

ಬೆಂಗಳೂರು: ಹೊಸ ವರುಷವನ್ನು ಹರುಷದಿಂದ ಸ್ವಾಗತಿಸಿರುವ ಸಮಯದಲ್ಲಿ ಕ್ರೀಡಾತಾರೆಯರು ಹೊಸ ವರ್ಷದ ಹೊಸ ಸವಾಲುಗಳಿಗೆ ಸಜ್ಜಾಗಬೇಕಾಗಿದೆ. ಒಲಿಂಪಿಕ್ಸ್ ಮುಗಿದ ಮರುವರ್ಷ ಕ್ರಿಕೆಟೇತರ ಕ್ರೀಡೆಗಳಲ್ಲಿ ದೊಡ್ಡ ಮಟ್ಟದ ಸವಾಲುಗಳು ಇರುವುದಿಲ್ಲ. ಆದರೆ ಮುಂದಿನ ಒಲಿಂಪಿಕ್ಸ್ಗೆ ಸಿದ್ಧತೆ-ಅರ್ಹತೆಯ ದೃಷ್ಟಿಯಿಂದ ಈಗಿನಿಂದಲೇ ಪರಿಶ್ರಮ ಆರಂಭಿಸಬೇಕಾಗಿದೆ. ಭಾರತೀಯ ಕ್ರಿಕೆಟ್ನಲ್ಲೂ ಇದು ಸ್ಥಿತ್ಯಂತರದ ಸಮಯ. ಹೀಗಾಗಿ ಹಿರಿಯ ಕ್ರಿಕೆಟಿಗರು ವೃತ್ತೀಜಿವನ ಬೆಳೆಸುವ ಅಥವಾ ಯುವಕರಿಗೆ ದಾರಿ ಬಿಡುವ ನಿರ್ಧಾರವನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಇದು ಪ್ರಮುಖ ವರ್ಷವೆನಿಸಿದೆ. ಜತೆಗೆ ಯಶಸ್ವಿ ಕ್ರೀಡಾ ಜೀವನದ ಬಳಿಕ ತರಬೇತಿಯತ್ತ ಗಮನಹರಿಸಿರುವ ಕ್ರೀಡಾಪಟುಗಳಿಗೂ ಇದು ಸವಾಲಿನ ವರ್ಷವೆನಿಸಿದೆ.
*ವಿರಾಟ್ ಕೊಹ್ಲಿ
ಟಿ20 ವಿಶ್ವಕಪ್ ಗೆಲುವಿನ ನಡುವೆ ವಿರಾಟ್ ಕೊಹ್ಲಿ ಪಾಲಿಗೆ 2024 ಉತ್ತಮ ವರ್ಷವೆನಿಸಲಿಲ್ಲ. ಇಡೀ ವರ್ಷ ಒಂದೇ ಶತಕ ಸಹಿತ 500 ಪ್ಲಸ್ ರನ್ ಮಾತ್ರ ಗಳಿಸಿದರು. ಅವರ ಬ್ಯಾಟಿಂಗ್ ಫಾರ್ಮ್ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಈ ಸಮಯದಲ್ಲಿ ಟೀಕಾಕಾರರಿಗೆ ದಿಟ್ಟ ಉತ್ತರ ನೀಡಿ ವೃತ್ತೀಜಿವನವನ್ನು ಇನ್ನೂ 2&3 ವರ್ಷಗಳ ಕಾಲ ಬೆಳೆಸಲು ಇದು ಸಕಾಲವೆನಿಸಿದೆ. ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ಪ್ರವಾಸದ 5 ಪಂದ್ಯಗಳ ಟೆಸ್ಟ್ ಸರಣಿ 36 ವರ್ಷದ ಕೊಹ್ಲಿ ಪಾಲಿಗೆ ಮಹತ್ವದ್ದಾಗಿದೆ.
