ಡೈಮಂಡ್​ ಲೀಗ್ ಫೈನಲ್​ನಲ್ಲಿ ಇಂದು ನೀರಜ್​ ಚೋಪ್ರಾ ಕಣಕ್ಕೆ; ವಜ್ರದ ಟ್ರೋಫಿ ಮೇಲೆ ಗುರಿ!

web neeraj
Published on

ಬ್ರಸೆಲ್ಸ್​: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಕೈತಪ್ಪಿದ ನಿರಾಸೆಯ ಬಳಿಕ ನೀರಜ್​ ಚೋಪ್ರಾ "ವಜ್ರ'ದ ಮೇಲೆ ಕಣ್ಣಿಟ್ಟಿದ್ದಾರೆ. ಡೈಮಂಡ್​ ಲೀಗ್​ ಫೈನಲ್ಸ್​ನಲ್ಲಿ ಶನಿವಾರ ನಡೆಯಲಿರುವ ಪುರುಷರ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ ನೀರಜ್​ ವಜ್ರದ ಟ್ರೋಫಿ ಗೆಲುವಿನ ಹಂಬಲದಲ್ಲಿದ್ದಾರೆ.

ಡೈಮಂಡ್​ ಲೀಗ್​ನ ದೋಹಾ ಮತ್ತು ಲೊರನ್​ ಚರಣದಲ್ಲಿ ಭಾಗವಹಿಸಿ 2ನೇ ಸ್ಥಾನ ಪಡೆದಿದ್ದ ನೀರಜ್​, ಒಟ್ಟಾರೆ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಫೈನಲ್ಸ್​ ಅರ್ಹತೆ ಗಳಿಸಿದ್ದರು. ಫೈನಲ್ಸ್​ ವಿಜೇತರಿಗೆ ಡೈಮಂಡ್​ ಟ್ರೋಫಿ ಜತೆಗೆ 25.17 ಲಕ್ಷ ರೂ. ಬಹುಮಾನ ಲಭಿಸಲಿದೆ. ಜತೆಗೆ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ಗೆ ವೈಲ್ಡ್​ಕಾರ್ಡ್​ ಪ್ರವೇಶ ಲಭಿಸಲಿದೆ. 2ನೇ ಸ್ಥಾನ ಗಳಿಸಿದವರಿಗೆ 10 ಲಕ್ಷ ರೂ. ಬಹುಮಾನ ಲಭಿಸಲಿದೆ.

26 ವರ್ಷದ ನೀರಜ್​ ಚೋಪ್ರಾ ತೊಡೆಸಂದು ಗಾಯಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದಕ್ಕೆ ಮುನ್ನ ಸ್ಪರ್ಧಿಸಲಿರುವ ಕೊನೇ ಕೂಟ ಇದಾಗಿರಲಿದೆ. ಈ ಫಿಟ್ನೆಸ್​ ಸಮಸ್ಯೆ ಅವರಿಗೆ 90 ಮೀಟರ್​ ಗಡಿ ದಾಟಲು ಹಿನ್ನಡೆಯಾಗಿ ಪರಿಣಮಿಸಿದ್ದು, ಈ ಸ್ಪರ್ಧೆಯ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮುಂದಿನ ವರ್ಷಕ್ಕೆ ಪರಿಪೂರ್ಣ ಫಿಟ್ನೆಸ್​ ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕೂಟದಾಖಲೆಯೊಂದಿಗೆ ಸ್ವರ್ಣ ಪದಕ ಗೆದ್ದಿದ್ದ ಪಾಕಿಸ್ತಾನದ ಅರ್ಷದ್​ ನದೀಂ ಡೈಮಂಡ್​ ಲೀಗ್​ ಫೈನಲ್ಸ್​ನಿಂದ ಹೊರಗುಳಿದಿದ್ದು, ಜೆಕ್​ ಗಣರಅಜ್ಯದ ಜೇಕಬ್​ ವಾಡ್ಲೆಜ್​, ಗ್ರೆನೇಡಾದ ಆಂಡರ್​ಸನ್​ ಪೀಟರ್ಸ್​ ಮತ್ತು ಜರ್ಮನಿಯ ಜೂಲಿಯನ್​ ವೆಬರ್​, ನೀರಜ್​ಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ.

ಒತ್ತಡದಲ್ಲಿ ನೀರಜ್​ ಚೋಪ್ರಾ ಸ್ಪರ್ಧೆ

2022ರ ಡೈಮಂಡ್​ ಲೀಗ್ ಫೈನಲ್ಸ್​ನಲ್ಲಿ ವಜ್ರದ ಟ್ರೋಫಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿದ್ದ ನೀರಜ್​ ಚೋಪ್ರಾ ಇದೀಗ ಆ ಸಾಧನೆ ಪುನರಾವರ್ತಿಸಬೇಕಾಗಿದೆ. ಜತೆಗೆ ವೃತ್ತೀಜಿವನದಲ್ಲಿ ಮೊದಲ ಬಾರಿಗೆ 90 ಮೀಟರ್​ ಗಡಿ ದಾಟುವ ಒತ್ತಡವೂ ಅವರ ಮೇಲಿದೆ. "ಚಿನ್ನದ ಹುಡುಗ' ಖ್ಯಾತಿಯ ನೀರಜ್​ ಇತ್ತೀಚೆಗೆ ಹೆಚ್ಚಿನ ಸ್ಪರ್ಧೆಗಳಲ್ಲಿ ರಜತ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಇದಕ್ಕೆ ಅವರ ಫಿಟ್ನೆಸ್​ ಸಮಸ್ಯೆಯೂ ಪ್ರಮುಖ ಕಾರಣವಾಗಿದೆ. ಅರ್ಷದ್​ ನದೀಂ ಗೈರಿನಲ್ಲೂ ಬ್ರಸೆಲ್ಸ್​ನಲ್ಲಿ ನೀರಜ್​ಗೆ ನಿಕಟ ಪೈಪೋಟಿ ಎದುರಾಗಲಿದ್ದು, ವಜ್ರದ ಟ್ರೋಫಿ ಒಲಿಸಿಕೊಳ್ಳಬೇಕಾದರೆ 90 ಮೀ. ಗಡಿ ದಾಟಬೇಕಾದ ಸವಾಲೂ ಇದೆ. 89.94 ಮೀ. ನೀರಜ್​ ಚೋಪ್ರಾರ ಜೀವನಶ್ರೇಷ್ಠ ಎಸೆತವಾಗಿದೆ. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅವರು 89.45 ಮೀ. ಎಸೆದಿದ್ದರು.

*ಸ್ಪರ್ಧೆ ಆರಂಭ: ರಾತ್ರಿ 11.52

*ನೇರಪ್ರಸಾರ: ಜಿಯೋಸಿನಿಮಾ, ಸ್ಪೋರ್ಟ್ಸ್​18

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net