ಯುವರಾಜ್​ ಸಿಂಗ್​ ನಂತರ ಆ ಸ್ಥಾನಕ್ಕೆ ಯಾರೂ ಬರಲೇ ಇಲ್ಲ ಎಂದ ರೋಹಿತ್​ ಶರ್ಮ

rohit-yuvraj web
Published on

ಮುಂಬೈ: ಏಷ್ಯಾಕಪ್​-ವಿಶ್ವಕಪ್​ ಪೂರ್ವಭಾವಿಯಾಗಿ ಭಾರತ ತಂಡದಲ್ಲಿ 4ನೇ ಕ್ರಮಾಂಕದ ಬಗ್ಗೆ ಗೊಂದಲವಿರುವುದನ್ನು ನಾಯಕ ರೋಹಿತ್​ ಶರ್ಮ ಒಪ್ಪಿಕೊಂಡಿದ್ದು, ಯುವರಾಜ್​ ಸಿಂಗ್​ ನಿವೃತ್ತಿಯ ನಂತರದಲ್ಲಿ ಯಾವ ಬ್ಯಾಟ್ಸ್​ಮನ್​ ಕೂಡ ಈ ಕ್ರಮಾಂಕವನ್ನು ಭದ್ರಪಡಿಸಿಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

2019ರ ವಿಶ್ವಕಪ್​ ವೇಳೆ ಭಾರತ ತಂಡಕ್ಕೆ 4ನೇ ಕ್ರಮಾಂಕದ ಬ್ಯಾಟರ್​ ಗೊಂದಲವೇ ಪ್ರಮುಖ ಹಿನ್ನಡೆಯಾಗಿತ್ತು. ಈ ಬಾರಿ ಮತ್ತೆ ವಿಶ್ವಕಪ್​ಗೆ ಎರಡು ತಿಂಗಳಷ್ಟೇ ಬಾಕಿ ಇರುವ ನಡುವೆ 4ನೇ ಕ್ರಮಾಂಕದ ಬ್ಯಾಟರ್​ ಯಾರು ಎಂಬ ಬಗ್ಗೆ ಭಾರತ ತಂಡ ಇನ್ನೂ ಸ್ಪಷ್ಟತೆ ಕಂಡುಕೊಂಡಿಲ್ಲ. ಈ ಕ್ರಮಾಂಕದಲ್ಲಿ ಇತ್ತೀಚೆಗೆ ಅವಕಾಶ ಪಡೆದ ಸೂರ್ಯಕುಮಾರ್​, ಸಂಜು ಸ್ಯಾಮ್ಸನ್​ ನಿರೀಕ್ಷಿತ ನಿರ್ವಹಣೆ ತೋರಿಲ್ಲ. ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್​ ಅಯ್ಯರ್​ ಈ ಕ್ರಮಾಂಕದಲ್ಲಿ ಆಡಿದ 20 ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿದ ದಾಖಲೆ ಹೊಂದಿದ್ದಾರೆ. ಅವರು 4ನೇ ಕ್ರಮಾಂಕದಲ್ಲಿ ಆಡಿದಾಗ 2 ಶತಕ ಮತ್ತು 5 ಅರ್ಧಶತಕಗಳ ಸಹಿತ 47.35ರ ಸರಾಸರಿಯಲ್ಲಿ 805 ರನ್​ ಬಾರಿಸಿದ್ದಾರೆ.

"4ನೇ ಕ್ರಮಾಂಕ ದೀರ್ಘಕಾಲದಿಂದ ನಮ್ಮನ್ನು ಕಾಡುತ್ತಿದೆ. ಯುವಿ ಬಳಿಕ ಯಾರೂ ಈ ಕ್ರಮಾಂಕದಲ್ಲಿ ನೆಲೆಯೂರಿಲ್ಲ. ಶ್ರೇಯಸ್​ ಈ ಕ್ರಮಾಂಕದಲ್ಲಿ ಉತ್ತಮ ನಿರ್ವಹಣೆ ತೋರಿದ್ದು, ಅವರ ಗಾಯದ ಸಮಸ್ಯೆ ನಮಗೂ ಹಿನ್ನಡೆ ತಂದಿದೆ ಎಂದು ರೋಹಿತ್​ ಶರ್ಮ ಹೇಳಿದ್ದಾರೆ. ಕನ್ನಡಿಗ ಕೆಎಲ್​ ರಾಹುಲ್​ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದಾಗ ವಿಕೆಟ್​ ಕೀಪಿಂಗ್​ ಜತೆಗೆ 5ನೇ ಕ್ರಮಾಂಕದಲ್ಲಿ ಆಡುವ ಸುಳಿವನ್ನೂ ರೋಹಿತ್​ ಶರ್ಮ ಬಿಟ್ಟುಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net