

ಸಿಡ್ನಿ: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಸುದೀರ್ಘ ಹೋರಾಟ ಕೊನೆಯ ಮತ್ತು ನಿರ್ಣಾಯಕ ಹಂತವನ್ನು ತಲುಪಿದೆ. ಗೆಲುವಿನೊಂದಿಗೆ ಸರಣಿಯನ್ನು ಆರಂಭಿಸಿದ್ದ ಭಾರತ ತಂಡ ಇದೀಗ ಸರಣಿ ಸಮಬಲ ಸಾಧಿಸಲು ಮತ್ತು ಟ್ರೋಫಿ ಉಳಿಸಿಕೊಳ್ಳಲು ಕೊನೆಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮತ್ತೆ ಗೆಲ್ಲಲೇಬೇಕಾದ ಸವಾಲು ಎದುರಿಸುತ್ತಿದೆ. ಶುಕ್ರವಾರದಿಂದ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿರುವ ಆತಿಥೇಯ ಆಸ್ಟ್ರೆಲಿಯಾ ವಿರುದ್ಧದ ನಿರ್ಣಾಯಕ ಕಾದಾಟದಲ್ಲಿ ಟೀಮ್ ಇಂಡಿಯಾ ಮಾಡು ಇಲ್ಲವೆ ಮಡಿ ಒತ್ತಡವನ್ನು ಎದುರಿಸಲಿದೆ. ಹೊಸ ವರುಷವನ್ನು ಗೆಲುವಿನೊಂದಿಗೆ ಆರಂಭಿಸಿದರಷ್ಟೇ ಭಾರತಕ್ಕೆ ಹರುಷ ಸಿಗಲಿದೆ. ಇನ್ನು ಪಿತೃತ್ವ ರಜೆಯಿಂದಾಗಿ ಸರಣಿಯ ಮೊದಲ ಪಂದ್ಯದಿಂದ ಸ್ವತಃ ಹೊರಗುಳಿದಿದ್ದ ನಾಯಕ ರೋಹಿತ್ ಶರ್ಮ, ಕಳಪೆ ಫಾರ್ಮ್ನಿಂದಾಗಿ ತಂಡದ ಹಿತಾಸಕ್ತಿಯ ದೃಷ್ಟಿಯಿಂದ ಕೊನೆಯ ಪಂದ್ಯದಿಂದ ಮತ್ತೆ ಹೊರಗುಳಿಯುವ ಸ್ಥಿತಿಯಲ್ಲಿದ್ದರೆ, ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಹಂಗಾಮಿ ಸಾರಥ್ಯ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ಸರಣಿಯಲ್ಲಿ ಪ್ರಸಕ್ತ 1-2 ಹಿನ್ನಡೆಯಲ್ಲಿರುವ ಭಾರತ ತಂಡ 10 ವರ್ಷಗಳ ಬಳಿಕ ಆಸೀಸ್ ನೆಲದಲ್ಲಿ ಸರಣಿ ಸೋಲುವ ಭೀತಿಯಲ್ಲಿದೆ. 2018-19, 2020-21ರ ಕೊನೇ 2 ಪ್ರವಾಸಗಳಲ್ಲಿ ಸರಣಿ ಗೆದ್ದಿದ್ದ ಭಾರತ ಈ ಬಾರಿ ಅದನ್ನು ಪುನರಾವರ್ತಿಸಲು ಈಗ ಅವಕಾಶವಿಲ್ಲ. ಆದರೆ ಸನ್ನಿವೇಶದಲ್ಲಿ ಸರಣಿ ಸಮಬಲವೂ ಭಾರತದ ಉತ್ತಮ ಸಾಧನೆಯೇ ಎನಿಸಲಿದೆ. ತವರಿನಲ್ಲಿ ಕಿವೀಸ್ ಎದುರು ವೈಟ್ವಾಷ್ ಅನುಭವಿಸಿ ಆಸೀಸ್ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡ ಸರಣಿ ಸಮಬಲ ಸಾಧಿಸಿದರೆ ಡಬ್ಲ್ಯುಟಿಸಿ ಫೈನಲ್ ಆಸೆಯನ್ನೂ ಜೀವಂತ ಉಳಿಸಿಕೊಳ್ಳಲಿದೆ.
