

ಮೆಲ್ಬೋರ್ನ್: ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಕೊನೇ ದಿನ ಗೆಲುವಿಗೆ 340 ರನ್ ಸವಾಲು ಪಡೆದ ಭಾರತ ತಂಡ, ಅಗ್ರ 3 ವಿಕೆಟ್ಗಳನ್ನು 33 ರನ್ಗಳಿಗೆ ಕಳೆದುಕೊಂಡು ಸೋಳಿನ ಸುಳಿಗೆ ಸಿಲುಕಿತು. ಆಗ ಯಶಸ್ವಿ ಜೈಸ್ವಾಲ್ (84 ರನ್, 208 ಎಸೆತ, 8 ಬೌಂಡರಿ) ಮತ್ತು ರಿಷಭ್ ಪಂತ್ (30 ರನ್, 104 ಎಸೆತ, 2 ಬೌಂಡರಿ) ಜೋಡಿ 32 ಓವರ್ಗಳ ಕಾಲ ಆಸೀಸ್ ಬೌಲರ್ಗಳನ್ನು ಸತಾಯಿಸಿ ಭಾರತಕ್ಕೆ ಡ್ರಾ ಸಾಧಿಸುವ ಆಸೆ ಮೂಡಿಸಿತು. ಆದರೆ ಚಹಾ ವಿರಾಮದ ಬಳಿಕ ದಿಢೀರ್ ಕುಸಿತ ಕಂಡ ಭಾರತ 79.1 ಓವರ್ಗಳಲ್ಲಿ 155 ರನ್ಗಳಿಗೆ ಆಲೌಟ್ ಆಗಿ ಶರಣಾಯಿತು. ಭೋಜನ ವಿರಾಮದಿಂದ ಚಹಾ ವಿರಾಮದವರೆಗೆ ಒಂದೂ ವಿಕೆಟ್ ಬೀಳದಂತೆ ಎಚ್ಚರಿಕೆ ವಹಿಸಿ ಕ್ರೀಸ್ನಲ್ಲಿ ನಿಂತ ಜೈಸ್ವಾಲ್-ರಿಷಭ್ ಪಂತ್ ಜೋಡಿ ತಾಳ್ಮೆಯ ಬ್ಯಾಟಿಂಗ್ ಆಸೀಸ್ ಬೌಲರ್ಗಳಿಗೆ ಸವಾಲಾಗಿ ಭಾರತಕ್ಕೆ ಡ್ರಾ ಸಾಧಿಸುವ ಅವಕಾಶ ಸೃಷ್ಟಿಸಿತು. ಜೈಸ್ವಾಲ್ ಕೆಲ ಜೀವದಾನಗಳ ಲಾಭದಿಂದ 200ಕ್ಕೂ ಅಧಿಕ ಎಸೆತ ಎದುರಿಸಿ ನಿಂತರೆ, ಪಂತ್ ಎಂದಿನ ಆಕ್ರಮಣಕಾರಿ ಆಟವನ್ನು ಮರೆತು ತಾಳ್ಮೆಯೊಂದಿಗೆ 100ಕ್ಕೂ ಅಧಿಕ ಎಸೆತ ಎದುರಿಸಿದರು. 4ನೇ ವಿಕೆಟ್ಗೆ ಇವರಿಬ್ಬರು 197 ಎಸೆತಗಳಲ್ಲಿ 88 ರನ್ ಸೇರಿಸಿದರು. ಆದರೆ ಚಹಾ ವಿರಾಮದ ಬಳಿಕ ಅರೆಕಾಲಿಕ ಸ್ಪಿನ್ನರ್ ಟ್ರಾವಿಸ್ ಹೆಡ್ ದಾಳಿಗೆ ಇಳಿದಾಗ ತಾಳ್ಮೆ ಕಳೆದುಕೊಂಡ ಪಂತ್, ದೊಡ್ಡ ಹೊಡೆತಕ್ಕೆ ಕೈಹಾಕಿ ಲಾಂಗ್ಆನ್ನಲ್ಲಿ ಮಿಚೆಲ್ ಮಾರ್ಷ್ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಭಾರತದ ಕುಸಿತವೂ ಆರಂಭಗೊಂಡಿತು.
