ಚಾಲೆಂಜ್​ 2025: ಕ್ರೀಡಾತಾರೆಯರಿಗೆ ಹೊಸ ವರ್ಷ ಹೊಸ ಸವಾಲುಗಳು...

web 2025 challenge
Published on

ಬೆಂಗಳೂರು: ಹೊಸ ವರುಷವನ್ನು ಹರುಷದಿಂದ ಸ್ವಾಗತಿಸಿರುವ ಸಮಯದಲ್ಲಿ ಕ್ರೀಡಾತಾರೆಯರು ಹೊಸ ವರ್ಷದ ಹೊಸ ಸವಾಲುಗಳಿಗೆ ಸಜ್ಜಾಗಬೇಕಾಗಿದೆ. ಒಲಿಂಪಿಕ್ಸ್​ ಮುಗಿದ ಮರುವರ್ಷ ಕ್ರಿಕೆಟೇತರ ಕ್ರೀಡೆಗಳಲ್ಲಿ ದೊಡ್ಡ ಮಟ್ಟದ ಸವಾಲುಗಳು ಇರುವುದಿಲ್ಲ. ಆದರೆ ಮುಂದಿನ ಒಲಿಂಪಿಕ್ಸ್​ಗೆ ಸಿದ್ಧತೆ-ಅರ್ಹತೆಯ ದೃಷ್ಟಿಯಿಂದ ಈಗಿನಿಂದಲೇ ಪರಿಶ್ರಮ ಆರಂಭಿಸಬೇಕಾಗಿದೆ. ಭಾರತೀಯ ಕ್ರಿಕೆಟ್​ನಲ್ಲೂ ಇದು ಸ್ಥಿತ್ಯಂತರದ ಸಮಯ. ಹೀಗಾಗಿ ಹಿರಿಯ ಕ್ರಿಕೆಟಿಗರು ವೃತ್ತೀಜಿವನ ಬೆಳೆಸುವ ಅಥವಾ ಯುವಕರಿಗೆ ದಾರಿ ಬಿಡುವ ನಿರ್ಧಾರವನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಇದು ಪ್ರಮುಖ ವರ್ಷವೆನಿಸಿದೆ. ಜತೆಗೆ ಯಶಸ್ವಿ ಕ್ರೀಡಾ ಜೀವನದ ಬಳಿಕ ತರಬೇತಿಯತ್ತ ಗಮನಹರಿಸಿರುವ ಕ್ರೀಡಾಪಟುಗಳಿಗೂ ಇದು ಸವಾಲಿನ ವರ್ಷವೆನಿಸಿದೆ.

*ವಿರಾಟ್​ ಕೊಹ್ಲಿ

ಟಿ20 ವಿಶ್ವಕಪ್​ ಗೆಲುವಿನ ನಡುವೆ ವಿರಾಟ್​ ಕೊಹ್ಲಿ ಪಾಲಿಗೆ 2024 ಉತ್ತಮ ವರ್ಷವೆನಿಸಲಿಲ್ಲ. ಇಡೀ ವರ್ಷ ಒಂದೇ ಶತಕ ಸಹಿತ 500 ಪ್ಲಸ್​ ರನ್​ ಮಾತ್ರ ಗಳಿಸಿದರು. ಅವರ ಬ್ಯಾಟಿಂಗ್ ಫಾರ್ಮ್​ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಈ ಸಮಯದಲ್ಲಿ ಟೀಕಾಕಾರರಿಗೆ ದಿಟ್ಟ ಉತ್ತರ ನೀಡಿ ವೃತ್ತೀಜಿವನವನ್ನು ಇನ್ನೂ 2&3 ವರ್ಷಗಳ ಕಾಲ ಬೆಳೆಸಲು ಇದು ಸಕಾಲವೆನಿಸಿದೆ. ಸಿಡ್ನಿ ಟೆಸ್ಟ್​ ಪಂದ್ಯದ ಬಳಿಕ ಚಾಂಪಿಯನ್ಸ್​ ಟ್ರೋಫಿ ಮತ್ತು ಇಂಗ್ಲೆಂಡ್​ ಪ್ರವಾಸದ 5 ಪಂದ್ಯಗಳ ಟೆಸ್ಟ್​ ಸರಣಿ 36 ವರ್ಷದ ಕೊಹ್ಲಿ ಪಾಲಿಗೆ ಮಹತ್ವದ್ದಾಗಿದೆ.