ಡಬ್ಲ್ಯುಟಿಸಿ ಫೈನಲ್ ಲೆಕ್ಕಾಚಾರ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ (ಡಬ್ಲ್ಯುಟಿಸಿ) ಸತತ 3ನೇ ಬಾರಿ ಫೈನಲ್ಗೇರುವ ಆಸೆ ಜೀವಂತ ಉಳಿಸುವ ನಿಟ್ಟಿನಲ್ಲೂ ಭಾರತಕ್ಕೆ ಸಿಡ್ನಿಯಲ್ಲಿ ಗೆಲುವು ಅನಿವಾರ್ಯವೆನಿಸಿದೆ. ಸಿಡ್ನಿಯಲ್ಲಿ ಕನಿಷ್ಠ ಡ್ರಾ ಕಂಡರೂ ಭಾರತ ಫೈನಲ್ ರೇಸ್ನಿಂದ ಹೊರಬೀಳಲಿದೆ. ಸಿಡ್ನಿಯಲ್ಲಿ ಗೆದ್ದರೆ, ಆಸೀಸ್-ಶ್ರೀಲಂಕಾ ನಡುವೆ ಜ.29ರಿಂದ ಫೆ.10ರ ನಡುವೆ ನಡೆಯುವ 2 ಪಂದ್ಯಗಳ ಟೆಸ್ಟ್ ಸರಣಿ ಭಾರತದ ಭವಿಷ್ಯ ನಿರ್ಧರಿಸಲಿದೆ. ಲಂಕಾ 1-0ಯಿಂದ ಸರಣಿ ಗೆದ್ದರೆ, ಸರಣಿ 0-0 ಸಮಬಲವಾದರೆ ಭಾರತ ಫೈನಲ್ಗೇರಲಿದೆ. ಸಿಡ್ನಿ ಟೆಸ್ಟ್ ಗೆದ್ದರೆ ಆಸೀಸ್, ಲಂಕಾ ಸರಣಿಗೆ ಮುನ್ನವೇ ಫೈನಲ್ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ.
ತಂಡಕ್ಕಾಗಿ ರೋಹಿತ ತ್ಯಾಗ?
ಗೆಲುವಿನ ಅನಿವಾರ್ಯತೆಯಲ್ಲಿರುವ ಭಾರತ ತಂಡದ ಹಿತದೃಷ್ಟಿಯಿಂದ ಸ್ವತಃ ನಾಯಕ ರೋಹಿತ್ ಶರ್ಮ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಪಂದ್ಯಕ್ಕೆ ಮುನ್ನಾದಿನ ಸುದ್ದಿಗೋಷ್ಠಿಗೆ ಹಾಜರಾದ ಕೋಚ್ ಗೌತಮ್ ಗಂಭೀರ್, ರೋಹಿತ್ ಆಡುವ ಅಥವಾ ಆಡದಿರುವ ಬಗ್ಗೆ ಸ್ಪಷ್ಟವಾಗಿ ಉತ್ತರ ನೀಡಲಿಲ್ಲ. ಆದರೆ ನಂತರ ನಡೆದ ಬೆಳವಣಿಗೆಗಳಲ್ಲಿ 37 ವರ್ಷದ ರೋಹಿತ್ ಸಿಡ್ನಿ ಟೆಸ್ಟ್ನಿಂದ ಹೊರಗುಳಿಯುವ ಸ್ಪಷ್ಟ ಸೂಚನೆ ರವಾನೆಯಾಗಿದೆ. ಸರಣಿಯ 5 ಇನಿಂಗ್ಸ್ಗಳಲ್ಲಿ ಕೇವಲ 31 ರನ್ ಗಳಿಸಿರುವ ರೋಹಿತ್ ಶರ್ಮ ಫಾರ್ಮ್ ತೀವ್ರ ಟೀಕೆಗಳಿಗೆ ಗುರಿಯಾಗಿದೆ. ಇದರಿಂದಾಗಿ ರೋಹಿತ್ ಟೀಮ್ ಇಂಡಿಯಾದ ಪಾಲಿಗೆ ಸದ್ಯ "ಬಿಳಿ ಆನೆ'ಯಂತಾಗಿದ್ದಾರೆ. ಯುವ ಬ್ಯಾಟರ್ ಶುಭಮಾನ್ ಗಿಲ್ಗೆ ತಂಡದಲ್ಲಿ ಸ್ಥಾನ ಕಲ್ಪಿಸಿ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲೂ ರೋಹಿತ್ ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಿಡ್ನಿಯಲ್ಲಿ ಗುರುವಾರ ಭಾರತ ತಂಡದ ಅಭ್ಯಾಸದ ವೇಳೆ ಗಂಭೀರ್, ರೋಹಿತ್ ಮತ್ತು ಬುಮ್ರಾ ಜತೆಗೆ ಬಿಸಿಬಿಸಿ ಚರ್ಚೆಗಳನ್ನು ನಡೆಸಿದ್ದಾರೆ. ಇದು ರೋಹಿತ್ರನ್ನು ಆಡುವ ಬಳಗದಿಂದ ಹೊರಗುಳಿಯಲು ಮನವೊಲಿಸುವ ಮತ್ತು ಬುಮ್ರಾರನ್ನು ಮತ್ತೆ ನಾಯಕತ್ವಕ್ಕೆ ಮಾನಸಿಕವಾಗಿ ಸಜ್ಜುಗೊಳಿಸುವ ಪ್ರಯತ್ನ ಎಂದು ಹೇಳಲಾಗಿದೆ. ರೋಹಿತ್ ಸಿಡ್ನಿಯಲ್ಲಿ ಆಡದಿದ್ದರೆ ಕಳೆದ ಮೆಲ್ಬೋರ್ನ್ ಪಂದ್ಯವೇ ಅವರ ವೃತ್ತೀಜಿವನದ ಕೊನೇ ಟೆಸ್ಟ್ ಆಗುವ ಸಾಧ್ಯತೆ ಅಧಿಕವಾಗಿದೆ. ಯಾಕೆಂದರೆ ಭಾರತ ಡಬ್ಲ್ಯುಟಿಸಿ ಫೈನಲ್ಗೇರುವ ಸಾಧ್ಯತೆ ಸದ್ಯ ಕ್ಷೀಣವಾಗಿದೆ. ಅಲ್ಲದೆ 2025-27ರ ಆವೃತ್ತಿಯ ಡಬ್ಲ್ಯುಟಿಸಿಯ ಮೊದಲ ಸರಣಿಯನ್ನು ಜೂನ್ ಅಂತ್ಯದಲ್ಲಿ ಆಡಲಿರುವ ಭಾರತ ಆಗ ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ. ಹಿಂದೆ 2021-23ರ ಡಬ್ಲ್ಯುಟಿಸಿ ಬಳಿಕ ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರರನ್ನು ಭಾರತ ಇಂಥದ್ದೇ ಕಾರಣಕ್ಕಾಗಿ ಕಡೆಗಣಿಸಿತ್ತು.
ಸ್ಥಾನ ತ್ಯಜಿಸುವ ಮೊದಲ ನಾಯಕ
ರೋಹಿತ್ ಶರ್ಮ ಹೊರಗುಳಿದರೆ, ಸಂಪೂರ್ಣ ಫಿಟ್ ಇದ್ದರೂ, ತಂಡದ ಹಿತಕ್ಕಾಗಿ ಸರಣಿಯ ನಡುವೆ ತಂಡದ ಆಡುವ 11ರ ಬಳಗದಿಂದ ಹೊರಗುಳಿದ ಮೊದಲ ಭಾರತೀಯ ನಾಯಕ ಎನಿಸಲಿದ್ದಾರೆ. ಇದರ ಹೊರಗಾಗಿ ಈ ಹಿಂದೆ ಅನಿಲ್ ಕುಂಬ್ಳೆ ಮತ್ತು ಎಂಎಸ್ ಧೋನಿ ಟೆಸ್ಟ್ ಸರಣಿಯ ನಡುವೆಯೇ ನಿವೃತ್ತಿ ಹೇಳಿದ್ದ ದೃಷ್ಟಾಂತಗಳಷ್ಟೇ ಇವೆ.
