ನಿತೀಶ್​ ಆಲ್ರೌಂಡ್​ ಆಟ, ರಿಂಕು ಬಿರುಸಿನ ಬ್ಯಾಟಿಂಗ್​; ಬಾಂಗ್ಲಾ ಎದುರು ಟಿ20 ಸರಣಿ ಗೆದ್ದ ಟೀಮ್​ ಇಂಡಿಯಾ

web ind
Published on

ನವದೆಹಲಿ: ಯುವ ಆಟಗಾರ​ ನಿತೀಶ್​ ಕುಮಾರ್​ ರೆಡ್ಡಿ (74 ರನ್​, 34 ಎಸೆತ, 4 ಬೌಂಡರಿ, 7 ಸಿಕ್ಸರ್​, 23ಕ್ಕೆ 2 ವಿಕೆಟ್​) ಆಲ್ರೌಂಡ್​ ಆಟ ಹಾಗೂ ಎಡಗೈ ಬ್ಯಾಟರ್​ ರಿಂಕು ಸಿಂಗ್​ (53 ರನ್​, 29 ಎಸೆತ, 5 ಬೌಂಡರಿ, 3 ಸಿಕ್ಸರ್​) ಬಿರುಸಿನ ಅರ್ಧಶತಕದ ನೆರವಿನಿಂದ ರನ್​ಮಳೆ ಹರಿಸಿದ ಭಾರತ ತಂಡ ಎರಡನೇ ಟಿ20ಯಲ್ಲಿ ಪ್ರವಾಸಿ ಬಾಂಗ್ಲಾದೇಶ ಎದುರು 86 ರನ್​ಗಳ ಬೃಹತ್​ ಗೆಲುವು ದಾಖಲಿಸಿದೆ. ಇದರೊಂದಿಗೆ ಸೂರ್ಯಕುಮಾರ್​ ಬಳಗ ಕೊನೇ ಪಂದ್ಯ ಬಾಕಿಯಿರುವಂತೆಯೇ 2&0ಯಿಂದ ಸರಣಿ ಗೆದ್ದುಕೊಂಡಿದೆ. ಈ ಮೂಲಕ ಗೌತಮ್​ ಗಂಭೀರ್​ ಟೀಮ್​ ಇಂಡಿಯಾ ಕೋಚ್​ ಆಗಿ ತವರಿನ ಮೈದಾನದಲ್ಲಿ ಜಯದ ಸಂಭ್ರಮ ಕಂಡಿದ್ದಾರೆ. ಇದು 2022ರ ಬಳಿಕ ಟೀಮ್​ ಇಂಡಿಯಾಗೆ ತವರಿನಲ್ಲಿ ಸತತ 7ನೇ ಟಿ20 ಸರಣಿ ಗೆಲುವಾಗಿದೆ. ಜತೆಗೆ ತವರಿನ ಸತತ 16ನೇ ಟಿ20 ಸರಣಿಯಲ್ಲಿ ಸೋಲರಿಯದ ಅಜೇಯ ಸಾಧನೆ ಮಾಡಿದೆ.

ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ, 41 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಆಗ ಜತೆಯಾದ ವಿಶಾಖಪಟ್ಟಣದ ನಿತೀಶ್​ ಕುಮಾರ್​ ರೆಡ್ಡಿ ಹಾಗೂ ರಿಂಕು ಸಿಂಗ್​ 4ನೇ ವಿಕೆಟ್​ಗೆ ನಡೆಸಿದ ಅಬ್ಬರದ ಜತೆಯಾಟದ ನೆರವಿನಿಂದ 9 ವಿಕೆಟ್​ಗೆ 221 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಭಾರತ ಬೌಲರ್​ಗಳ ಸಂಟಿತ ದಾಳಿಗೆ ನಿರಂತರ ವಿಕೆಟ್​ ಕಳೆದುಕೊಂಡ ಬಾಂಗ್ಲಾ, 9 ವಿಕೆಟ್​ಗೆ 135 ರನ್​ಗಳಿಸಲಷ್ಟೇ ಶಕ್ತಗೊಂಡಿತು. ಅನುಭವಿ ಮಹಮುದುಲ್ಲಾ (41 ರನ್​, 39 ಎಸೆತ, 3 ಸಿಕ್ಸರ್​) ಹೋರಾಟ ಸೋಲಿನ ಅಂತರ ತಗ್ಗಿಸಿತು.

ಸಂಘಟಿತ ಕಡಿವಾಣ: ಆರಂಭಿಕ 2 ಓವರ್​ಗಳಲ್ಲಿ 20 ರನ್​ ಕಸಿದು ಚೇಸಿಂಗ್​ ಆರಂಭಿಸಿದ ಬಾಂಗ್ಲಾಕ್ಕೆ ವೇಗಿ ಅರ್ಷದೀಪ್​ ಸಿಂಗ್​ ಬ್ರೇಕ್​ ಹಾಕಿದರು. ಇನಿಂಗ್ಸ್​ನ 3ನೇ ಓವರ್​ನಲ್ಲಿ ಪರ್ವೀಜ್​ ಹೊಸೈನ್​ (16) ಅರ್ಷದೀಪ್​ ಎಸೆತದಲ್ಲಿ ಬೌಲ್ಡ್​ ಆದರು. 5ನೇ ಓವರ್​ನಲ್ಲಿ ದಾಳಿಗಿಳಿದ ವಾಷಿಂಗ್ಟನ್​ ಸುಂದರ್​ ಎಸೆತದಲ್ಲಿ ನಾಯಕ ನಜ್ಮೂಲ್​ ಹೊಸೈನ್​ ಶಾಂಟೋ (11), ಮರು ಓವರ್​ನಲ್ಲಿ ವರುಣ್​ ಚಕ್ರವರ್ತಿ ಎಸೆತದಲ್ಲಿ ಲಿಟನ್​ ದಾಸ್​ (14) ಬೌಲ್ಡ್​ ಆದರು. ಇದರೊಂದಿಗೆ ಪವರ್​ಪ್ಲೇಯಲ್ಲಿ ಬಾಂಗ್ಲಾ ಚೇಸಿಂಗ್​ ಬಲ ಕಳೆದುಕೊಂಡಿತು. ನಂತರ ತೌಹಿದ್​ ಹೃದಯ್​ (2), ಮೆಹಿದಿ ಹಸನ್​ ಮಿರಾಜ್​ (16), ಜೇಕರ್​ ಅಲಿ (1) ವಿಕೆಟ್​ ಪಡೆದ ಟೀಮ್​ ಇಂಡಿಯಾ ಪಂದ್ಯದಲ್ಲಿ ಮೇಲುಗೈ ಸಾಧಿಸಿತು. 87 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡ ಬಾಂಗ್ಲಾ ಪರ ಮಹಮುದುಲ್ಲಾ ಏಕಾಂಗಿ ಹೋರಾಟ ವ್ಯರ್ಥಗೊಂಡಿತು. ಭಾರತ ಪರ ಬೌಲಿಂಗ್​ ನಡೆಸಿದ ಎಲ್ಲರೂ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net