

Nita Ambani : ನಿನ್ನೆ (ಮೇ 21) ನಡೆದ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್‌ಗಳಿಂದ ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಪ್ಲೇಆಫ್ ಪ್ರವೇಶಿಸಿದೆ. ಈ ಸೀಸನ್ನಲ್ಲಿ ತನ್ನ ಮೊದಲ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದ್ದ ಮುಂಬೈ, ನಂತರ ಫೀನಿಕ್ಸ್ನಂತೆ ಎದ್ದು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.
ನಿನ್ನೆ ವಾಂಖೆಡೆ ಕ್ರೀಡಾಂಗಣದಲ್ಲಿ ದೆಹಲಿ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್, ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಡೆಲ್ಲಿ 18.2 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟ್ ಆಯಿತು.
ಮುಂಬೈ ಇಂಡಿಯನ್ಸ್ ಗೆಲುವಿನ ನಂತರ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗೆ ಸಿದ್ಧವಾಗುತ್ತಿದ್ದಂತೆ, ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಜಸ್ಪ್ರೀತ್ ಬುಮ್ರಾರನ್ನು ಕರೆದು ಕೈಗಳನ್ನು ಸ್ಯಾನಿಟೈಸ್ ಮಾಡಲು ಕೇಳಿಕೊಳ್ಳುವ ಫೋಟೋಗಳು ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ನೀತಾ ಅಂಬಾನಿ ಕೂಡ ಬುಮ್ರಾ ಅವರ ಕೈಗಳಿಗೆ ಸ್ಯಾನಿಟೈಸರ್ ಸುರಿಯುವುದನ್ನು ಚಿತ್ರಗಳಲ್ಲಿ ಕಾಣಬಹುದು. ಭಾರತದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವುದರಿಂದ ಆಟಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ರೀತಿ ಮಾಡಲಾಗಿದೆ. ಅಧಿಕಾರಿಗಳು ಇತರ ಆಟಗಾರರಿಗೂ ಸ್ಯಾನಿಟೈಸರ್ ಒದಗಿಸುತ್ತಿದ್ದಾರೆ.
ಕೇರಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಪ್ರಸ್ತುತ ಭಾರತದಲ್ಲಿ 250 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಅದಕ್ಕಾಗಿಯೇ ಐಪಿಎಲ್ ಪಂದ್ಯಗಳಲ್ಲಿ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್‌ಗಳ ಜಯ ಸಾಧಿಸಿ ಐಪಿಎಲ್ 2025ರಲ್ಲಿ ನಾಲ್ಕನೇ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 180 ರನ್ ಗಳಿಸಿತು. ಸೂರ್ಯಕುಮಾರ್ 43 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅಜೇಯ 73 ರನ್ ಗಳಿಸಿ ಉಪಯುಕ್ತ ರನ್‌ಗಳ ಕಾಣಿಕೆ ನೀಡಿದರು.
ಸವಾಲಿನ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ 18.2 ಓವರ್ನಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡ 121 ರನ್ ಗಳಿಸಿತು. ಈ ಮೂಲಕ ಪ್ಲೇಆಫ್ ರೇಸ್ನಿಂದ ಡೆಲ್ಲಿ ಕ್ಯಾಪಿಟಲ್ಸ್ ಹೊರಬಿದ್ದಿದೆ. (ಏಜೆನ್ಸೀಸ್)