2014ರಲ್ಲಿ ಸ್ಥಾನ, ನಾಯಕತ್ವ ತ್ಯಜಿಸಿ ಶ್ರೀಲಂಕಾದ
ಟಿ20 ವಿಶ್ವಕಪ್ ಜಯಕ್ಕೆ ನೆರವಾಗಿದ್ದ ಚಾಂಡಿಮಲ್!
ರೋಹಿತ್ ಶರ್ಮ ಸಿಡ್ನಿ ಟೆಸ್ಟ್ನಿಂದ ಸ್ವತಃ ಹೊರಗುಳಿದು ಭಾರತ ತಂಡದ ಗೆಲುವಿಗೆ ನೆರವಾದರೆ ಅದು ಅವರ ನಿಸ್ವಾರ್ಥ ಮನೋಭಾವ ಮತ್ತು ತ್ಯಾಗದ ಗೆಲುವು ಆಗಲಿದೆ. 2014ರಲ್ಲಿ ಶ್ರೀಲಂಕಾ ತಂಡದ ಆಗಿನ ನಾಯಕ ದಿನೇಶ್ ಚಾಂಡಿಮಲ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಂದ ಹೊರಗುಳಿದು ಶ್ರೀಲಂಕಾ ತಂಡದ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗೆ ನೆರವಾಗಿದ್ದನ್ನು ಇದು ನೆನಪಿಸುತ್ತಿದೆ. ವಿಶ್ವಕಪ್ ವೇಳೆ ಚಾಂಡಿಮಲ್ 7 ಟಿ20 ಪಂದ್ಯಗಳಲ್ಲಿ ಕೇವಲ 65 ರನ್ ಗಳಿಸಿ ಫಾರ್ಮ್ನಲ್ಲಿಲ್ಲದೆ ಪರದಾಡುತ್ತಿದ್ದರು. ಹೀಗಾಗಿ ಸೆಮೀಸ್, ಫೈನಲ್ನಿಂದ ಸ್ವತಃ ಹೊರಗುಳಿದಿದ್ದ ಚಾಂಡಿಮಲ್, ಲಹಿರು ತಿರಿಮನ್ನೆಗೆ ತಂಡದಲ್ಲಿ ಸ್ಥಾನ ಮತ್ತು ಲಸಿತ್ ಮಾಲಿಂಗಗೆ ನಾಯಕತ್ವ ಬಿಟ್ಟುಕೊಟ್ಟಿದ್ದರು. ಇವೆರಡು ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್, ಭಾರತ ತಂಡಗಳನ್ನು ಮಣಿಸಿ ಲಂಕಾ ಟಿ20 ವಿಶ್ವಕಪ್ ಗೆದ್ದಿತ್ತು. ಟೂರ್ನಿಯ ನಂತರದಲ್ಲಿ ಚಾಂಡಿಮಲ್ ಮತ್ತೆ ಮೂರೂ ಪ್ರಕಾರದಲ್ಲಿ ಲಂಕಾ ನಾಯಕತ್ವ ವಹಿಸಿಕೊಂಡಿದ್ದರು.
