

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದೇಶದ ಐಟಿ ರಾಜಧಾನಿ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ಸೀನಿಯರ್ ಕುಸ್ತಿ ಚಾಂಪಿಯನ್ಷಿಪ್ ನಡೆಯಲಿದೆ. ಒಲಿಂಪಿಯನ್ಗಳು ಮತ್ತು ರೈಲ್ವೇಸ್ನ ಅಗ್ರ ಕುಸ್ತಿಪಟುಗಳ ಗೈರಿನಲ್ಲಿ ಯುವ ಕುಸ್ತಿಪಟುಗಳಿಗೆ ಇದೊಂದು ಉತ್ತಮ ಅವಕಾಶವೆನಿಸಿದೆ.
ದೇಶದೆಲ್ಲೆಡೆಯಿಂದ ಸುಮಾರು 700 ಕುಸ್ತಿಪಟುಗಳು ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಒಟ್ಟು 24 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕುಸ್ತಿಪಟುಗಳು ಕೂಟದಲ್ಲಿ ಪಾಲ್ಗೊಳ್ಳಲಿದ್ದು, ಹರಿಯಾಣದಿಂದ 28 ಕುಸ್ತಿಪಟುಗಳು ವಿವಿಧ ವಿಭಾಗಗಳಲ್ಲಿ ಕಣಕ್ಕಿಳಿಯಲಿದ್ದು, ಎಂದಿನಂತೆಯೇ ಈ ಬಾರಿಯೂ ಹರಿಯಾಣವೇ ಪ್ರಾಬಲ್ಯ ಸಾಧಿಸುವ ನಿರೀೆ ಇದೆ. ಆತಿಥೇಯ ಕರ್ನಾಟಕದಿಂದ 32 ಕುಸ್ತಿಪಟುಗಳ ಬಲಿಷ್ಠ ತಂಡ ಸ್ಪರ್ಧಿಸಲಿದೆ. ಗೋಪಾಲ್ ಕೋಲಿ, ಮಹೇಶ್ ಪಿ. ಗೌಡ ಮತ್ತು ಶ್ವೇತಾ ಸಂಜು ಅಣ್ಣಿಕೇರಿ ಮೇಲೆ ರಾಜ್ಯಕ್ಕೆ ಪದಕ ಭರವಸೆ ಇದೆ.
ಪ್ಯಾರಿಸ್ ಒಲಿಂಪಿಕ್ಸ್ ಪದಕ ವಿಜೇತ ಅಮನ್ ಸೆಹ್ರಾವತ್ ಸ್ಪರ್ಧೆಯಲ್ಲಿ ಭಾಗವಹಿಸಬೇಕಿತ್ತಾದರೂ, ರೈಲ್ವೇಸ್ ತಂಡ ಕೂಟದಿಂದ ಹಿಂದೆ ಸರಿದಿರುವುದರಿಂದ ಅವರೂ ಗೈರಾಗಲಿದ್ದಾರೆ. 23 ವಯೋಮಿತಿ ಏಷ್ಯನ್ ಚಾಂಪಿಯನ್ಷಿಪ್ ಸ್ವರ್ಣ ವಿಜೇತೆ ಮಣಿಪುರದ ವೈ. ಮೀನಾ ದೇವಿ (50 ಕೆಜಿ), ಜೂನಿಯರ್ ಏಷ್ಯನ್ ಚಾಂಪಿಯನ್ ಬಿಪಾಶಾ (72 ಕೆಜಿ) ಮತ್ತು ಏಷ್ಯಾಡ್ ಸ್ಪರ್ಧಿ ರಾಧಿಕಾ (68) ಕೂಟದ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕುಸ್ತಿ ನಡೆಯಲಿದೆ. ಪುರುಷರ ಫ್ರೀಸ್ಟೈಲ್, ಗ್ರೀಕೋರೋಮನ್ ಮತ್ತು ಮಹಿಳಾ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.
ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ಕೂಟಕ್ಕಾಗಿ ವಿಶೇಷ ಗೀತೆಯೊಂದನ್ನು ಸಿದ್ಧಪಡಿಸಿದ್ದಾರೆ. "ದೇಶದ ಬೇರೆ ಬೇರೆ ಕಡೆಗಳಿಂದ ಬೆಂಗಳುರಿಗೆ ಆಗಮಿಸಿರುವ ಕುಸ್ತಿಪಟುಗಳಿಗೆ ಆತ್ಮೀಯ ಸ್ವಾಗತ ನೀಡುತ್ತಿದ್ದೇವೆ' ಎಂದು ಕರ್ನಾಟಕ ಕುಸ್ತಿ ಸಂಸ್ಥೆಯ ಅಧ್ಯಕ್ಷ ಹಾಗೂ ಭಾರತೀಯ ಕುಸ್ತಿ ಒಕ್ಕುಟದ ಜಂಟಿ ಕಾರ್ಯದರ್ಶಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ತಿಳಿಸಿದ್ದಾರೆ. ಕುಸ್ತಿ ಪಂದ್ಯಗಳನ್ನು ವೀಸಲು ಕೋರಮಂಗಲ ಕ್ರೀಡಾಂಗಣಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.