*ರೋಹಿತ್ ಶರ್ಮ
ನ್ಯೂಜಿಲೆಂಡ್, ಆಸ್ಟ್ರೆಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೆಟ್ಟ ನಿರ್ವಹಣೆ ಮತ್ತು ರನ್ಬರದಿಂದಾಗಿ 37 ವರ್ಷದ ರೋಹಿತ್ ಶರ್ಮ ವೃತ್ತೀಜಿವನ ಸಂಧ್ಯಾಕಾಲದತ್ತ ಸಾಗುತ್ತಿರುವಂತಿದೆ. ಇನ್ನೂ ಒಂದೆರಡು ವರ್ಷ ಆಡಿ ಗೌರವಯುತ ವಿದಾಯ ಹೇಳುವಂತಾಗಲು ರೋಹಿತ್ ಹೊಸ ವರ್ಷ ಲಯಕ್ಕೆ ಮರಳುವುದು ಅಗತ್ಯವೆನಿಸಿದೆ. ಸಿಡ್ನಿ ಟೆಸ್ಟ್, ಚಾಂಪಿಯನ್ಸ್ ಟ್ರೋಫಿ ಮತ್ತು ಐಪಿಎಲ್ ಅವರ ಭವಿಷ್ಯವನ್ನು ನಿರ್ಧರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿವೆ.
*ಪಿವಿ ಸಿಂಧು
ಎರಡು ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡ ಬೆನ್ನಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಹೊಸ ವರ್ಷ ಸಂಸಾರ ಮತ್ತು ವೃತ್ತೀಜಿವನದ ನಡುವೆ ಸಾಮರಸ್ಯ ಸಾಧಿಸುವ ಹೊಸ ಸವಾಲು ಎದುರಾಗಲಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ವರೆಗೆ ಆಡುವ ಗುರಿ ಹೊಂದಿರುವ ಸಿಂಧು, ಸಯ್ಯದ್ ಮೋದಿ ಪ್ರಶಸ್ತಿ ಗೆಲುವಿನೊಂದಿಗೆ ಸಿಕ್ಕ ಲಯವನ್ನು ಹೊಸ ವರ್ಷವೂ ಕಾಯ್ದುಕೊಳ್ಳಬೇಕಾಗಿದೆ.
*ನೀರಜ್ ಚೋಪ್ರಾ
ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾಗೆ 2024ರ ಉತ್ತಮ ವರ್ಷವೇ ಆಗಿದ್ದರೂ, ಅವರು ಹೆಚ್ಚಿನ ಸ್ಪರ್ಧೆಗಳಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇದಕ್ಕೆ ಪ್ರಮುಖ ಕಾರಣ ಅವರು 90 ಮೀಟರ್ ಗಡಿ ದಾಟದಿರುವುದು ಮತ್ತು ಪದೇಪದೆ ಕಾಡಿದ ಗಾಯದಿಂದಾಗಿ ಪೂರ್ಣ ಫಿಟ್ ಆಗಿರದಿದ್ದುದು. ಹಾಲಿ ವರ್ಷ ಹೊಸ ಕೋಚ್ ಹಾಗೂ ದಿಗ್ಗಜ ಜಾನ್ ಜೆಲೆಜ್ನಿ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿರುವ ನೀರಜ್ ಮತ್ತೆ ಜಾವೆಲಿನ್ ಜಗತ್ತಿನಲ್ಲಿ "ಚಿನ್ನದ ಹುಡುಗ'ನಾಗಿ ಮಿಂಚುವ ಉತ್ಸಾಹದಲ್ಲಿದ್ದಾರೆ. ಹೊಸ ವರ್ಷ ವಿಶ್ವ ಮತ್ತು ಏಷ್ಯನ್ ಚಾಂಪಿಯನ್ಷಿಪ್ ಪ್ರಮುಖ ಸವಾಲೆನಿಸಿದೆ.
