

ಮುಂಬೈ: ರಿಲಯನ್ಸ್ ಫೌಂಡೇಶನ್‌ನ ಜ್ಯೋತಿ ಯರ್ರಾಜಿ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯರೆಂಬ ಇತಿಹಾಸವನ್ನು ನಿರ್ಮಿಸಿದ್ದಾರೆ. ಅವರ ಈ ಐತಿಹಾಸಿಕ ಸಾಧನೆಗೆ ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ನೀತಾ ಎಂ. ಅಂಬಾನಿ ಅಭಿನಂದನೆ ಸಲ್ಲಿಸಿದ್ದಾರೆ.
'ನಮ್ಮ ರಿಲಯನ್ಸ್ ಫೌಂಡೇಶನ್ ಅಥ್ಲೀಟ್ ಜ್ಯೋತಿ ಯರ್ರಾಜಿ ಅವರು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನೀವು ಅತ್ಯುನ್ನತ ಮಟ್ಟದ ಕೌಶಲ ಮತ್ತು ಪರಿಶ್ರಮದೊಂದಿಗೆ ದಿಟ್ಟ ಮತ್ತು ದೃಢತೆಯ ಶಕ್ತಿಯನ್ನು ತೋರಿಸಿದ್ದೀರಿ. ನೀವು ದೇಶ ಹೆಮ್ಮೆ ಪಡುವಂತೆ ಮಾಡಿದ್ದೀರಿ ಮತ್ತು ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಹೊಂದಿರುವ ಎಲ್ಲಾ ಉತ್ಸಾಹಿ ಕ್ರೀಡಾಪಟುಗಳು ಮತ್ತು ಯುವತಿಯರಿಗೆ ಸ್ಫೂರ್ತಿಯಾಗಿ ನಿಂತಿದ್ದೀರಿ. ನಾವು ರಿಲಯನ್ಸ್ ಫೌಂಡೇಶನ್‌ನಲ್ಲಿ, ಜ್ಯೋತಿ ಅವರ ಸಾಧನೆಯ ಬಗ್ಗೆ ಅಪಾರವಾಗಿ ಹೆಮ್ಮೆ ಪಡುತ್ತೇವೆ. ನಮ್ಮ ಯುವಕರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಅವರ ಉತ್ಸಾಹವನ್ನು ಬೆಂಬಲಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ನಮ್ಮ ಭಾರತೀಯ ತಂಡ ಮತ್ತು ನಮ್ಮ ರಿಲಯನ್ಸ್ ಫೌಂಡೇಶನ್ ಅಥ್ಲೀಟ್‌ಗಳು ಹೆಚ್ಚಿನ ಯಶಸ್ಸು ಕಾಣಲಿ ಮತ್ತು ಹೆಚ್ಚಿನ ದಾಖಲೆ ಮುರಿಯುವಂತಾಗಲಿ ಎಂದು ಆಶಿಸುತ್ತೇನೆ. ನೀವು ಮಹಾತ್ವಾಕಾಂಕ್ಷೆ ಮತ್ತು ಸ್ಫೂರ್ತಿ ತುಂಬುವುದನ್ನು ಮುಂದುವರಿಸಿರಿ' ಎಂದು ನೀತಾ ಎಂ. ಅಂಬಾನಿ ಅವರು ಹೇಳಿದ್ದಾರೆ.
ಫೈನಲ್ ಸ್ಪರ್ಧೆಯ ಓಟದ ನಂತರ ಮಾತನಾಡಿದ ಜ್ಯೋತಿ ಯರ್ರಾಜಿ, 'ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿರುವುದು ಸಂತಸ ತಂದಿದೆ. ಇತ್ತೀಚೆಗೆ ನನ್ನ ಓಟಗಳಲ್ಲಿ ತೋರುತ್ತಿರುವ ಸ್ಥಿರತೆಯ ಬಗ್ಗೆ ನನಗೆ ಸಂತೋಷವಿದೆ. ನಾನು ಜಪಾನಿನ ಓಟಗಾರ್ತಿಯರಿಂದ ಸ್ಪರ್ಧೆಯನ್ನು ನಿರೀಕ್ಷಿಸುತ್ತಿದ್ದೆ, ಆದರೆ ಪದಕಗಳ ಬಗ್ಗೆ ಹೆಚ್ಚು ಯೋಚಿಸಲು ಹೋಗಲಿಲ್ಲ, ಬದಲಿಗೆ ಉತ್ತಮ ಸಮಯದಲ್ಲಿ ಸ್ಪರ್ಧೆಯನ್ನು ಮುಗಿಸುವತ್ತ ಕೇಂದ್ರೀಕರಿಸಿದ್ದೆ. 13 ಸೆಕೆಂಡ್ನೊಳಗಿನ ಓಟದಲ್ಲಿ ಸ್ಥಿರತೆಯನ್ನು ಕಾಣುತ್ತಿರುವೆ. ಮುಂದಿನ ದಿನಗಳಲ್ಲಿ 12.9, 12.8 ಮತ್ತು 12.7 ಸೆಕೆಂಡ್‌ಗಳ ಸಮಯವನ್ನು ಗಡಿಯಾರದಲ್ಲಿ ಸ್ಥಿರವಾಗಿ ದಾಖಲಿಸುವ ನನ್ನ ಗುರಿಗಳನ್ನು ಸಾಧಿಸುವ ಬಗ್ಗೆ ನನಗೆ ಈಗ ವಿಶ್ವಾಸವಿದೆ' ಎಂದು ಹೇಳಿದ್ದಾರೆ.
