

ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಐಪಿಎಲ್ 14ನೇ ಆವೃತ್ತಿ ಈಗ ಮುಕ್ತಾಯದ ಹಂತಕ್ಕೆ ಬರಬೇಕಾಗಿತ್ತು ಮತ್ತು ಇದೇ ಸಮಯದಲ್ಲಿ 2022ರ ಆವೃತ್ತಿಗೆ ಸೇರಿಸುವ ಹೊಸ ತಂಡಕ್ಕೆ ಬಿಸಿಸಿಐ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕಾಗಿತ್ತು. ಆದರೆ ಕರೊನಾ ಹಾವಳಿಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿಯ ಮರುನಿಗದಿಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದ ಕಾರಣ ಇದೀಗ ಹೊಸ ಐಪಿಎಲ್ ತಂಡದ ಟೆಂಡರ್ ಪ್ರಕ್ರಿಯೆ ಕೂಡ ವಿಳಂಬಗೊಂಡಿದೆ.
ಮೇನಲ್ಲಿ ಹೊಸ ತಂಡಕ್ಕೆ ಟೆಂಡರ್ ಆಹ್ವಾನಿಸಲು ಬಿಸಿಸಿಐ ಸಿದ್ಧವಾಗಿತ್ತು. ಆದರೆ ಇದೀಗ ಕನಿಷ್ಠ ಜುಲೈವರೆಗೆ ಈ ಪ್ರಕ್ರಿಯೆ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಬಿಸಿಸಿಐ ಈಗ 2021ರ ಆವೃತ್ತಿಯನ್ನು ಪೂರ್ಣಗೊಳಿಸಲು ಹೆಚ್ಚಿನ ಆದ್ಯತೆ ನೀಡಿದ್ದು, ಅದರತ್ತ ಹೆಚ್ಚು ಗಮನ ಹರಿಸಿದೆ. ಹೀಗಾಗಿ ಸದ್ಯಕ್ಕೆ ಹೊಸ ತಂಡದ ಸೇರ್ಪಡೆ ಸಂಬಂಧ ಬಿಸಿಸಿಐ ವಲಯದಲ್ಲಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ.
‘ಐಪಿಎಲ್‌ಗೆ ಹೊಸ ತಂಡದ ಸೇರ್ಪಡೆ ಬಗ್ಗೆ ಚರ್ಚಿಸಲು ಇದು ಸರಿಯಾದ ಸಮಯವಲ್ಲ. ಮೊಟಕುಗೊಂಡಿರುವ ಐಪಿಎಲ್ ಟೂರ್ನಿಯನ್ನು ಮರುನಿಗದಿಗೊಳಿಸುವ ಬಗ್ಗೆ ಮೊದಲು ನಿರ್ಧರಿಸಬೇಕಾಗಿದೆ. ಬಳಿಕವಷ್ಟೇ ಹೊಸ ತಂಡದ ಸೇರ್ಪಡೆ ಬಗ್ಗೆ ನಿರ್ಧರಿಸಬಹುದಾಗಿದೆ. ಜುಲೈವರೆಗೆ ಹೊಸ ತಂಡದ ಸೇರ್ಪಡೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಐಪಿಎಲ್ 15ನೇ ಆವೃತ್ತಿಗೆ 2 ಹೊಸ ತಂಡಗಳನ್ನು ಸೇರಿಸಿಕೊಳ್ಳಲು ಬಿಸಿಸಿಐ ಕಳೆದ ಮಾರ್ಚ್‌ನಲ್ಲಿ ನಿರ್ಧರಿಸಿತ್ತು. ಇದರಿಂದ 2022ರ ಐಪಿಎಲ್‌ನಲ್ಲಿ ಆಡುವ ತಂಡಗಳ ಸಂಖ್ಯೆ 10ಕ್ಕೇರಲಿದೆ. 2020-21ರ ಆರ್ಥಿಕ ವರ್ಷ ಮುಗಿದ ಬಳಿಕವೇ ಹೊಸ ತಂಡಗಳಿಗೆ ಟೆಂಡರ್ ಕರೆಯಲು ಬಯಸಿದ್ದ ಬಿಸಿಸಿಐ, ಇದಕ್ಕಾಗಿ ಮೇನಲ್ಲಿ ನಡೆಸುವ ಯೋಜನೆ ಹಾಕಿಕೊಂಡಿತ್ತು. ಆದರೆ ದೇಶದ ಕರೊನಾ 2ನೇ ಅಲೆಯ ಅಬ್ಬರದಿಂದಾಗಿ ಇದೀಗ ಬಿಸಿಸಿಐ ಯೋಜನೆ ತಲೆಕೆಳಗಾಗಿದೆ.
ಐಪಿಎಲ್ 14ನೇ ಆವೃತ್ತಿ ಪೂರ್ಣಗೊಳ್ಳದಿದ್ದರೆ ಬಿಸಿಸಿಐ ಸುಮಾರು ಎರಡೂವರೆ ಸಾವಿರ ಕೋಟಿ ರೂ. ನಷ್ಟ ಕಾಣುವ ಭೀತಿಯಲ್ಲಿದೆ. ಟೂರ್ನಿ 60 ಪಂದ್ಯಗಳ ಪೈಕಿ ಸದ್ಯ 29 ಪಂದ್ಯಗಳಷ್ಟೇ ನಡೆದಿವೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್‌ಗೆ ಮುನ್ನ ಅಥವಾ ನವೆಂಬರ್-ಡಿಸೆಂಬರ್‌ನಲ್ಲಿ ಟಿ20 ವಿಶ್ವಕಪ್ ಬಳಿಕ ಐಪಿಎಲ್ ಪೂರ್ಣಗೊಳಿಸುವ ಬಗ್ಗೆ ಬಿಸಿಸಿಐ ಸದ್ಯ ಚಿಂತನೆ ನಡೆಸಿದೆ.
ತಂಡಗಳಿಗೆ ₹1,500 ಕೋಟಿ ಮೂಲಬೆಲೆ?
ಐಪಿಎಲ್‌ನಲ್ಲಿ ಆಡಲಿರುವ 2 ಹೊಸ ತಂಡಗಳ ಮೂಲಬೆಲೆ 1,500 ಕೋಟಿ ರೂ. ಆಗಿರಲಿದೆ ಎಂದೂ ವರದಿಯಾಗಿದೆ. ಇದು 2008ರಲ್ಲಿ ಐಪಿಎಲ್ ಆರಂಭಗೊಂಡಿದ್ದಾಗ ತಂಡಗಳು ಪಡೆದಿದ್ದ ಮೌಲ್ಯಕ್ಕಿಂತ 12-15 ಪಟ್ಟು ಅಧಿಕವಾಗಿದೆ ಎನ್ನಲಾಗಿದೆ. ಆದರೆ ಐಪಿಎಲ್ ತಂಡಗಳ ಮೌಲ್ಯ ಪ್ರತಿ ವರ್ಷ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಈ ಮೂಲಬೆಲೆ ನಿಗದಿಪಡಿಸುತ್ತಿದೆ ಎನ್ನಲಾಗಿದೆ. 2018ರಲ್ಲಿ ಜೆಎಸ್‌ಡಬ್ಲ್ಯು ಕಂಪನಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶೇ. 50 ಷೇರನ್ನು 1,100 ಕೋಟಿ ರೂ.ಗಳಿಗೆ ಪಡೆದುಕೊಂಡಿತ್ತು. ಹೀಗಾಗಿ ಹೀಗಾಗಿ ಹೊಸ ತಂಡಗಳ ಮೂಲಬೆಲೆ ಕಡಿಮೆಯೇ ಆಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.