1 ಇನ್ನಿಂಗ್ಸ್​ನಲ್ಲಿ 400, ಒಂದು ಸೀಸನ್​ನಲ್ಲಿ 1200 ರನ್​! ಶತಕ ವೀರನ ಸಾಮರ್ಥ್ಯದ ಬಗ್ಗೆ ಮಾಜಿ ಆಯ್ಕೆಗಾರ ಗುಣಗಾನ | Nithish

ವಿಜಯವಾಣಿ (16)
Published on

Nithish Kumar Reddy: ಡಿ.28 ಮೆಲ್ಬೋರ್ನ್​ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಕಾಂಗರೂ ಪಡೆಯ ಬೌಲರ್​ಗಳನ್ನು ಬೆಂಡೆತ್ತಿದ ಟೀಮ್ ಇಂಡಿಯಾದ ಸ್ಟಾರ್ ಯುವ ಬ್ಯಾಟರ್​ ನಿತೀಶ್ ಕುಮಾರ್​ ರೆಡ್ಡಿ, ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸುವ ಮೂಲಕ ಕ್ರಿಕೆಟ್​ ಲೋಕದಲ್ಲಿ ಹೊಸ ಸಂಚಲವನ್ನೇ ಮೂಡಿಸಿದ್ದಾರೆ. ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಗಮನಸೆಳೆಯುತ್ತಿರುವ ಭಾರತದ ಈ ಯುವ ಕ್ರಿಕೆಟಿಗನಿಗೆ ದೇಶವ್ಯಾಪಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಮಾಜಿ ಕ್ರಿಕೆಟಿಗರಿಂದ ಮೆಚ್ಚುಗೆ

7, 8ನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ಪರ ಬ್ಯಾಟಿಂಗ್ ಬರುವ ನಿತೀಶ್ ಕುಮಾರ್​ ರೆಡ್ಡಿ, ಕಡೆಯ ಬ್ಯಾಟಿಂಗ್ ಆರ್ಡರ್​ನಲ್ಲಿ ಕಣಕ್ಕಿಳಿದರು ಸಹ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡುವಲ್ಲಿ ಮುಂಚೂಣಿಯಲ್ಲಿರುವುದು ಸದ್ಯ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗರು, ದಿಗ್ಗಜರ ಗಮನಸೆಳೆದಿದೆ. ಇಡೀ ದೇಶವೇ ನಿತೀಶ್​ರನ್ನು ಕೊಂಡಾಡುತ್ತಿರುವ ಸಮಯದಲ್ಲಿ ನಿತೀಶ್​ ಪಟ್ಟ ಶ್ರಮ, ಬೆಳೆದು ಬಂದ ಹಾದಿ, ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಹೆಜ್ಜೆಯಿಡುವ ಮುನ್ನ ತೋರಿದ ಪ್ರದರ್ಶನ ಹಾಗೂ ಪಾತ್ರದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಯ್ಕೆಗಾರ ಎಂಎಸ್​ಕೆ ಪ್ರಸಾದ್​ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Nitish Reddy

ಅಂತಹ ಬ್ಯಾಟರ್, ಬೌಲರ್ ಅಲ್ಲ

"ನಿತೀಶ್ ಅಂತಹ ಬ್ಯಾಟರ್ ಮತ್ತು ಬೌಲರ್ ಆಗಿರಲಿಲ್ಲ. ಆದರೆ, ಹಂತ ಹಂತವಾಗಿ ಬೆಳೆದು, ಕಲಿಕೆಗೆ ಆದ್ಯತೆ ನೀಡಿ, ಅತ್ಯುತ್ತಮ ಬ್ಯಾಟರ್​ ಆಗಿ ಹೊರಹೊಮ್ಮಿದ್ದಾರೆ. ಕೇವಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲ, ದೇಶಿಯ ಕ್ರಿಕೆಟ್​ನಲ್ಲಿಯೂ ನಿತೀಶ್​ ಒಳ್ಳೆಯ ಪ್ರದರ್ಶನಗಳನ್ನು ನೀಡಿದ್ದಾರೆ. ಆಂಧ್ರ ಕ್ರಿಕೆಟ್​ ರೆಡ್ಡಿಯ ಕ್ರಿಕೆಟ್​ ಮತ್ತು ವಿದ್ಯಾಭ್ಯಾಸಕ್ಕೆ ಅಂದು ಮಾಸಿಕ 15,000 ರೂ. ಮೀಸಲಿಟ್ಟಿತು. ಆ ಹಣದಲ್ಲಿ ತಮ್ಮ ತರಬೇತಿ ಆರಂಭಿಸಿದ ನಿತೀಶ್​ರನ್ನು ಉತ್ತಮ ಆಟಗಾರನಾಗಿ ರೂಪಿಸಿದೆವು. ಕೇವಲ ಒಂದು ಸೀಸನ್​ನಲ್ಲಿ 1200 ರನ್ ಮತ್ತು U-16 ಕ್ರಿಕೆಟ್‌ನಲ್ಲಿ ಒಂದೇ ಒಂದು ಇನ್ನಿಂಗ್ಸ್‌ನಲ್ಲಿ 400 ರನ್ ದಾಖಲಿಸಿದ್ದರು" ಎಂದರು.

ಸ್ಟಾರ್ ಆಲ್​ರೌಂಡರ್​

"ಕೇವಲ ಒಬ್ಬ ಬ್ಯಾಟರ್​ ಆಗದೆ, ಬೌಲಿಂಗ್​ನಲ್ಲಿಯೂ ಕೂಡ ಕಮಾಲ್​ ಮಾಡುವ ಸಾಮರ್ಥ್ಯವನ್ನು ಹೊಂದಿರುವ ನಿತೀಶ್, ಬ್ಯಾಟಿಂಗ್​ಗೆ ಎಷ್ಟು ಆದ್ಯತೆ ನೀಡುತ್ತಾರೋ ಬೌಲಿಂಗ್​ಗೂ ಕೂಡ ಅಷ್ಟೇ ಆದ್ಯತೆ, ಪ್ರಾಮುಖ್ಯತೆ ನೀಡುತ್ತಾರೆ. ಇದರಿಂದಲೇ ಅವರು ಇಂದು ಒಳ್ಳೆಯ ಸ್ಟಾರ್​ ಆಲ್ರೌಂಡರ್ ಆಗಿ ತಂಡದಲ್ಲಿ ಗುರುತಿಸಿಕೊಂಡಿರುವುದು. ಪ್ರಸ್ತುತ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾರ್ಡರ್​ ಗವಾಸ್ಕರ್​ ಟ್ರೋಫಿ ಟೆಸ್ಟ್​ ಪಂದ್ಯದಲ್ಲಿ ನಿತೀಶ್​ ಬಲಿಷ್ಠ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ" ಎಂದು ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net