

ಬ್ರಿಸ್ಬೇನ್: ನ್ಯೂಜಿಲೆಂಡ್ ಮಹಿಳಾ ತಂಡ ಕಡೆಗೂ ಗೆಲುವಿನ ಹಳಿಗೇರಲು ಯಶಸ್ವಿಯಾಗಿದೆ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಸತತ 13 ಸೋಲುಗಳಿಂದ ಕಂಗೆಟ್ಟಿದ್ದ ಕಿವೀಸ್ ಮಹಿಳೆಯರು ಕಡೆಗೂ ಗೆದ್ದು ಬೀಗಿದ್ದಾರೆ. ಬುಧವಾರ ಅಂತ್ಯಗೊಂಡ 3 ಟಿ20 ಪಂದ್ಯಗಳ ಸರಣಿಯ ಕಡೇ ಪಂದ್ಯದಲ್ಲಿ ಜಯ ದಾಖಲಿಸಿದೆ. ಸರಣಿಯಲ್ಲಿ 1-2 ರಿಂದ ಸೋತರೂ ಕನಿಷ್ಠ ಗೆಲುವಿನ ದಡಕ್ಕೇರಿದ ಸಮಾಧಾನ ಪಟ್ಟಿದೆ ಕಿವೀಸ್ ಪಡೆ. ಆಸ್ಟ್ರೇಲಿಯಾ ಎದುರು ಸತತ 7 ಟಿ20 ಹಾಗೂ 6 ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡ ಸೋಲು ಕಂಡಿತ್ತು.
ಬ್ರಿಸ್ಬೇನ್‌ನಲ್ಲಿ ಬುಧವಾರ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ನ್ಯಜಿಲೆಂಡ್ ತಂಡ 5 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 7 ವಿಕೆಟ್‌ಗೆ 123 ರನ್‌ಗಳಿಸಿದರೆ, ಪ್ರತಿಯಾಗಿ ನ್ಯೂಜಿಲೆಂಡ್ ತಂಡ 5 ವಿಕೆಟ್‌ಗೆ 125 ರನ್‌ಗಳಿಸಿ ಜಯದ ನಗೆ ಬೀರಿತು. ಇನ್ನು 3 ಎಸೆತಗಳು ಬಾಕಿ ಉಳಿದಿದ್ದವು. ಅಂತಿಮ ಪಂದ್ಯದಲ್ಲಿ ಸೋಲಿನ ನಡುವೆಯೂ ಆಸ್ಟ್ರೇಲಿಯಾ ಸತತ 10ನೇ ಟಿ20 ಸರಣಿ ಗೆದ್ದುಕೊಂಡಿತು.
ಬ್ರಿಸ್ಬೇನ್‌ನಲ್ಲೇ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. 2020ರಲ್ಲಿ ಆರಂಭದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಭಾರತ ತಂಡವನ್ನು ಮಣಿಸಿ ಚಾಂಪಿಯನ್‌ಪಟ್ಟ ಅಲಂಕರಿಸಿತ್ತು.