*ರೋಹಿತ್​ ಶರ್ಮ

ನ್ಯೂಜಿಲೆಂಡ್​, ಆಸ್ಟ್ರೆಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಕೆಟ್ಟ ನಿರ್ವಹಣೆ ಮತ್ತು ರನ್​ಬರದಿಂದಾಗಿ 37 ವರ್ಷದ ರೋಹಿತ್​ ಶರ್ಮ ವೃತ್ತೀಜಿವನ ಸಂಧ್ಯಾಕಾಲದತ್ತ ಸಾಗುತ್ತಿರುವಂತಿದೆ. ಇನ್ನೂ ಒಂದೆರಡು ವರ್ಷ ಆಡಿ ಗೌರವಯುತ ವಿದಾಯ ಹೇಳುವಂತಾಗಲು ರೋಹಿತ್​ ಹೊಸ ವರ್ಷ ಲಯಕ್ಕೆ ಮರಳುವುದು ಅಗತ್ಯವೆನಿಸಿದೆ. ಸಿಡ್ನಿ ಟೆಸ್ಟ್​, ಚಾಂಪಿಯನ್ಸ್​ ಟ್ರೋಫಿ ಮತ್ತು ಐಪಿಎಲ್​ ಅವರ ಭವಿಷ್ಯವನ್ನು ನಿರ್ಧರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿವೆ.

*ಪಿವಿ ಸಿಂಧು

ಎರಡು ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡ ಬೆನ್ನಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧುಗೆ ಹೊಸ ವರ್ಷ ಸಂಸಾರ ಮತ್ತು ವೃತ್ತೀಜಿವನದ ನಡುವೆ ಸಾಮರಸ್ಯ ಸಾಧಿಸುವ ಹೊಸ ಸವಾಲು ಎದುರಾಗಲಿದೆ. 2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ವರೆಗೆ ಆಡುವ ಗುರಿ ಹೊಂದಿರುವ ಸಿಂಧು, ಸಯ್ಯದ್​ ಮೋದಿ ಪ್ರಶಸ್ತಿ ಗೆಲುವಿನೊಂದಿಗೆ ಸಿಕ್ಕ ಲಯವನ್ನು ಹೊಸ ವರ್ಷವೂ ಕಾಯ್ದುಕೊಳ್ಳಬೇಕಾಗಿದೆ.

*ನೀರಜ್​ ಚೋಪ್ರಾ

ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾಗೆ 2024ರ ಉತ್ತಮ ವರ್ಷವೇ ಆಗಿದ್ದರೂ, ಅವರು ಹೆಚ್ಚಿನ ಸ್ಪರ್ಧೆಗಳಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇದಕ್ಕೆ ಪ್ರಮುಖ ಕಾರಣ ಅವರು 90 ಮೀಟರ್​ ಗಡಿ ದಾಟದಿರುವುದು ಮತ್ತು ಪದೇಪದೆ ಕಾಡಿದ ಗಾಯದಿಂದಾಗಿ ಪೂರ್ಣ ಫಿಟ್​ ಆಗಿರದಿದ್ದುದು. ಹಾಲಿ ವರ್ಷ ಹೊಸ ಕೋಚ್​ ಹಾಗೂ ದಿಗ್ಗಜ ಜಾನ್​ ಜೆಲೆಜ್ನಿ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿರುವ ನೀರಜ್​ ಮತ್ತೆ ಜಾವೆಲಿನ್​ ಜಗತ್ತಿನಲ್ಲಿ "ಚಿನ್ನದ ಹುಡುಗ'ನಾಗಿ ಮಿಂಚುವ ಉತ್ಸಾಹದಲ್ಲಿದ್ದಾರೆ. ಹೊಸ ವರ್ಷ ವಿಶ್ವ ಮತ್ತು ಏಷ್ಯನ್​ ಚಾಂಪಿಯನ್​ಷಿಪ್​ ಪ್ರಮುಖ ಸವಾಲೆನಿಸಿದೆ.