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ನಡೆದ ಮಹಿಳೆಯರ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯ ಫೈನಲ್ನಲ್ಲಿ ಭಾರೀ ಮಳೆಯಿಂದಾಗಿ ಒದ್ದೆಯಾಗಿದ್ದು, ಜಾರುವ ಸ್ಥಿತಿಯಲ್ಲಿದ್ದ ಟ್ರ್ಯಾಕ್ನಲ್ಲಿ ಓಡಿದ 23 ವರ್ಷದ ಜ್ಯೋತಿ ಅವರು ಪ್ರಬಲ ಪೈಪೋಟಿಯ ನಡುವೆ 13.09 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದರು. ಜಪಾನ್‌ನ ಅಸುಕಾ ಟೆರಾಡಾ (13.13ಸೆ) ಮತ್ತು ಮಸುಮಿ ಅಯೊಕಿ (13.26ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದರು.
ಕೂಟದ ಇತಿಹಾಸದಲ್ಲಿ ಹಿಂದಿನ 22 ಆವೃತ್ತಿಗಳಲ್ಲಿ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊಟ್ಟಮೊದಲ ಸಾಧಕಿ ಜ್ಯೋತಿ ಯರ್ರಾಜಿ ಆಗಿದ್ದಾರೆ. ಈ ಮುನ್ನ ಭಾರತದ ಅನುರಾಧಾ ಬಿಸ್ವಾಲ್ 2000ದಲ್ಲಿ ಕಂಚು ಮತ್ತು ಜಯಪಾಲ್ ಹೇಮಶ್ರೀ 2013ರಲ್ಲಿ ಕಂಚು ಗೆದ್ದಿದ್ದರು.
ಜ್ಯೋತಿ ಹೀಟ್ಸ್‌ನಲ್ಲೂ ಅತ್ಯಂತ ವೇಗದ ಆಟಗಾರ್ತಿಯಾಗಿದ್ದು, ಹೀಟ್ಸ್-1ರಲ್ಲಿ 12.98 ಸೆಕೆಂಡ್‌ಗಳಲ್ಲಿ ಓಟವನ್ನು ಮುಗಿಸಿ ಅಗ್ರಸ್ಥಾನದೊಂದಿಗೆ ಫೈನಲ್ಗೆ ಮುನ್ನಡೆದಿದ್ದರು. ಅವರು 12.97 ಸೆಕೆಂಡ್‌ಗಳ ಕೂಟದಾಖಲೆಯನ್ನು ಮುರಿಯುವಲ್ಲಿ ಸ್ವಲ್ಪ ದೂರ ಉಳಿದರು. ಈ ಸ್ಪರ್ಧೆಯಲ್ಲಿ 13 ಸೆಕೆಂಡ್ಗಿಂತ ಕಡಿಮೆ ಅವಧಿಯಲ್ಲಿ ಓಡಿದ ಏಕೈಕ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯೂ ಜ್ಯೋತಿ ಅವರದಾಗಿದೆ. ಜ್ಯೋತಿ ಅವರು ತಮ್ಮ ಪ್ರತಿಸ್ಪರ್ಧಿ ಜಪಾನ್ ಓಟಗಾರ್ತಿಯರನ್ನು ಫೋಟೋ ಫಿನಿಶ್‌ನಲ್ಲಿ ಹಿಂದಿಕ್ಕಿದರು. ಹಾಲಿ ವರ್ಷ ಏಷ್ಯಾದ ಅತ್ಯಂತ ವೇಗದ ಓಟಗಾರ್ತಿ ಎನಿಸಿರುವುದರಿಂದ ಜ್ಯೋತಿ ಅವರು ನೆಚ್ಚಿನ ಸ್ಪರ್ಧಿಯಾಗಿ ಕಣಕ್ಕಿಳಿದಿದ್ದರು. ಜ್ಯೋತಿ ಅವರ ಇತ್ತೀಚೆಗಿನ ಫಾರ್ಮ್ ಅದ್ಭುತವಾಗಿದೆ. ಕಳೆದ ರಾಷ್ಟ್ರೀಯ ಅಂತರ-ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆಲ್ಲುವ ಮೂಲಕ ಕೂಟದ ಅತ್ಯುತ್ತಮ ಮಹಿಳಾ ಅಥ್ಲೀಟ್ ಪ್ರಶಸ್ತಿಗೂ ಭಾಜನರಾಗಿದ್ದರು.
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಇನ್ನು ಮಹಿಳೆಯರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ ನಡೆದ ಸ್ಪರ್ಧೆಗಳಲ್ಲಿ ರಿಲಯನ್ಸ್ ಫೌಂಡೇಶನ್‌ನ ಗುಲ್ವೀರ್ ಸಿಂಗ್ 10,000 ಮೀ. ಓಟದಲ್ಲಿ ಐದನೇ ಸ್ಥಾನ ಗಳಿಸಿದ್ದರು. ಕೂಟದ ಆರಂಭಿಕ ದಿನದಂದು ನಡೆದ ಸ್ಪರ್ಧೆಯಲ್ಲಿ ಅವರು 29 ನಿಮಿಷ 53.69 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದ್ದರು. ಗುಲ್ವೀರ್ ಇನ್ನು 5,000 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.