*ಮನು ಭಾಕರ್
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅವಳಿ ಕಂಚಿಗೆ ಗುರಿ ಇಟ್ಟ ಬಳಿಕ ಶೂಟರ್ ಮನು ಭಾಕರ್ ಇನ್ನೂ ಪಿಸ್ತೂಲ್ ಕೈಗೆತ್ತಿಕೊಂಡಿಲ್ಲ. ಖೇಲ್ರತ್ನ ಪ್ರಶಸ್ತಿ ವಿಚಾರದಲ್ಲೂ ವಿವಾದಗಳನ್ನು ಎದುರಿಸಿದ ಮನು, 2025ರಲ್ಲಿ ಯಶಸ್ಸನ್ನು ತಲೆಗೇರಿಸಿಕೊಳ್ಳದೆ ಮತ್ತೆ ಶೂಟಿಂಗ್ನತ್ತ ಗಮನ ಕೇಂದ್ರೀಕರಿಸಬೇಕಾಗಿದೆ. ಹೆಚ್ಚುತ್ತಿರುವ ಬ್ರ್ಯಾಂಡ್ ಮೌಲ್ಯದ ನಡುವೆ 2026ರ ಏಷ್ಯನ್ ಗೇಮ್ಸ್, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಅರ್ಹತೆಯತ್ತ ಮನು ಏಕಾಗ್ರತೆ ವಹಿಸಬೇಕಾಗಿದೆ.
*ಗೌತಮ್ ಗಂಭೀರ್
ಅಪಾರ ನಿರೀೆಯೊಂದಿಗೆ ಟೀಮ್ ಇಂಡಿಯಾದ ಕೋಚ್ ಹುದ್ದೆಗೇರಿದ ಗೌತಮ್ ಗಂಭೀರ್ಗೆ 2024 ಮುಳ್ಳಿನ ಹಾದಿಯೇ ಆಗಿತ್ತು. 2025ರಲ್ಲಾದರೂ ಅವರು ಭಾರತ ತಂಡದಿಂದ ನಿರೀೆ ತಕ್ಕ ನಿರ್ವಹಣೆಯನ್ನು ಹೊರಹೊಮ್ಮಿಸಬೇಕಾಗಿದೆ. ವರ್ಷಾರಂಭದ ಸಿಡ್ನಿ ಟೆಸ್ಟ್, ತವರಿನ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗಂಭೀರ್ ಹುದ್ದೆಯ ಭವಿಷ್ಯ ನಿರ್ಧರಿಸಲಿವೆ. ಈ ಸವಾಲುಗಳಲ್ಲಿ ಯಶಸ್ಸು ಕಂಡರಷ್ಟೇ ಗಂಭೀರ್ ಜೂನ್ನಲ್ಲಿ ಶುರುವಾಗಲಿರುವ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯವರೆಗೆ ಹುದ್ದೆ ಕಾಯ್ದುಕೊಳ್ಳುವ ಸಾಧ್ಯತೆ ಇದೆ.
*ಪಿಆರ್ ಶ್ರೀಜೇಶ್
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸತತ 2ನೇ ಕಂಚಿನ ಪದಕ ಒಲಿಸಿಕೊಂಡ ಬೆನ್ನಲ್ಲೇ ವಿದಾಯ ಹೇಳಿದ ಭಾರತ ಹಾಕಿ ತಂಡದ ಗೋಲು ಕೀಪರ್ ಪಿಆರ್ ಶ್ರೀಜೇಶ್, ದ್ರಾವಿಡ್ ಪ್ರೇರಣೆಯಿಂದ ಕಿರಿಯರ ತಂಡದ ಕೋಚ್ ಆಗಿ ಹೊಸ ಸವಾಲು ಸ್ವೀಕರಿಸಿದರು. ಕಿರಿಯರ ಏಷ್ಯಾಕಪ್ ಗೆಲುವಿನೊಂದಿಗೆ ಹೊಸ ಹುದ್ದೆಯಲ್ಲಿ ಶುಭಾರಂಭ ಮಾಡಿರುವ ಶ್ರೀಜೇಶ್ಗೆ ಹೊಸ ವರ್ಷದ ಅಂತ್ಯದಲ್ಲಿ ಭಾರತದಲ್ಲೇ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್ಗೆ ಬಲಿಷ್ಠ ತಂಡವನ್ನು ಕಟ್ಟುವುದು ಪ್ರಮುಖ ಸವಾಲಾಗಿದೆ.