ವಿಶ್ವಕಪ್​ನಲ್ಲಿ ಸತತ 3ನೇ ಸೋಲಿನ ಬಳಿಕ ಭಾರತದ ಮಹಿಳೆಯರಿಗೆ ಟೀಕೆಗಳ ಬಿಸಿ!

web wwc ind
Published on

ಬೆಂಗಳೂರು: ಭಾರತದ ಪುರುಷರ ಕ್ರಿಕೆಟ್​ ತಂಡ ಗೆದ್ದಾಗ ಹೊಗಳಿಕೆಯನ್ನು ಪಡೆಯುವಷ್ಟೇ ಸೋತಾಗ ತೆಗಳಿಕೆಗೂ ಗುರಿಯಾಗುತ್ತದೆ. ಆದರೆ ಮಹಿಳಾ ಕ್ರಿಕೆಟ್​ ತಂಡ ಇದುವರೆಗೆ ಆ ರೀತಿಯ ಟೀಕೆಗಳನ್ನು ಎದುರಿಸಿರಲಿಲ್ಲ. ಇದೀಗ ತವರಿನ ಏಕದಿನ ವಿಶ್ವಕಪ್​ನಲ್ಲಿ ಗೆಲ್ಲಬಹುದಾಗಿದ್ದ ಸತತ 3 ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಭಾರತದ ಮಹಿಳೆಯರೂ ಕ್ರಿಕೆಟ್​ ಪ್ರೇಮಿಗಳಿಂದ ಕಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಬಿಸಿಸಿಐ, ಮಹಿಳಾ ಕ್ರಿಕೆಟ್​ ಅಭಿವೃದ್ಧಿಗೂ ಶ್ರಮಿಸುತ್ತಿದೆ. ಬಹುತೇಕ ಸಮಾನ ವೇತನ ಮತ್ತು ಬಹುಮಾನವನ್ನೂ ವಿತರಿಸಲಾಗುತ್ತಿದೆ. ಆದರೆ ಮಹಿಳಾ ಕ್ರಿಕೆಟ್​ ತಂಡದಿಂದ ವಿಶ್ವ ಕ್ರಿಕೆಟ್​ನಲ್ಲಿ ಭಾರತದ ಪುರುಷರ ತಂಡದಷ್ಟೇ ವರ್ಚಸ್ವಿ ನಿರ್ವಹಣೆ ಬಾರದಿರುವ ಬಗ್ಗೆ ಕ್ರಿಕೆಟ್​ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಾರತ ತಂಡ ವಿಶ್ವಕಪ್​ನಲ್ಲಿ ಏಷ್ಯಾದ ತಂಡಗಳಾದ ಶ್ರೀಲಂಕಾ, ಪಾಕಿಸ್ತಾನ ವಿರುದ್ಧ ಗೆದ್ದು ಉತ್ತಮ ಆರಂಭವನ್ನೇ ಕಂಡಿತ್ತು. ಆದರೆ ನಂತರ ದಣ ಆಫ್ರಿಕಾ, ಆಸ್ಟ್ರೆಲಿಯಾ ಮತ್ತು ಇಂಗ್ಲೆಂಡ್​ ವಿರುದ್ಧ ಗೆಲ್ಲುವ ಸ್ಥಿತಿಯಲ್ಲಿದ್ದ ಪಂದ್ಯಗಳಲ್ಲಿ ಮುಗ್ಗರಿಸಿದ ರೀತಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಇಂಗ್ಲೆಂಡ್​ ಎದುರು 289 ರನ್​ ಗುರಿ ಬೆನ್ನಟ್ಟುತ್ತಿದ್ದ ಭಾರತಕ್ಕೆ ಕೊನೇ 5 ಓವರ್​ಗಳಲ್ಲಿ 36 ರನ್​ಗಳಷ್ಟೇ ಬೇಕಿತ್ತು ಮತ್ತು 6 ವಿಕೆಟ್​ಗಳೂ ಕೈಯಲ್ಲಿದ್ದವು. ಆದರೆ ನಂತರ 31 ರನ್​ ಮಾತ್ರ ಗಳಿಸಿದ ಭಾರತ ಮತ್ತೆ 4 ವಿಕೆಟ್​ಗಳನ್ನೂ ಕಳೆದುಕೊಂಡು ಸೋಲು ಅನುಭವಿಸಿತು.

