

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) 2023-24ರ ಸಾಲಿನಲ್ಲಿ ಆಯೋಜಿಸಿರುವ ವಿವಿಧ ಟೂರ್ನಿಗಳಲ್ಲಿ 13 ವರ್ಷದ ಬ್ಯಾಟರ್ ನಿತೀಶ್ ಆರ್ಯಾ 1,400ಕ್ಕೂ ಅಧಿಕ ರನ್ ಸಿಡಿಸುವ ಮೂಲಕ ಗಮನಸೆಳೆದಿದ್ದಾನೆ.
ವಿರಾಟ್ ಕೊಹ್ಲಿ ಅವರ ಕಟ್ಟಾ ಅಭಿಮಾನಿಯಾಗಿರುವ ನಿತೀಶ್ ಆರ್ಯಾ ಮುಂದೊಂದು ದಿನ ಮೂರೂ ಕ್ರಿಕೆಟ್ ಪ್ರಕಾರದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಕನಸು ಹೊಂದಿದ್ದಾನೆ. ಬಲಗೈ ಆರಂಭಿಕ ಬ್ಯಾಟರ್ ಆಗಿರುವ ನಿತೀಶ್, 3ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲಾರಂಭಿಸಿದ್ದ. ರಾಜಾಜಿನಗರ ಕ್ರಿಕೆಟರ್ಸ್ ಮತ್ತು ಶಾಲಾ ತಂಡ ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್ (ಬಸವೇಶ್ವರನಗರ) ಪರ ಆಡುವ ನಿತೀಶ್ ಆರ್ಯಾ, 7ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ಕೆಎಸ್ಸಿಎ ಕಪ್ 16 ವಯೋಮಿತಿಯ ಟೂರ್ನಿಯಲ್ಲಿ 3 ಶತಕ ಮತ್ತು 3 ಅರ್ಧಶತಕಗಳ ಸಹಿತ ಸರ್ವಾಧಿಕ 565 ರನ್ ಸಿಡಿಸಿರುವ ನಿತೀಶ್, ಕೆಎಸ್ಸಿಎಯ 14 ವಯೋಮಿತಿ ಟೂರ್ನಿಯಲ್ಲೂ ಸ್ಥಿರ ನಿರ್ವಹಣೆ ಪ್ರದರ್ಶಿಸಿದ್ದಾನೆ.
ಕೆಎಸ್ಸಿಎ 4ನೇ ಡಿವಿಷನ್ ಲೀಗ್ನಲ್ಲೂ ವಿಕ್ಟರಿ ಕ್ರಿಕೆಟ್ ಕ್ಲಬ್ ಪರ ಆಡುವ ನಿತೀಶ್, ಇದುವರೆಗೆ 4 ಪಂದ್ಯಗಳಲ್ಲಿ ಒಂದು ಅರ್ಧಶತಕ ಬಾರಿಸಿದ್ದಾನೆ. ನಿತೀಶ್ ದಿನವೊಂದರಲ್ಲಿ 6-7 ಗಂಟೆಗಳ ಕಾಲ ಅಭ್ಯಾಸ ನಡೆಸುವ ಮೂಲಕ ಸಣ್ಣ ವಯಸ್ಸಿನಲ್ಲೇ ಅಪಾರ ಕ್ರಿಕೆಟ್ ಪ್ರೀತಿ ಮತ್ತು ಬದ್ಧತೆಯನ್ನು ತೋರುತ್ತಿದ್ದಾನೆ ಎಂದು ರಾಜಾಜಿನಗರ ಕ್ರಿಕೆಟರ್ಸ್ ಕೊಚ್ ವಿನಯ್ ಕುಮಾರ್ ಎನ್ಪಿ ಹೇಳಿದ್ದಾರೆ.
ಕ್ರಿಕೆಟ್ ಆಟದ ನಡುವೆ ಶೈಕ್ಷಣಿಕವಾಗಿಯೂ ಹಿಂದುಳಿಯದ ನಿತೀಶ್, ಶೇ.80&90 ಅಂಕಗಳಿಕೆಯೊಂದಿಗೆ ಕ್ರೀಡೆ&ಶಿಕ್ಷಣದ ನಡುವೆ ಸಮತೋಲನವನ್ನು ಸಾಧಿಸಿರುವುದು ಗಮನಾರ್ಹವೆನಿಸಿದೆ.