ಖೇಲ್​ರತ್ನ, ಅರ್ಜುನ ಸಹಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ; ಮನು, ಗುಕೇಶ್​ಗೆ ಅತ್ಯುನ್ನತ ಕ್ರೀಡಾ ಗೌರವ

web khel
Published on

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ ಅವಳಿ ಕಂಚಿನ ತಾರೆ ಮನು ಭಾಕರ್​, ಅತಿ ಕಿರಿಯ ಚೆಸ್​ ವಿಶ್ವ ಚಾಂಪಿಯನ್​ ಡಿ. ಗುಕೇಶ್​, ಭಾರತ ಹಾಕಿ ತಂಡದ ನಾಯಕ ಹರ್ಮಾನ್​ಪ್ರೀತ್​ ಸಿಂಗ್​ ಮತ್ತು ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ ಸ್ವರ್ಣ ಪದಕ ವಿಜೇತ ಹೈಜಂಪ್​ಪಟು ಪ್ರವೀಣ್​​ ಕುಮಾರ್​ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ "ಮೇಜರ್​ ಧ್ಯಾನ್​ಚಂದ್​ ಖೇಲ್​ರತ್ನ' ಗೌರವವನ್ನು ರಾಷ್ಟ್ರಪತಿ ದ್ರೌಪದಿ ಮುಮುರ್ ಅವರಿಂದ ಶುಕ್ರವಾರ ಸ್ವೀಕರಿಸಿದರು. ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಜಯಿಸಿದ 17 ಪ್ಯಾರಾ ಅಥ್ಲೀಟ್​ಗಳ ಸಹಿತ 32 ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. ಈ ಬಾರಿ ಕರ್ನಾಟಕದ ಯಾವ ಕ್ರೀಡಾಪಟು ಕೂಡ ಪ್ರಶಸ್ತಿಗೆ ಭಾಜನರಾಗಿಲ್ಲ.

ರಾಷ್ಟ್ರಪತಿ ಭವನದಲ್ಲಿ ನಡೆದ 2024ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದ್ರೋಣಾಚಾರ್ಯ, ರಾಷ್ಟ್ರೀಯ ಖೇಲ್​ ಪ್ರೋತ್ಸಾಹನ್​ ಪುರಸ್ಕಾರ ಮತ್ತು ಮೌಲಾನಾ ಅಬ್ದುಲ್​ ಕಲಾಂ ಆಜಾದ್​ ಟ್ರೋಫಿಯನ್ನೂ ವಿತರಿಸಲಾಯಿತು. ಸಾಮಾನ್ಯವಾಗಿ ಆಗಸ್ಟ್​ 29ರ ರಾಷ್ಟ್ರೀಯ ಕ್ರೀಡಾ ದಿನದಂದು ನಡೆಯುವ ಸಮಾರಂಭ ಈ ಬಾರಿ, ಪ್ಯಾರಿಸ್​ ಒಲಿಂಪಿಕ್ಸ್​&ಪ್ಯಾರಾಲಿಂಪಿಕ್ಸ್​ ಸಾಧಕರನ್ನೂ ಪ್ರಶಸ್ತಿ ಪರಿಗಣಿಸುವ ಕಾರಣಕ್ಕಾಗಿ ಮುಂದೂಡಲ್ಪಟ್ಟಿತ್ತು.