*ಮನು ಭಾಕರ್​

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅವಳಿ ಕಂಚಿಗೆ ಗುರಿ ಇಟ್ಟ ಬಳಿಕ ಶೂಟರ್​ ಮನು ಭಾಕರ್​ ಇನ್ನೂ ಪಿಸ್ತೂಲ್​ ಕೈಗೆತ್ತಿಕೊಂಡಿಲ್ಲ. ಖೇಲ್​ರತ್ನ ಪ್ರಶಸ್ತಿ ವಿಚಾರದಲ್ಲೂ ವಿವಾದಗಳನ್ನು ಎದುರಿಸಿದ ಮನು, 2025ರಲ್ಲಿ ಯಶಸ್ಸನ್ನು ತಲೆಗೇರಿಸಿಕೊಳ್ಳದೆ ಮತ್ತೆ ಶೂಟಿಂಗ್​ನತ್ತ ಗಮನ ಕೇಂದ್ರೀಕರಿಸಬೇಕಾಗಿದೆ. ಹೆಚ್ಚುತ್ತಿರುವ ಬ್ರ್ಯಾಂಡ್​ ಮೌಲ್ಯದ ನಡುವೆ 2026ರ ಏಷ್ಯನ್​ ಗೇಮ್ಸ್​, 2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ ಅರ್ಹತೆಯತ್ತ ಮನು ಏಕಾಗ್ರತೆ ವಹಿಸಬೇಕಾಗಿದೆ.

*ಗೌತಮ್​ ಗಂಭೀರ್​

ಅಪಾರ ನಿರೀೆಯೊಂದಿಗೆ ಟೀಮ್​ ಇಂಡಿಯಾದ ಕೋಚ್​ ಹುದ್ದೆಗೇರಿದ ಗೌತಮ್​ ಗಂಭೀರ್​ಗೆ 2024 ಮುಳ್ಳಿನ ಹಾದಿಯೇ ಆಗಿತ್ತು. 2025ರಲ್ಲಾದರೂ ಅವರು ಭಾರತ ತಂಡದಿಂದ ನಿರೀೆ ತಕ್ಕ ನಿರ್ವಹಣೆಯನ್ನು ಹೊರಹೊಮ್ಮಿಸಬೇಕಾಗಿದೆ. ವರ್ಷಾರಂಭದ ಸಿಡ್ನಿ ಟೆಸ್ಟ್​, ತವರಿನ ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗಂಭೀರ್​ ಹುದ್ದೆಯ ಭವಿಷ್ಯ ನಿರ್ಧರಿಸಲಿವೆ. ಈ ಸವಾಲುಗಳಲ್ಲಿ ಯಶಸ್ಸು ಕಂಡರಷ್ಟೇ ಗಂಭೀರ್​ ಜೂನ್​ನಲ್ಲಿ ಶುರುವಾಗಲಿರುವ ಇಂಗ್ಲೆಂಡ್​ ಪ್ರವಾಸದ ಟೆಸ್ಟ್​ ಸರಣಿಯವರೆಗೆ ಹುದ್ದೆ ಕಾಯ್ದುಕೊಳ್ಳುವ ಸಾಧ್ಯತೆ ಇದೆ.

*ಪಿಆರ್​ ಶ್ರೀಜೇಶ್​

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸತತ 2ನೇ ಕಂಚಿನ ಪದಕ ಒಲಿಸಿಕೊಂಡ ಬೆನ್ನಲ್ಲೇ ವಿದಾಯ ಹೇಳಿದ ಭಾರತ ಹಾಕಿ ತಂಡದ ಗೋಲು ಕೀಪರ್​ ಪಿಆರ್​ ಶ್ರೀಜೇಶ್​, ದ್ರಾವಿಡ್​ ಪ್ರೇರಣೆಯಿಂದ ಕಿರಿಯರ ತಂಡದ ಕೋಚ್​ ಆಗಿ ಹೊಸ ಸವಾಲು ಸ್ವೀಕರಿಸಿದರು. ಕಿರಿಯರ ಏಷ್ಯಾಕಪ್​ ಗೆಲುವಿನೊಂದಿಗೆ ಹೊಸ ಹುದ್ದೆಯಲ್ಲಿ ಶುಭಾರಂಭ ಮಾಡಿರುವ ಶ್ರೀಜೇಶ್​ಗೆ ಹೊಸ ವರ್ಷದ ಅಂತ್ಯದಲ್ಲಿ ಭಾರತದಲ್ಲೇ ನಡೆಯಲಿರುವ ಜೂನಿಯರ್​ ಹಾಕಿ ವಿಶ್ವಕಪ್​ಗೆ ಬಲಿಷ್ಠ ತಂಡವನ್ನು ಕಟ್ಟುವುದು ಪ್ರಮುಖ ಸವಾಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net