ಟೀಮ್ ನ್ಯೂಸ್:
ಭಾರತ: ಟಾಸ್ಗೆ ಮುನ್ನ ಪಿಚ್ ಪರಿಶೀಲಿಸಿ ಆಡುವ 11ರ ಬಳಗವನ್ನು ಅಂತಿಮಗೊಳಿಸಲಿದ್ದೇವೆ ಎಂದು ಕೋಚ್ ಗಂಭೀರ್ ಹೇಳಿರುವ ನಡುವೆಯೂ, ನಾಯಕ ರೋಹಿತ್ ಶರ್ಮ ಹೊರಗುಳಿಯುವ ಸಾಧ್ಯತೆ ಸ್ಪಷ್ಟವಾಗಿದೆ. ರೋಹಿತ್ ಬದಲಿಗೆ ಶುಭಮಾನ್ ಗಿಲ್ ತಂಡದಲ್ಲಿ ಸ್ಥಾನ ಪಡೆದರೆ, ಜಸ್ಪ್ರೀತ್ ಬುಮ್ರಾ ಮತ್ತೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಮತ್ತು ಕನ್ನಡಿಗ ಕೆಎಲ್ ರಾಹುಲ್ ಮತ್ತೊಮ್ಮೆ ಆರಂಭಿಕರಾಗಿ ಆಡಲಿದ್ದಾರೆ ಎನ್ನಲಾಗಿದೆ. ಇದಲ್ಲದೆ ಬೆನ್ನು ನೋವಿನಿಂದಾಗಿ ವೇಗಿ ಆಕಾಶ್ದೀಪ್ ಪಂದ್ಯಕ್ಕೆ ಅಲಭ್ಯರಾಗಿದ್ದು, ಅವರ ಸ್ಥಾನ ತುಂಬಲು ಕನ್ನಡಿಗ ಪ್ರಸಿದ್ಧಕೃಷ್ಣ ಮತ್ತು ಹರ್ಷಿತ್ ರಾಣಾ ನಡುವೆ ಪೈಪೋಟಿ ಇದೆ. ಇನ್ನು ವಾಷಿಂಗ್ಟನ್ ಸುಂದರ್ ಬದಲಿಗೆ ಧ್ರುವ ಜುರೆಲ್ ಬ್ಯಾಟರ್ ಆಗಿ ಸ್ಥಾನ ಪಡೆಯುವ ನಿರೀೆ ಇದೆ.
ಆಸ್ಟ್ರೆಲಿಯಾ: ಎಂದಿನಂತೆ ಆತಿಥೇಯರು ಈ ಸಲವೂ ಪಂದ್ಯಕ್ಕೆ ಮುನ್ನಾದಿನವೇ ಆಡುವ 11ರ ಬಳಗವನ್ನು ಅಂತಿಮಗೊಳಿಸಿದ್ದಾರೆ. ಇದರನ್ವಯ ಮಿಚೆಲ್ ಮಾರ್ಷ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಬಲಗೈ ಬ್ಯಾಟಿಂಗ್, ಮಧ್ಯಮ ವೇಗ ಮತ್ತು ಆ್ ಸ್ಪಿನ್ ಬೌಲಿಂಗ್ ನಡೆಸಬಲ್ಲ ಆಲ್ರೌಂಡರ್ ಬೆಯು ವೆಬ್ಸ್ಟರ್ 31ನೇ ವಯಸ್ಸಿನಲ್ಲಿ ಬ್ಯಾಗಿ ಗ್ರೀನ್ ಕ್ಯಾಪ್ ಪಡೆಯಲು ಸಜ್ಜಾಗಿದ್ದಾರೆ. ಮೆಕ್ಸ್ವೀನ್ ಮತ್ತು ಕಾನ್ಸ್ಟಾಸ್ ಬಳಿಕ ಅವರು ಸರಣಿಯಲ್ಲಿ ಆಸೀಸ್ ಪರ ಪದಾರ್ಪಣೆ ಮಾಡುತ್ತಿರುವ 3ನೇ ಆಟಗಾರರೆನಿಸಿದ್ದಾರೆ. ಪಕ್ಕೆಲುಬು ನೋವಿನ ನಡುವೆ ಮೆಲ್ಬೋರ್ನ್ನಲ್ಲಿ ಬೌಲಿಂಗ್ ಮಾಡಿದ್ದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಸಿಡ್ನಿ ಟೆಸ್ಟ್ಗೆ ಫಿಟ್ ಆಗಿದ್ದಾರೆ.
