

ನವದೆಹಲಿ: ತಮ್ಮ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ( Navjot Singh Sidhu ) ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಏನಾಯಿತು ಅಂದರೆ, ಟೀಮ್ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಭಾನುವಾರ (ಅ.19) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಅನುಭವಿಸಿತು. ಇದರ ಬೆನ್ನಲ್ಲೇ ಏಕದಿನ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಿದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. ರೋಹಿತ್ ಶರ್ಮರನ್ನು ನಾಯಕತ್ವದಿಂದ ಕೆಳಗಿಳಿಸಿರುವುದು ಮತ್ತು ಮೊಹಮ್ಮದ್ ಶಮಿ ಬದಲಿಗೆ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದಕ್ಕೂ ಟೀಕೆಗಳು ವ್ಯಕ್ತವಾಗುತ್ತಿವೆ.
ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಅವರು ಗಂಭೀರ್ ಮತ್ತು ಅಗರ್ಕರ್ ಅವರನ್ನು ಕಟುವಾಗಿ ಟೀಕಿಸಿದ ಪೋಸ್ಟ್ ಕಾಣಿಸಿಕೊಂಡಿತು. ಜಾಡ್ ಇನ್ಸೇನ್ ಎಂಬ ಎಕ್ಸ್ ಬಳಕೆದಾರನ ಖಾತೆಯಲ್ಲಿ ಪೋಸ್ಟ್ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ. ಆ ಪೋಸ್ಟ್ನಲ್ಲಿ "ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲಲು ಬಯಸಿದರೆ, ಬಿಸಿಸಿಐ ಅಜಿತ್ ಅಗರ್ಕರ್ ಮತ್ತು ಗೌತಮ್ ಗಂಭೀರ್ ಅವರನ್ನು ಆದಷ್ಟು ಬೇಗ ತಮ್ಮ ಸ್ಥಾನಗಳಿಂದ ತೆಗೆದುಹಾಕಬೇಕು. ಅದೇ ರೀತಿ, ನಾಯಕತ್ವವನ್ನು ರೋಹಿತ್ ಶರ್ಮ ಅವರಿಗೆ ಸಂಪೂರ್ಣ ಗೌರವ ಮತ್ತು ಘನತೆಯೊಂದಿಗೆ ಹಿಂತಿರುಗಿಸಬೇಕು" ಎಂದು ಬರೆಯಲಾಗಿದೆ. ಗಂಭೀರ್ ಮತ್ತು ಅಗರ್ಕರ್ ಅವರ ಫೋಟೋಗಳನ್ನು ಸೇರಿಸಿ ಪೋಸ್ಟ್ ಮಾಡಲಾಗಿದೆ.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅದು ಸಿಧು ಅವರ ಗಮನಕ್ಕೆ ಬಂದಿದೆ. ತಕ್ಷಣ ಪ್ರತಿಕ್ರಿಯೆ ನೀಡಿರುವ ಸಿಧು, "ನಾನು ಎಂದಿಗೂ ಅಂತಹ ವಿಷಯಗಳನ್ನು ಹೇಳಿಲ್ಲ. ಸುಳ್ಳು ಸುದ್ದಿಗಳನ್ನು ಹರಡಬೇಡಿ. ನೀವು ಅಂತಹ ಕೆಲಸಗಳನ್ನು ಮಾಡುತ್ತೀರಿ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ನಿಮಗೆಲ್ಲ ನಾಚಿಕೆಯಾಗಬೇಕು" ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಟೀಮ್ ಇಂಡಿಯಾ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಾಕ್ಕೆ ತೆರಳಿದೆ. ಈ ಪ್ರವಾಸವು ಅಕ್ಟೋಬರ್ 19 ರಿಂದ ಆರಂಭವಾಗಿದ್ದು ನವೆಂಬರ್ 8 ರವರೆಗೆ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಗುರುವಾರ ನಡೆಯಲಿದೆ. (ಏಜೆನ್ಸೀಸ್)