

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕರ್ನಾಟಕ ಈಜು ಸಂಸ್ಥೆ ವತಿಯಿಂದ ಭಾರತೀಯ ಈಜು ಒಕ್ಕೂಟದ ಸಹಯೋಗದಲ್ಲಿ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಮಂಗಳವಾರದಿಂದ 4 ದಿನಗಳ ಕಾಲ 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್ಷಿಪ್ ನಡೆಯಲಿದೆ.
ದೇಶದ ಅತ್ಯಂತ ದೊಡ್ಡ ಈಜು ಕೂಟಕ್ಕೆ ಮಂಗಳೂರು ಇದೇ ಮೊದಲ ಬಾರಿ ಆತಿಥ್ಯ ವಹಿಸಲಿದೆ. ಕರ್ನಾಟಕ 2021ರಲ್ಲಿ ಕೊನೆಯದಾಗಿ ಬೆಂಗಳೂರಿನಲ್ಲಿ ಈ ಕೂಟಕ್ಕೆ ಆತಿಥ್ಯ ವಹಿಸಿತ್ತು. 31 ರಾಜ್ಯಗಳಿಂದ 500ಕ್ಕೂ ಅಧಿಕ ಈಜುಪಟುಗಳು ಕೂಟದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ಒಲಿಂಪಿಯನ್ ಹಾಗೂ ಬ್ಯಾಕ್ಸ್ಟ್ರೊಕ್ ಈಜುಪಟು ಶ್ರೀಹರಿ ನಟರಾಜ್, ಬ್ಯಾಕ್ಸ್ಟ್ರೊಕ್ ಸಿಂಟರ್ ಲಿಖಿತ್ ಎಸ್.ಪಿ., ರಾಷ್ಟ್ರೀಯ ದಾಖಲೆಪಟು ಮತ್ತು ಫ್ರೀಸ್ಟೆಲ್ ಸ್ಪೆಷಲಿಸ್ಟ್ ಅನೀಶ್ ಗೌಡ ಭಾಗವಹಿಸಲಿದ್ದಾರೆ ಎಂದು ಕೂಟದ ಸಂಟನಾ ಕಾರ್ಯದರ್ಶಿ ಸತೀಶ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದ ಭರವಸೆಯ ಈಜುಪಟುಗಳಾದ ಎಸ್.ಶಿವ, ಪೃಥ್ವಿ, ಆನಂದ್ ಎ.ಎಸ್., ಮಿಹಿರ್ ಅಮ್ರೆ, ರಿಷಬ್ ದಾಸ್, ದೇವಾಂಶ್ ಪರ್ಮಾರ್, ಧನುಷ್ ಎಸ್., ಸೋನು ದೆಬ್ನಾತ್ ಮತ್ತು ಯುಗ್ ಚೆಲಾನಿ ಕೂಡ ಕೂಟದಲ್ಲಿ ಭಾಗವಹಿಸಲಿದ್ದಾರೆ. ಮಹಿಳಾ ಈಜುಪಟುಗಳಾದ ಹರ್ಷಿತಾ ಜಯರಾಂ, ಮನವಿ ವರ್ಮಾ, ಪ್ರತಿಷ್ಟಾ ದಾಂಗಿ, ಆಸ್ತಾ ಚೌಧುರಿ, ಶಿವಾಂಗಿ ಶರ್ಮಾ ಮತ್ತು ಭವ್ಯಾ ಸಹದೇವ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಭಾರತದ ಈಜುಪಟುಗಳಿಗೆ 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ಗೆ ಎ ದರ್ಜೆಯ ಅರ್ಹತೆ ಒಲಿಸಿಕೊಳ್ಳುವ ಮೊದಲ ಅವಕಾಶ ಈ ಚಾಂಪಿಯನ್ಷಿಪ್ನಲ್ಲಿದೆ. ಕೂಟದಲ್ಲಿ ಆತಿಥೇಯ ಕರ್ನಾಟಕ ತಂಡ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ. ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 100 ಮೀ. ಬ್ಯಾಕ್ಸ್ಟ್ರೊಕ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೀಹರಿ ನಟರಾಜ್, "ಉತ್ತಮ ಫಾಮ್ರ್ನಲ್ಲಿರುವುದರಿಂದ ನಾನು ಸ್ಪರ್ಧೆಗೆ ಕಾತುರಗೊಂಡಿದ್ದೇನೆ. ತವರಿನ ಲಾಭವನ್ನು ಸಮರ್ಥವಾಗಿ ಬಳಸಿಕೊಂಡು ನಾನು ಭಾಗವಹಿಸುವ ಎಲ್ಲ ಸ್ಪರ್ಧೆಗಳಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದೇನೆ' ಎಂದು ತಿಳಿಸಿದರು.