

ನವದೆಹಲಿ: ಆನ್ಲೈನ್ ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ ಡ್ರೀಮ್11ಗೆ ಶೀರ್ಷಿಕೆ ಪ್ರಾಯೋಜಕತ್ವ ನೀಡಿದ ಬೆನ್ನಲ್ಲೇ ಬಿಸಿಸಿಐ, ಐಪಿಎಲ್ 13ನೇ ಆವೃತ್ತಿಯ ವೇಳೆ ಬಳಸಲಾಗುವ ಹೊಸ ಲಾಂಛನವನ್ನು ಬಿಡುಗಡೆಗೊಳಿಸಿದೆ.
ಹೊಸ ಲಾಂಛನವನ್ನು ಇನ್ಸ್ಟಾಗ್ರಾಂನಲ್ಲಿ 'ಡ್ರೀಮ್11ಐಪಿಎಲ್' ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಐಪಿಎಲ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈ ಹಿಂದಿನ ಚೀನಾ ಮೂಲದ ಮೊಬೈಲ್ ಕಂಪನಿ ವಿವೋ ಇದ್ದ ಜಾಗಕ್ಕೆ ಈಗ ಡ್ರೀಮ್11 ಲಾಂಛನ ಬಂದಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಕೂಡ ಈ ಹೊಸ ಲಾಂಛನವನ್ನು ಷೇರ್ ಮಾಡಿದೆ.
ಡ್ರೀಮ್11 ಕಂಪನಿ ಗರಿಷ್ಠ 222 ಕೋಟಿ ರೂ. ಬಿಡ್ ಮಾಡುವ ಮೂಲಕ 2020ರ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಯಲಿದೆ. ಡ್ರೀಮ್11 ಒಟ್ಟು 3 ಆವೃತ್ತಿಯ ಐಪಿಎಲ್ ಟೂರ್ನಿಗೆ ಒಪ್ಪಂದ ಮಾಡಿಕೊಳ್ಳಲು ಬಯಸಿತ್ತು. ಆದರೆ 2021-22ರ ಟೂರ್ನಿಗಳಿಗೆ ಬಿಡ್ ಮಾಡಿದ ಮೊತ್ತ ಕಡಿಮೆ ಆಯಿತು ಎಂದು ಬಿಸಿಸಿಐ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಅದನ್ನು ತಿರಸ್ಕರಿಸಿದೆ.