ಪಂತ್ ಔಟಾದ ಬಳಿಕವೂ ಏಕಾಂಗಿ ಹೋರಾಟದ ಮೂಲಕ ಡ್ರಾ ಸಾಧಿಸುವ ಭರವಸೆ ಮೂಡಿಸಿದ್ದ ಜೈಸ್ವಾಲ್ ವಿವಾದಾತ್ಮಕ ರೀತಿಯಲ್ಲಿ ಔಟಾಗಿದ್ದು ಭಾರತಕ್ಕೆ ಸೋಲು ಖಚಿತಪಡಿಸಿತು. ಕಮ್ಮಿನ್ಸ್ ಎಸೆದ ಶಾರ್ಟ್ಬಾಲ್ಗೆ ಜೈಸ್ವಾಲ್ ಪುಲ್ ಮಾಡಲು ಯತ್ನಿಸಿದಾಗ ಚೆಂಡು ಕೀಪರ್ ಕ್ಯಾರಿ ಕೈಸೇರಿತು. ಆಗ ಚೆಂಡು ಬ್ಯಾಟ್ ಅಥವಾ ಗ್ಲೌಸ್ಗೆ ಸ್ಪರ್ಶಿಸಿದೆ ಎಂಬ ಮನವಿಯನ್ನು ಮೈದಾನದ ಅಂಪೈರ್ ತಿರಸ್ಕರಿಸಿದಾಗ ಆಸೀಸ್ ಡಿಆರ್ಎಸ್ ಮೊರೆ ಹೋಯಿತು. ಆಗ ಅಲ್ಟ್ರಾ ಎಡ್ಜ್ ತಂತ್ರಜ್ಞಾನದಲ್ಲಿ ಚೆಂಡು ಬ್ಯಾಟ್ ಅಥವಾ ಗ್ಲೌಸ್ ಸ್ಪರ್ಶಿಸಿದ ಯಾವ ಕುರುಹೂ ಕಾಣಿಸಲಿಲ್ಲ. ಆದರೆ ಮರುಪ್ರಸಾರವನ್ನು ಬರಿಗಣ್ಣಿನಲ್ಲಿ ನೋಡಿದಾಗ ಚೆಂಡು ಗ್ಲೌಸ್ಗೆ ಸ್ಪರ್ಶಿಸಿದಂತೆ ಕಾಣಿಸಿದ್ದಲ್ಲದೆ, ಚೆಂಡು ಪಥ ಬದಲಾಯಿಸಿದ ಕಾರಣದಿಂದ ತೃತೀಯ ಅಂಪೈರ್ ಔಟ್ ತೀರ್ಪಿತ್ತರು.
ಆಗಿನ್ನೂ ದಿನದಾಟದಲ್ಲಿ 21 ಓವರ್ ಬಾಕಿ ಉಳಿದಿದ್ದ ಕಾರಣ ಭಾರತಕ್ಕೆ ಡ್ರಾ ಸಾಧಿಸುವ ಹಾದಿಯೂ ಬಹುತೇಕ ಮುಚ್ಚಿಹೋಯಿತು ಮತ್ತು ಆಸೀಸ್ ಗೆಲುವಿನ ಹಾದಿ ಸುಗಮಗೊಂಡಿತು. ಇದರಿಂದ, ಚೆಂಡು ಎಡ್ಜ್ ಆದ ಬಗ್ಗೆ ಸ್ನಿಕೋದಲ್ಲಿ ಯಾವುದೇ ತಾಂತ್ರಿಕ ದಾಖಲೆ ಇಲ್ಲದಿದ್ದರೂ, ತೃತೀಯ ಅಂಪೈರ್ ಬಾಂಗ್ಲಾದೇಶದ ಸೈಕತ್ ಶರ್ಪುದ್ದೌಲಾ ಔಟ್ ತೀರ್ಪು ನೀಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.
ಪಂದ್ಯದ ಬಳಿಕ ತೃತೀಯ ಅಂಪೈರ್ ಬಗ್ಗೆ ಟೀಕಿಸದ ನಾಯಕ ರೋಹಿತ್ ಶರ್ಮ, ಚೆಂಡು ಜೈಸ್ವಾಲ್ ಗ್ಲೌಸ್ ಸ್ಪರ್ಶಿಸಿದಂತೆ ಕಂಡಿದ್ದು ನಿಜ ಎಂದರು. ಆದರೆ ಪ್ರತಿ ಬಾರಿ ಇಂಥ ವಿವಾದಾತ್ಮಕ ನಿರ್ಧಾರಗಳು ಬಂದಾಗ ನಮಗೇ ಯಾಕೆ ನಷ್ಟವಾಗುತ್ತದೆ ಎಂದು ಬೇಸರಿಸಿದರು.