ಆರಂಭ: ಬೆಳಗ್ಗೆ 5.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಟ್
ಎಸ್ಸಿಜಿ ಪಿಚ್ನಲ್ಲಿ ಕ್ಯುರೇಟರ್ ಪಂದ್ಯಕ್ಕೆ ಮುನ್ನಾದಿನವೂ ಸ್ವಲ್ಪ ಪ್ರಮಾಣದ ಹಸಿರು ಹುಲ್ಲು ಉಳಿಸಿದ್ದಾರೆ. ಬೌಲರ್ಗಳಿಗೆ ಇದು ಹೆಚ್ಚಿನ ನೆರವು ನೀಡಿದರೂ ಸ್ಪರ್ಧಾತ್ಮಕವಾಗಿರಲಿದೆ ಎನ್ನಲಾಗಿದೆ. ಪಂದ್ಯದ ಕೊನೇ 2 ದಿನ ಮಳೆ ಅಡಚಣೆ ತರುವ ಸಾಧ್ಯತೆ ಇದೆ.
*38: ಸ್ಟೀವನ್ ಸ್ಮಿತ್ ಇನ್ನು 38 ರನ್ ಗಳಿಸಿದರೆ ಅಲನ್ ಬಾರ್ಡರ್, ಸ್ಟೀವನ್ ಸ್ಮಿತ್, ರಿಕಿ ಪಾಂಟಿಂಗ್ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಕಲೆಹಾಕಿದ 4ನೇ ಆಸೀಸ್ ಬ್ಯಾಟರ್ ಎನಿಸಲಿದ್ದಾರೆ.
*3: ಜಸ್ಪ್ರೀತ್ ಬುಮ್ರಾ (30) ಇನ್ನು 3 ವಿಕೆಟ್ ಕಬಳಿಸಿದರೆ ಬಾರ್ಡರ್-ಗಾವಸ್ಕರ್ ಟ್ರೋಫಿಯ ಸರಣಿಯೊಂದರಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಲಿದ್ದಾರೆ. 2000-01ರ ಸರಣಿಯಲ್ಲಿ ಹರ್ಭಜನ್ ಸಿಂಗ್ 32 ವಿಕೆಟ್ ಕಬಳಿಸಿದ್ದು ಹಾಲಿ ದಾಖಲೆಯಾಗಿದೆ.
*ಕೋಚ್ ಮತ್ತು ಆಟಗಾರರ ಮಾತುಕತೆ ಯಾವಾಗಲೂ ಡ್ರೆಸ್ಸಿಂಗ್ ರೂಮ್ನಲ್ಲೇ ಉಳಿಯಬೇಕು. ವರದಿಗಳೆಲ್ಲ ನಿಜವಾಗಿರಬೇಕೆಂದಿಲ್ಲ. ಪ್ರಾಮಾಣಿಕ ವ್ಯಕ್ತಿಗಳು ಡ್ರೆಸ್ಸಿಂಗ್ ರೂಮ್ನಲ್ಲಿ ಇರುವವರೆಗೆ ಭಾರತೀಯ ಕ್ರಿಕೆಟ್ ಸುರತವಾಗಿರುತ್ತದೆ. ಉತ್ತಮ ನಿರ್ವಹಣೆ ತೋರಿದರಷ್ಟೇ ಡ್ರೆಸ್ಸಿಂಗ್ ರೂಮ್ನಲ್ಲಿ ಉಳಿದುಕೊಳ್ಳಲು ಸಾಧ್ಯ. ವೈಯಕ್ತಿಕ ಕ್ರೀಡೆಗಳಲ್ಲಿ ಆಟಗಾರರು ಸ್ವಾಭಾವಿಕ ಆಟವಾಡಬಹುದು. ಆದರೆ ತಂಡ ಕ್ರೀಡೆಯಲ್ಲಿ ತಂಡಕ್ಕಾಗಿ ಆಡುವುದು ಅಗತ್ಯ ಎಂಬುದು ನನ್ನ ಸೂತ್ರವಾಗಿದೆ.
| ಗೌತಮ್ ಗಂಭೀರ್, ಭಾರತ ತಂಡದ ಕೋಚ್
6: ಬುಮ್ರಾ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದರೆ, ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಎನಿಸಲಿದ್ದಾರೆ. ಕನ್ನಡಿಗ ಬಿಎಸ್ ಚಂದ್ರಶೇಖರ್ 1972-73ರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 35 ವಿಕೆಟ್ ಕಬಳಿಸಿರುವುದು ಹಾಲಿ ದಾಖಲೆಯಾಗಿದೆ.