ಪ್ಯಾರಿಸ್​ ಒಲಿಂಪಿಕ್ಸ್​ ಮತ್ತು ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಜಯಿಸಿದ ಎಲ್ಲ ಕ್ರೀಡಾ ಸಾಧಕರಿಗೆ (ಈ ಹಿಂದೆ ಪ್ರಶಸ್ತಿ ಪಡೆಯದವರು) ಈ ಬಾರಿ ಅರ್ಜುನ ಪ್ರಶಸ್ತಿ ನೀಡಲಾಗಿದೆ. ಒಲಿಂಪಿಕ್ಸ್​ನಲ್ಲಿ ಕಂಚು ಜಯಿಸಿದ ಕುಸ್ತಿಪಟು ಅಮನ್​ ಸೆಹ್ರಾವತ್​, ಶೂಟರ್​ಗಳಾದ ಸ್ವಪ್ನಿಲ್​ ಕುಸಾಲೆ, ಸರಬ್ಜೋತ್​ ಸಿಂಗ್​ ಮತ್ತು ಹಾಕಿ ತಂಡದ ಸದಸ್ಯರಾದ ಜರ್ಮನ್​ಪ್ರೀತ್​ ಸಿಂಗ್​, ಸುಖ್​ಜೀತ್​ ಸಿಂಗ್​, ಸಂಜಯ್​ ಮತ್ತು ಅಭಿಷೇಕ್​ ಅರ್ಜುನ ಪ್ರಶಸ್ತಿ ಪುರಸತರಾಗಿದ್ದಾರೆ. ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಜಯಿಸಿದ ಬ್ಯಾಡ್ಮಿಂಟನ್​ ಆಟಗಾರ ನಿತೇಶ್​ಕುಮಾರ್​, ಕ್ಲಬ್​ ಥ್ರೋಪಟು ಧರಂವೀರ್​, ಜಾವೆಲಿನ್​ ಥ್ರೋಪಟು ನವದೀಪ್​ ಸಿಂಗ್​ ಜತೆಗೆ ಬೆಳ್ಳಿ, ಕಂಚು ಗೆದ್ದ ಪ್ಯಾರಾ ಕ್ರೀಡಾಪಟುಗಳಿಗೂ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಾಲಿಕುರ್ಚಿಯ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲು ರಾಷ್ಟ್ರಪತಿ ವೇದಿಕೆ ಮೇಲಿನಿಂದ ಕೆಳಗಿಳಿದು ಬಂದರು.

ಕ್ರೀಡಾ ಸಚಿವ ಮಾನ್ಸುಖ್​ ಮಾಂಡವೀಯ, ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ ಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು. ಖೇಲ್​ರತ್ನ 25 ಲಕ್ಷ ರೂ. ಮತ್ತು ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿ 15 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.

ಹೃದಯ ಗೆದ್ದ ಮಾಜಿ ಸೈನಿಕ ಪೆಟ್ಕರ್​

1965ರ ಭಾರತ&ಪಾಕಿಸ್ತಾನ ಯುದ್ಧದಲ್ಲಿ ಗುಂಡೇಟು ತಿಂದು ಅಂಗವಿಕಲರಾದ ಬಳಿಕ ಪ್ಯಾರಾ ಈಜುಪಟುವಾಗಿ ಬದಲಾಗಿದ್ದಲ್ಲದೆ, 1972ರಲ್ಲೇ ಪ್ಯಾರಾಲಿಂಪಿಕ್ಸ್​ನಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎನಿಸಿದ್ದ ಮುರಳಿಕಾಂತ್​ ಪೆಟ್ಕರ್​, ಅರ್ಜುನ ಪ್ರಶಸ್ತಿ ಸ್ವೀಕಾರದ ವೇಳೆ ರಾಷ್ಟ್ರಪತಿ ಭವನದ ದರ್ಬಾರ್​ ಹಾಲ್​ನಲ್ಲಿ ಅತ್ಯಧಿಕ ಕರತಾಡನ ಕೇಳಿಸಿತು. 80 ವರ್ಷದ ಪೆಟ್ಕರ್​ಗೆ ಕ್ರೀಡಾ ಸಾಧನೆಯ 53 ವರ್ಷಗಳ ಬಳಿಕ ಜೀವಮಾನ ಸಾಧನೆ ವಿಭಾಗದಲ್ಲಿ ಅರ್ಜುನ ಗೌರವ ಒಲಿದಿದೆ. ಅವರ ಬಯೋಪಿಕ್​ "ಚಂದು ಚಾಂಪಿಯನ್​' ಹೆಸರಿನಲ್ಲಿ ಇತ್ತೀಚೆಗೆ ತೆರೆಕಂಡಿತ್ತು. ಅದರಲ್ಲಿ ನಾಯಕರಾಗಿ ನಟಿಸಿದ್ದ ಕಾರ್ತಿಕ್​ ಆರ್ಯನ್​ ಕೂಡ ಸಮಾರಂಭದಲ್ಲಿ ಹಾಜರಿದ್ದರು.

2024ರ ಕ್ರೀಡಾ ಪ್ರಶಸ್ತಿ ಪುರಸ್ಕೃತರು:

ಮೇಜರ್​ ಧ್ಯಾನ್​ಚಂದ್​ ಖೇಲ್​ರತ್ನ: ಡಿ. ಗುಕೇಶ್​ (ಚೆಸ್​), ಮನು ಭಾಕರ್​ (ಶೂಟಿಂಗ್​), ಹರ್ಮಾನ್​ಪ್ರೀತ್​ ಸಿಂಗ್​ (ಹಾಕಿ), ಪ್ರವಿಣ್​ ಕುಮಾರ್​ (ಪ್ಯಾರಾ ಅಥ್ಲೆಟಿಕ್ಸ್​).

