

ಬೆಂಗಳೂರು: ಮಹಾಮಾರಿ ಕರೊನಾ ವೈರಸ್ ಕಳೆದ ನಾಲ್ಕು ತಿಂಗಳಿಂದ ಜಾಗತಿಕ ಕ್ರೀಡಾಲೋಕವನ್ನೇ ತಲ್ಲಣಗೊಳಿಸಿದೆ. ಎಲ್ಲ ಚಟುವಟಿಕೆಗಳು ನಿಂತ ನೀರಾಗಿವೆ. ಕೆಲವೆಡೆ ಪ್ರೇಕ್ಷಕರು ಇಲ್ಲದೆ, ಖಾಲಿ ಸ್ಟೇಡಿಯಂಗಳಲ್ಲಿ ಕ್ರೀಡಾಕೂಟಗಳು ಪುನರಾರಂಭಗೊಳ್ಳುತ್ತಿವೆ. ಕ್ರೀಡಾ ಚಟುಚಟಿಕೆ ಪುನರಾರಂಭದ ಕುರಿತು ವೀಡೆನ್ + ಕೆನ್ನೆಡಿ ಜಾಹೀರಾತು ಏಜೆನ್ಸಿ ಸಂಸ್ಥೆ ಜತೆಗೂಡಿ ರಚಿಸಿರುವ ನೈಕಿ ವಿಡಿಯೋ ಇದೀಗ ವೈರಲ್ ಆಗಿದೆ. ಇದರ ವಿಶೇಷ ಎಂದರೆ ಭಾರತ ಮಹಿಳಾ ತಂಡದ ವಿಡಿಯೋ ತುಣುಕು ಕೂಡ ಈ ವಿಡಿಯೋದಲ್ಲಿದೆ. ಸುಮಾರು 4 ಸಾವಿರ ತುಣುಕು ಹೊಂದಿರುವ ಈ ಫೂಟೇಜ್ ಕ್ರೀಡಾಪ್ರಿಯರ ಗಮನಸೆಳೆದಿದೆ.
ಕರೊನಾ ವೈರಸ್ ಉದ್ದೇಶಿಸಿ ‘ಯೂ ಕಾಂಟ್ ಸ್ಟಾರ್ ಅಪ್ ಅಸ್’ (ನೀನು ನಮ್ಮನ್ನು ತಡೆಯಲು ಸಾಧ್ಯವಿಲ್ಲ) ಹಾಡುತ್ತಿರುವ ಹಾಡು ಸಿದ್ಧಗೊಂಡಿದೆ. ಎಲ್ಲ ಕ್ರೀಡೆಗಳ ಸುಮಾರು 4 ಸಾವಿರ ತುಣುಕುಗಳನ್ನು ಜೋಡಿಸಿ ವಿಡಿಯೋ ತಯಾರಿಸಲಾಗಿದೆ. ಆಸ್ಟ್ರೇಲಿಯಾದ ಫುಟ್‌ಬಾಲ್ ತಾರೆ ಮೆಗನ್ ರ‌್ಯಾಪಿನೋ, ಟೆನಿಸ್ ತಾರೆ ನವೊಮಿ ಒಸಾಕ, ಸೆರೇನಾ ವಿಲಿಯಮ್ಸ್, ಫುಟ್‌ಬಾಲ್ ತಾರೆಯರಾದ ಕ್ರಿಶ್ಚಿಯಾನೊ ರೊನಾಲ್ಡೋ, ಕೈಲಿನ್ ಎಂಬಾಪೆ ಅವರ ವಿಡಿಯೋಗಳನ್ನು ಬಳಿಸಿಕೊಳ್ಳಲಾಗಿದೆ. ಭಾರತ ಮಹಿಳಾ ಕ್ರಿಕೆಟ್ ತಂಡ ಗುಂಪುಗೂಡಿ ಮೈದಾನಕ್ಕೆ ಎಂಟ್ರಿಕೊಡುತ್ತಿರುವ ವಿಡಿಯೋ ಕ್ಲಿಪಿಂಗ್ ಇದರಲ್ಲಿದೆ.
ಕ್ರೀಡಾಪಟುಗಳು ಪ್ರಮುಖ ಅಂಗವಾದ ಜಿಮ್‌ಗಳು, ಸ್ಟೇಡಿಯಂಗಳು ಖಾಲಿ ಇದ್ದರೂ ಕ್ರೀಡಾಪಟುಗಳನ್ನು ತಡೆಯಲು ಸಾಧ್ಯವಿಲ್ಲ. ಕ್ರೀಡೆಯಿಂದಲೇ ಸಮಾನತೆ, ಉತ್ತಮ ಭವಿಷ್ಯಕ್ಕೆ ರಹದಾರಿ ಎಂದು ನೈಕಿ ವೆಬ್‌ಸೈಟ್ ಹೇಳಿಕೊಂಡಿದೆ.