

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆರಂಭಕ್ಕೆ ಮುನ್ನ ದಿಢೀರನೆ, ಮಾನಸಿಕ ಆರೋಗ್ಯದ ನೆಪನೀಡಿ ತವರಿಗೆ ಮರಳಿದ್ದ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ನಂತರ ತವರಿನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಮರಳಲಿಲ್ಲ. ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ದೂರ ಉಳಿದಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಮರಳುವ ಮುನ್ನ ರಣಜಿ ಟ್ರೋಫಿಯಲ್ಲಿ ಆಡಬೇಕೆಂಬ ಕೋಚ್ ರಾಹುಲ್ ದ್ರಾವಿಡ್ ಸೂಚನೆಯನ್ನೂ ಪಾಲಿಸಿಲ್ಲ. ಇದರ ನಡುವೆ, ಇಶಾನ್ ಕಿಶನ್ ದ. ಆಫ್ರಿಕಾ ಪ್ರವಾಸದಿಂದ ಅರ್ಧದಲ್ಲೇ ಹಿಂದಿರುಗಲು, ಅಹಂ ಸಂಘರ್ಷವೇ ಕಾರಣ ಎಂದು ವರದಿಯಾಗಿದೆ.
ದ. ಆಫ್ರಿಕಾದಲ್ಲಿ ಟೆಸ್ಟ್ ಸರಣಿಗೆ ಮುನ್ನ ನಡೆದ ಟಿ20 ಸರಣಿಯಲ್ಲಿ ಇಶಾನ್ ಕಿಶನ್ ತಂಡದಲ್ಲಿದ್ದರೂ, ಅವರನ್ನು ಕೈಬಿಟ್ಟು ಜಿತೇಶ್ ಶರ್ಮ ಅವರನ್ನು ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಡಿಸಲಾಗಿತ್ತು. ಇದು ಇಶಾನ್ ಕಿಶನ್ ಅಹಂಗೆ ಪೆಟ್ಟು ನೀಡಿತ್ತು. ಏಕದಿನ ವಿಶ್ವಕಪ್ನಲ್ಲಿ 2 ಪಂದ್ಯಗಳನ್ನಷ್ಟೇ ಆಡಿದ್ದ ಕಿಶನ್, ನಂತರ ಆಸೀಸ್ ವಿರುದ್ಧದ ಟಿ20 ಸರಣಿಯಲ್ಲಿ 2 ಅರ್ಧಶತಕ ಬಾರಿಸಿ ಮಿಂಚಿದ್ದರು. ಹೀಗಾಗಿ ದ. ಆಫ್ರಿಕಾದಲ್ಲೂ ಅವರು ಆರಂಭಿಕ 11ರ ಬಳಗದಲ್ಲೇ ಸ್ಥಾನ ನಿರೀಕ್ಷಿಸಿದ್ದರು. ಇದೇ ಬೇಸರದಲ್ಲಿ ಕಿಶನ್ ಮಾನಸಿಕ ಆರೋಗ್ಯದ ನೆಪ ನೀಡಿ ತಂಡದಿಂದ ಹೊರನಡೆದರು ಎನ್ನಲಾಗಿದೆ.
ಪಾಂಡ್ಯ ಬ್ರದರ್ಸ್ ಜತೆ ಅಭ್ಯಾಸ ಆರಂಭ
ದ್ರಾವಿಡ್ ಸೂಚನೆಯ ನಡುವೆಯೂ ರಣಜಿ ಟ್ರೋಫಿ ಪಂದ್ಯಗಳಿಂದ ಹೊರಗುಳಿಯುತ್ತಲೇ ಬಂದಿರುವ ಇಶಾನ್ ಕಿಶನ್ ಸದ್ಯ ಬರೋಡದ ಕಿರಣ್ ಮೋರೆ ಅಕಾಡೆಮಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರು ಕಿಶನ್ ಅಭ್ಯಾಸಕ್ಕೆ ಸಾಥ್ ನೀಡುತ್ತಿದ್ದಾರೆ ಎನ್ನಲಾಗಿದೆ. ಶುಕ್ರವಾರದಿಂದ ರಣಜಿ ಟ್ರೋಫಿಯ 6ನೇ ಸುತ್ತಿನ ಲೀಗ್ ಪಂದ್ಯಗಳು ನಡೆಯಲಿದ್ದು, ಜಾರ್ಖಂಡ್ ತಂಡ ಜಮ್ಶೆಡ್ಪುರದಲ್ಲಿ ಹರಿಯಾಣ ವಿರುದ್ಧ ಆಡಲಿದೆ. ಆದರೆ ಕಿಶನ್ ಈ ಪಂದ್ಯದಿಂದಲೂ ದೂರ ಉಳಿದಿದ್ದಾರೆ.