಿಶ್ವ ಬ್ಯಾಡ್ಮಿಂಟನ್ ಚಟುವಟಿಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಭಾನುವಾರ (ಮಾ.15) ಆಲ್ ಇಂಗ್ಲೆಂಡ್ ಟೂರ್ನಿ ಫೈನಲ್ ನಡೆಯಲಿದೆ. ಕೋವಿಡ್-19ರಿಂದಾಗಿ ಪರಿಸ್ಥಿತಿ ಕೈಮೀರುತ್ತಿದ್ದು, ಆಟಗಾರರ ಹಾಗೂ ಪ್ರೇಕ್ಷಕರ ಹಿತ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ತಿಳಿಸಿದೆ. ಸದಸ್ಯ ರಾಷ್ಟ್ರಗಳು ಹಾಗೂ ಕಾಂಟಿನೆಂಟಲ್ ಕಾನ್ಪೆಡರೇಷನ್ಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ. ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮಾರ್ಚ್ 24 ರಿಂದ 29 ರವರೆಗೆ ನವದೆಹಲಿಯಲ್ಲಿ ಪ್ರೇಕ್ಷಕರಿಲ್ಲದೆ ಆಯೋಜಿಸಲು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಈ ಮೊದಲು ಚಿಂತಿಸಿತ್ತು. ಪ್ರಮುಖ ಟೂರ್ನಿಗಳ ಮುಂದೂಡಿಕೆಯಿಂದಾಗಿ ಒಲಿಂಪಿಕ್ಸ್ ಅರ್ಹತಾ ಸಮಯವನ್ನು ವಿಸ್ತರಿಸುವ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುವುದು ಎಂದು ಬಿಡಬ್ಲ್ಯುಎಫ್ ತಿಳಿಸಿದೆ.
ನವದೆಹಲಿ: ಮಾರ್ಚ್ ಮತ್ತು ಏಪ್ರಿಲ್ನಲ್ಲಿ ನಿಗದಿಯಾಗಿರುವ ಎಲ್ಲ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಮುಂದೂಡುವಂತೆ ಫಿಫಾ ಸೂಚಿಸಿದೆ. ಆದರೆ ಪಂದ್ಯಗಳನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಅಂತಿಮ ನಿರ್ಧಾರವನ್ನು ಸಂಘಟಕರಿಗೆ ಬಿಟ್ಟುಬಿಡಲು ನಿರ್ಧರಿಸಿದೆ. ಇದಲ್ಲದೆ, ಆಟಗಾರರನ್ನು ರಾಷ್ಟ್ರೀಯ ತಂಡಗಳಿಗೆ ಬಿಟ್ಟುಕೊಡದಿರುವ ಬಗ್ಗೆ ನಿರ್ಧರಿಸುವ ಅಧಿಕಾರವನ್ನು ಕ್ಲಬ್ ತಂಡಗಳಿಗೆ ನೀಡಿದೆ. ಫಿಫಾದ ಎಂದಿನ ನಿಯಮದ ಪ್ರಕಾರ, ಕ್ಲಬ್ ತಂಡಗಳು ಆಟಗಾರರನ್ನು ರಾಷ್ಟ್ರೀಯ ತಂಡಗಳಿಗೆ ಬಿಟ್ಟುಕೊಡುವುದು ಕಡ್ಡಾಯವಾಗಿದೆ. ಆದರೆ ಮಾರಕ ಸೋಂಕಿನ ಭೀತಿ ಇರುವ ಈ ಸಮಯದಲ್ಲಿ ಈ ನಿಯಮವನ್ನು ಫಿಫಾ ಸಡಿಲಿಸಿದೆ. ಏಷ್ಯಾ ಮತ್ತು ದಕ್ಷಿಣ ಅಮೆರಿಕದಲ್ಲಿ ಈಗಾಗಲೆ ಮುಂದೂಡಲ್ಪಟ್ಟಿರುವ 2022ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು, ಕರೊನಾ ಭೀತಿ ತಗ್ಗಿದ ಬಳಿಕ ಮರುನಿಗದಿ ಮಾಡುವ ಕೆಲಸವನ್ನು ಫಿಫಾ ನಿರ್ವಹಿಸಲಿದೆ. ಇಂಗ್ಲಿಷ್ ಪ್ರೀಮಿಯರ್ ಲೀಗ್, ಚಾಂಪಿಯನ್ಸ್ ಲೀಗ್ ಪಂದ್ಯಗಳೂ ಈಗಾಗಲೆ ರದ್ದುಗೊಂಡಿವೆ.
ಏಪ್ರಿಲ್ ಅಂತ್ಯದವರೆಗೆ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಲು ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ (ಐಟಿಟಿಎಫ್) ನಿರ್ಧರಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಿರುವುದರಿಂದ ಮತ್ತು ಜಗತ್ತಿನ ಎಲ್ಲೆಡೆ ಪ್ರಯಾಣ ನಿರ್ಬಂಧಗಳಿರುವುದರಿಂದ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ. ಕ್ರೀಡಾಪಟುಗಳು, ಕೋಚ್ಗಳು, ಅಧಿಕಾರಿಗಳು ಮತ್ತು ಅಭಿಮಾನಿಗಳ ಸುರಕ್ಷತೆ ನಮ್ಮ ಅಗ್ರ ಆದ್ಯತೆ ಎಂದು ಐಟಿಟಿಎಫ್ ತಿಳಿಸಿದೆ.