ಇದಕ್ಕೆ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧವೂ 251 ರನ್​ಗಳನ್ನು ರಸಿಕೊಳ್ಳುವ ಉತ್ತಮ ಅವಕಾಶ ಭಾರತದ ಮುಂದಿತ್ತು. 81 ರನ್​ಗಳಿಗೆ ದ. ಆಫ್ರಿಕಾದ 5 ವಿಕೆಟ್​ಗಳನ್ನೂ ಕಬಳಿಸಿತ್ತು. ಆದರೆ ಸ್ಲಾಗ್​ ಓವರ್​ಗಳಲ್ಲಿ ಎರಾಬಿರ್ರಿ ಬೌಲಿಂಗ್​ನಿಂದ ಎಡವಿತು. ಆಸೀಸ್​ ಎದುರು 330 ರನ್​ಗಳ ಬೃಹತ್​ ಮೊತ್ತವನ್ನು ರಕ್ಷಿಸಿಕೊಳ್ಳಲು ಭಾರತ ವಿಫಲವಾಗಿತ್ತು. 350ಕ್ಕಿಂತ ಹೆಚ್ಚಿನ ಮೊತ್ತ ಗಳಿಸುವ ಅವಕಾಶ ಕೈಚೆಲ್ಲಿದ್ದ ಭಾರತ, ನಂತರ ಆಸೀಸ್​ ಬಾಲಂಗೋಚಿಗಳಿಗೆ ಕಡಿವಾಣ ಹಾಕಲು ವಿಫಲವಾಗಿತ್ತು.

ಇನ್​ಸ್ಟಾಗ್ರಾಮ್​ ರೀಲ್ಸ್​ಗಳಲ್ಲಿ ಗಮನಸೆಳೆಯುವ ಭಾರತ ತಂಡದ ಆಟಗಾರ್ತಿಯರು, ಮೈದಾನದಲ್ಲಿ ಒತ್ತಡವನ್ನು ಎದುರಿಸಲಾಗದೆ ಮುಗ್ಗರಿಸುತ್ತಿರುವುದು ಟೀಕೆಗಳಿಗೆ ಗುರಿಯಾಗಿದೆ. ಹಲವು ರೀತಿಯ ಟ್ರೋಲ್​ಗಳನ್ನೂ ಹರ್ಮಾನ್​ಪ್ರೀತ್​ ಕೌರ್​ ಪಡೆ ಎದುರಿಸುತ್ತಿದೆ. ಕೊನೇ 2 ಲೀಗ್​ ಪಂದ್ಯಗಳಲ್ಲಿ ನೈಜ ನಿರ್ವಹಣೆ ತೋರುವ ಮೂಲಕ ಭಾರತದ ಮಹಿಳೆಯರು, ಬ್ಯಾಟ್​-ಚೆಂಡಿನ ಮೂಲಕವೇ ಟೀಕೆಗಳಿಗೆ ದಿಟ್ಟ ಉತ್ತರವನ್ನು ನೀಡಬೇಕಾಗಿದೆ.

ಹರ್ಮಾನ್​ಪ್ರೀತ್​ಗೆ ಒತ್ತಡ

ಪುರುಷರ ಕ್ರಿಕೆಟ್​ ತಂಡದ ಒಂದೊಂದು ಸರಣಿಯಲ್ಲೂ ನಾಯಕನ ನಿರ್ವಹಣೆಯನ್ನು ಅಳತೆ ಮಾಡಲಾಗುತ್ತದೆ. ಆದರೆ ಮಹಿಳಾ ತಂಡದ ನಾಯಕಿಯಾಗಿ ಹರ್ಮಾನ್​ಪ್ರೀತ್​ ಕೌರ್​ ಬಲಿಷ್ಠ ತಂಡಗಳ ಎದುರು ದೊಡ್ಡ ಮಟ್ಟದ ಯಶಸ್ಸು ಕಾಣದ ನಡುವೆಯೂ ನಾಯಕತ್ವ ಉಳಿಸಿಕೊಳ್ಳುತ್ತ ಬಂದಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್​ನಲ್ಲಿ ಭಾರತವನ್ನು ನಾಕೌಟ್​ ಹಂತಕ್ಕೇರಿಸಲು ವಿಫಲರಾದರೂ ನಾಯಕತ್ವ ಉಳಿಸಿಕೊಂಡಿದ್ದ ಹರ್ಮಾನ್​ಪ್ರೀತ್​, ಈ ಬಾರಿ ತವರಿನಲ್ಲಿ ತಂಡವನ್ನು ಸೆಮಿಫೈನಲ್​ಗೇರಿಸಲು ಶಕ್ತರಾಗದಿದ್ದರೆ, ಪಟ್ಟ ಕಳೆದುಕೊಳ್ಳುವುದು ಖಚಿತವೆನಿಸಿದೆ. ನ್ಯೂಜಿಲೆಂಡ್​, ಬಾಂಗ್ಲಾದೇಶ ವಿರುದ್ಧದ ಉಳಿದ 2 ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಒತ್ತಡ ಈಗ ಭಾರತದ ಮೇಲಿದೆ.

