PHOTO | ಪುಣೆಯಲ್ಲಿ ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸಲು ಬೆಟ್ಟ ಏರಿದ ಕ್ರಿಕೆಟ್ ಪ್ರೇಮಿ!

fan web
Published on

ಪುಣೆ: ಕರೊನಾ ವೈರಸ್ ಹಾವಳಿಯಿಂದಾಗಿ ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವೆ ಪುಣೆಯಲ್ಲಿ ನಡೆಯುತ್ತಿರುವ ಏಕದಿನ ಪಂದ್ಯಗಳ ಸರಣಿಗೆ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿವೆ. ಆದರೂ ಟೀಮ್ ಇಂಡಿಯಾದ ಕಟ್ಟಾ ಅಭಿಮಾನಿ ಸುಧೀರ್ ಕುಮಾರ್ ಚೌಧರಿಗೆ ಪಂದ್ಯವನ್ನು ವೀಕ್ಷಿಸುವ ತುಡಿತವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಸುಧೀರ್ ಕುಮಾರ್ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವನ್ನು ವೀಕ್ಷಿಸಲು ವಿಶೇಷ ಸಾಹಸವೊಂದಕ್ಕೆ ಕೈಹಾಕಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪಂದ್ಯವನ್ನು ವೀಕ್ಷಿಸಿದ ಖುಷಿಯನ್ನೂ ಅನುಭವಿಸಿದ್ದಾರೆ. ಹಾಗಾದರೆ ಅವರೇನು ಮಾಡಿದರು ಗೊತ್ತೇ?

ಪುಣೆಯಲ್ಲಿ ಮಂಗಳವಾರ ನಡೆದ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಸುಧೀರ್, ಎಂಸಿಎ ಕ್ರೀಡಾಂಗಣದಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ದೊಡ್ಡ ಬೆಟ್ಟವನ್ನು ಏರಿದರು. ಅಲ್ಲಿಂದಲೇ ಕ್ರೀಡಾಂಗಣವನ್ನು ವೀಕ್ಷಿಸುತ್ತ ಪಂದ್ಯವನ್ನು ನೋಡಿದ ಆನಂದವನ್ನು ಅವರು ಅನುಭವಿಸಿದರು. ಎಂದಿನಂತೆಯೇ ತ್ರಿವರ್ಣ ಧ್ವಜವೂ ಅವರೊಂದಿಗೆ ಇತ್ತು.

ಭಾರತ ತಂಡ ಆಡುವ ಪ್ರತಿ ಪಂದ್ಯದ ವೇಳೆಯೂ ಕ್ರೀಡಾಂಗಣದಲ್ಲಿ ಹಾಜರಿರುವ ಕ್ರಿಕೆಟ್ ಪ್ರೇಮಿ ಸುಧೀರ್ ಕುಮಾರ್ ಚೌಧರಿ. ಮೈಮೇಲೆ ತ್ರಿವರ್ಣ ಬಳಿದುಕೊಂಡು ಪಂದ್ಯಕ್ಕೆ ಹಾಜರಾಗುವ ಸುಧೀರ್, ದಿಗ್ಗಜ ಸಚಿನ್ ತೆಂಡುಲ್ಕರ್ ಎಂದರೆ ಅಪಾರವಾದ ಪ್ರೀತಿ. ಹೀಗಾಗಿ ಮೈಮೇಲೆ ‘ತೆಂಡುಲ್ಕರ್’ ಎಂದೂ ಬರೆದುಕೊಂಡಿರುತ್ತಾರೆ. ಸಚಿನ್ ನಿವೃತ್ತಿಯ ಬಳಿಕ ಅದರೊಂದಿಗೆ ‘ಮಿಸ್ ಯೂ’ ಎಂದೂ ಬರೆದುಕೊಳ್ಳುತ್ತಿದ್ದಾರೆ. ಭಾರತ ತಂಡದ ವಿದೇಶಿ ಪ್ರವಾಸಗಳಿಗೂ ಅವರು ನಿಧಿ ಸಂಗ್ರಹಿಸಿ ಪ್ರವಾಸ ಕೈಗೊಳ್ಳುತ್ತಾರೆ.

ಈ ಮುನ್ನ ಶ್ರೀಲಂಕಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡಾಗ ಗಾಲೆ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಇಂಗ್ಲೆಂಡ್‌ನ ಕ್ರಿಕೆಟ್ ಪ್ರೇಮಿ ರಾಬ್ ಲೆವಿಸ್ ಕ್ರೀಡಾಂಗಣದ ಪಕ್ಕದಲ್ಲಿದ್ದ ಗಾಲೆ ಕೋಟೆಯನ್ನು ಏರಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ ಸರಣಿಯನ್ನು ವೀಕ್ಷಿಸಲು ಶ್ರೀಲಂಕಾಕ್ಕೆ ತೆರಳಿದ್ದ ಲೆವಿಸ್, ಬಳಿಕ ಕರೊನಾ ಹಾವಳಿಯಿಂದಾಗಿ 10 ತಿಂಗಳ ಕಾಲ ಅಲ್ಲೇ ಉಳಿದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net