

ನವದೆಹಲಿ: ಹಾಲಿ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ದಾಖಲೆಯ ಸಂಖ್ಯೆ ಅರ್ಜಿಗಳ ಪ್ರವಾಹವೇ ಹರಿದುಬಂದಿದೆ. ವಿವಿಧ ಕ್ರೀಡಾ ಪ್ರಶಸ್ತಿಗಳಿಗೆ ಕ್ರೀಡಾಪಟುಗಳು ಮತ್ತು ಕೋಚ್‌ಗಳಿಂದ 600ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಇದು ಕಳೆದ ವರ್ಷ ಬಂದಿದ್ದ 400ಕ್ಕೂ ಅಧಿಕ ಅರ್ಜಿಗಳ ದಾಖಲೆಯನ್ನು ಹಿಮ್ಮೆಟ್ಟಿಸಿದೆ.
ಈ ಅರ್ಜಿಗಳ ವಿಶ್ವಾಸಾರ್ಹತೆಗಳನ್ನು ಪರಿಶೀಲಿಸಲು ಕ್ರೀಡಾ ಸಚಿವಾಲಯದ ಅಧಿಕಾರಿಗಳು ಭಾರಿ ಪರಿಶ್ರಮದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಅಂತಿಮ ಆಯ್ಕೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ. ಬಳಿಕ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಮುಕುಂದಕಂ ಶರ್ಮ ನೇತೃತ್ವದ ಆಯ್ಕೆ ಸಮಿತಿ, ಪ್ರಶಸ್ತಿಗೆ ಅರ್ಹರ ಹೆಸರುಗಳ ಶಿಫಾರಸು ಪಟ್ಟಿಯನ್ನು ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಲಿದೆ.
ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿಗೆ ಈ ವರ್ಷ 35 ಅರ್ಜಿಗಳು ಬಂದಿವೆ. ಕ್ರೀಡಾ ಸಚಿವಾಲಯದ ಮಾರ್ಗಸೂಚಿಯ ಅನ್ವಯ, ವಿಶೇಷ ಸಂದರ್ಭಗಳ ಹೊರತಾಗಿ ಪ್ರತಿ ವರ್ಷ ಗರಿಷ್ಠ ಇಬ್ಬರು ಕ್ರೀಡಾಪಟುಗಳ ಹೆಸರನ್ನು ಮಾತ್ರ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲು ಅವಕಾಶವಿದೆ. ಆದರೆ ಇದು ಒಲಿಂಪಿಕ್ಸ್ ವರ್ಷವಾಗಿರುವುದರಿಂದ ವಿಶೇಷ ಸಂದರ್ಭವೆಂದು ಪರಿಗಣಿಸಿ ಹೆಚ್ಚಿನ ಕ್ರೀಡಾಪಟುಗಳ ಹೆಸರು ಖೇಲ್‌ರತ್ನಕ್ಕೆ ಶಿಫಾರಸುಗೊಳ್ಳುವ ನಿರೀಕ್ಷೆ ಇದೆ. ಕಳೆದ ವರ್ಷ ಗರಿಷ್ಠ 5 ಕ್ರೀಡಾಪಟುಗಳಿಗೆ ಖೇಲ್‌ರತ್ನ ನೀಡಲಾಗಿತ್ತು.
ಅರ್ಜುನ ಪ್ರಶಸ್ತಿಗೆ 215 ಕ್ರೀಡಾಪಟುಗಳಿಂದ ಅರ್ಜಿಗಳು ಬಂದಿವೆ. ಕ್ರೀಡಾ ಸಚಿವಾಲಯದ ಮಾರ್ಗಸೂಚಿಯ ಅನ್ವಯ ಪ್ರತಿ ವರ್ಷ ಗರಿಷ್ಠ 15 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಬಹುದಾಗಿದೆ. ಆದರೆ ಕಳೆದ ವರ್ಷ 27 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗಿತ್ತು. ಕೋಚ್‌ಗಳಿಗೆ ನೀಡಲಾಗುವ ದ್ರೋಣಾಚಾರ್ಯ ಪ್ರಶಸ್ತಿಗಳಿಗೆ 48 ಅರ್ಜಿಗಳು ಬಂದಿವೆ. ಜೀವಮಾನ ಸಾಧನೆಯ ಧ್ಯಾನ್‌ಚಂದ್ ಪ್ರಶಸ್ತಿಗೆ 138 ಅರ್ಜಿಗಳು ಬಂದಿದ್ದರೆ, ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್‌ಗೆ ವಿವಿಧ ಸಂಸ್ಥೆ, ಎನ್‌ಜಿಒ, ಕಾರ್ಪೋರೇಟ್ ಕಂಪನಿಗಳಿಂದ 36 ಅರ್ಜಿಗಳು ಬಂದಿವೆ.
ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಸ್ವರ್ಣ ಪದಕ ವಿಜೇತರ ಹೆಸರನ್ನು ಕ್ರೀಡಾ ಸಚಿವಾಲಯ ನೇರವಾಗಿ ಖೇಲ್‌ರತ್ನ ಪ್ರಶಸ್ತಿಗೆ ಶಿಾರಸು ಮಾಡಲಿದೆ. ಒಲಿಂಪಿಕ್ಸ್-ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಮತ್ತು ಉತ್ತಮ ನಿರ್ವಹಣೆ ತೋರಿದ ಕ್ರೀಡಾಪಟುಗಳ ಹೆಸರು ಕೂಡ ಖೇಲ್‌ರತ್ನ ಅಥವಾ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಳ್ಳುವುದು ಖಚಿತವೆನಿಸಿದೆ. ಕಳೆದ ವರ್ಷ ಖೇಲ್‌ರತ್ನ ಪ್ರಶಸ್ತಿಯ ಬಹುಮಾನ ಮೊತ್ತ 7.5 ಲಕ್ಷದಿಂದ 25 ಲಕ್ಷ ರೂ.ಗೆ ಏರಿಕೆಯಾಗಿದ್ದರೆ, ಅರ್ಜುನ ಪ್ರಶಸ್ತಿಯ ಬಹುಮಾನ 5ರಿಂದ 15 ಲಕ್ಷ ರೂ.ಗೆ ಏರಿಕೆಯಾಗಿತ್ತು.