ಸ್ತ್ರೀದ್ವೇಷದ ನಿಂದನೆಗಳಿಗೆ ಆಕ್ಷೇಪ

ಭಾರತ ಮಹಿಳಾ ತಂಡದ ವೈಫಲ್ಯದ ಬಗೆಗಿನ ಕೆಲ ಆರೋಗ್ಯಕರ ಟೀಕೆಗಳ ನಡುವೆ, ಸಾಮಾಜಿಕ ಜಾಲತಾಣದಲ್ಲಿ ಸ್ತ್ರೀದ್ವೇಷದ ನಿಂದನೆಗಳೂ ಕೇಳಿಬಂದಿವೆ. ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸುವ, ಸಮಾನ ವೇತನ-ಬಹುಮಾನ ನೀಡಿದ ಬಗೆಗಿನ ಟೀಕೆಗಳಿಗೆ ಆಕ್ಷೇಪಗಳೂ ವ್ಯಕ್ತವಾಗಿವೆ. ಆಟಗಾರ್ತಿಯರನ್ನು ವೈಯಕ್ತಿಕವಾಗಿ ನಿಂದಿಸುತ್ತಿರುವ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಕಾರ ಆಕಾಶ್​ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೀಕೆಗಳಿಂದ ಯಾರೂ ಹೊರತಲ್ಲ, ಆದರೆ ಅದರ ಭಾಷೆ ಮತ್ತು ಮನಸ್ಥಿತಿಯ ಬಗ್ಗೆ ಎಚ್ಚರಿಕೆ ಅಗತ್ಯ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಬಿಸಿಸಿಐ ಬಗ್ಗೆಯೂ ಗರಂ

ವುಮೆನ್ಸ್​ ಪ್ರೀಮಿಯರ್​ ಲೀಗ್​ ಆರಂಭಿಸುವ ಮೂಲಕ ಬಿಸಿಸಿಐ, ಇತ್ತೀಚೆಗೆ ಮಹಿಳಾ ಕ್ರಿಕೆಟ್​ ಅಭಿವೃದ್ಧಿಗೆ ನೆರವಾಗಿದೆ. ಆದರೆ ಬಿಸಿಸಿಐ ಮಹಿಳಾ ಕ್ರಿಕೆಟ್​ ಅಭಿವೃದ್ಧಿಯಲ್ಲಿ ಆಸ್ಟ್ರೆಲಿಯಾದಷ್ಟು ಪ್ರಾಮುಖ್ಯತೆಯನ್ನು ನೀಡಿಲ್ಲ. ಆಸೀಸ್​ ಮಾದರಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್​ ಅಭಿವೃದ್ಧಿ ಅಗತ್ಯವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇನ್ನೊಂದೆಡೆ, ಜಯ್​ ಷಾ ಬಿಸಿಸಿಐನಿಂದ ಹೊರನಡೆದ ಬಳಿಕ ಮಹಿಳಾ ಕ್ರಿಕೆಟ್​ಗೆ ಹಿಂದಿನಷ್ಟು ಪ್ರೋತ್ಸಾಹ ದೊರೆಯುತ್ತಿಲ್ಲ ಎಂದೂ ಆರೋಪಿಸಲಾಗುತ್ತಿದೆ.

ಸೋಲಿನ ಹೊಣೆ ಹೊತ್ತ ಸ್ಮೃತಿ

ಇಂಗ್ಲೆಂಡ್​ ವಿರುದ್ಧದ ಚೇಸಿಂಗ್​ ವೇಳೆ ಸ್ಮೃತಿ ಮಂದನಾ 88 ರನ್​ ಗಳಿಸಿ ಔಟಾದ ಬಳಿಕ ಭಾರತದ ಕುಸಿತ ಆರಂಭಗೊಂಡಿತ್ತು. ಸ್ಮೃತಿ ಕ್ರೀಸ್​ನಲ್ಲಿದ್ದಾಗ ಭಾರತಕ್ಕೆ ಕೊನೇ 9 ಓವರ್​ಗಳಲ್ಲಿ 55 ರನ್​ಗಳಷ್ಟೇ ಗಳಿಸುವ ಸುಲಭ ಸವಾಲಿತ್ತು. ಆದರೆ ದೊಡ್ಡ ಹೊಡೆತಕ್ಕೆ ಯತ್ನಿಸಿದ ಸ್ಮೃತಿ, ಬೌಂಡರಿ ಗೆರೆಗಿಂತ 5 ಮೀಟರ್​ ಮುಂದೆ ಕ್ಯಾಚ್​ ನೀಡಿ ನಿರ್ಗಮಿಸಿದ್ದರು. ಹೀಗಾಗಿ ತಂಡದ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುವೆ ಎಂದು ಉಪನಾಯಕಿಯೂ ಆಗಿರುವ ಸ್ಮೃತಿ ಮಂದನಾ ಹೇಳಿದ್ದಾರೆ. ತಂಡದ ಇತರ ಆಟಗಾರ್ತಿಯರ ಹೊಡೆತಗಳ ಆಯ್ಕೆಯನ್ನೂ ಅವರು ದೂರಿದ್ದಾರೆ. ಮತ್ತೊಂದೆಡೆ ನಾಯಕಿ ಹರ್ಮಾನ್​ಪ್ರೀತ್​ ಕೌರ್​ ಕೂಡ, ಸ್ಮೃತಿ ಮಂದನಾ ವಿಕೆಟ್​ ಪಂದ್ಯದ ಟರ್ನಿಂಗ್​ ಪಾಯಿಂಟ್​ ಆಯಿತು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net