ಅರ್ಜುನ: ಜ್ಯೋತಿ ಯರಾಜಿ, ಅನ್ನು ರಾಣಿ (ಅಥ್ಲೆಟಿಕ್ಸ್​), ಸವೀಟಿ, ನೀತು (ಬಾಕ್ಸಿಂಗ್​), ಸ್ವಪ್ನಿಲ್​ ಕುಸಾಲೆ, ಸರಬ್ಜೋತ್​ ಸಿಂಗ್​ (ಶೂಟಿಂಗ್​), ಅಭಯ್​ ಸಿಂಗ್​ (ಸ್ಕಾ$್ವಷ್​), ಸಾಜನ್​ ಪ್ರಕಾಶ್​ (ಈಜು), ಅಮನ್​ ಸೆಹ್ರಾವತ್​ (ಕುಸ್ತಿ), ವಂತಿಕಾ ಅಗರ್ವಾಲ್​ (ಚೆಸ್​), ಸಲಿಮಾ ಟೆಟೆ, ಅಭಿಷೇಕ್​, ಸಂಜಯ್​, ಜರ್ಮನ್​ಪ್ರೀತ್​ ಸಿಂಗ್​, ಸುಖ್​ಜೀತ್​ ಸಿಂಗ್​ (ಹಾಕಿ), ರಾಕೇಶ್​ ಕುಮಾರ್​ (ಪ್ಯಾರಾ ಆರ್ಚರಿ), ಪ್ರೀತಿ ಪಾಲ್​, ಜೀವಾಂಜಿ ದೀಪ್ತಿ, ಅಜೀತ್​ ಸಿಂಗ್​, ಸಚಿನ್​ ಖಿಲಾರಿ, ಧರಂವೀರ್​, ಪ್ರಣವ್​ ಸೂರ್ಮ, ಎಚ್​. ಹೊಕಾಟೊ ಸೆಮಾ, ಸಿಮ್ರನ್​, ನವದೀಪ್​ (ಪ್ಯಾರಾ ಅಥ್ಲೆಟಿಕ್ಸ್​), ನಿತೀಶ್​ ಕುಮಾರ್​, ತುಳಸಿಮತಿ ಮುರುಗೇಶನ್​, ನಿತ್ಯಾಶ್ರೀ ಸುಮತಿ ಶಿವನ್​, ಮನೀಷಾ ರಾಮದಾಸ್​ (ಪ್ಯಾರಾ ಬ್ಯಾಡ್ಮಿಂಟನ್​), ಕಪಿಲ್​ ಪಾರ್ಮರ್​ (ಪ್ಯಾರಾ ಜುಡೋ), ಮೋನಾ ಅಗರ್ವಾಲ್​, ರುಬಿನಾ ್ರಾನ್ಸಿಸ್​ (ಪ್ಯಾರಾ ಶೂಟಿಂಗ್​).

ಅರ್ಜುನ (ಜೀವಮಾನ ಸಾಧನೆ): ಸುಚಾ ಸಿಂಗ್​ (ಅಥ್ಲೆಟಿಕ್ಸ್​), ಮುರಳಿಕಾಂತ್​ ರಾಜಾರಾಮ್​ ಪೆಟ್ಕರ್​ (ಪ್ಯಾರಾ ಈಜು).

ದ್ರೋಣಾಚಾರ್ಯ: ಸುಭಾಷ್​ ರಾಣಾ (ಪ್ಯಾರಾ ಶೂಟಿಂಗ್​), ದೀಪಾಲಿ ದೇಶಪಾಂಡೆ (ಶೂಟಿಂಗ್​), ಸಂದೀಪ್​ ಸಂಗ್ವಾನ್​ (ಹಾಕಿ).

ದ್ರೋಣಾಚಾರ್ಯ (ಜೀವಮಾನ ಸಾಧನೆ): ಎಸ್​. ಮುರಳೀಧರನ್​ (ಬ್ಯಾಡ್ಮಿಂಟನ್​), ಅರ್ಮಾಂಡೊ ಆಗ್ನೆಲೊ ಕೊಲಾಕೊ (ುಟ್​ಬಾಲ್​).

ರಾಷ್ಟ್ರೀಯ ಖೇಲ್​ ಪ್ರೋತ್ಸಾಹನ್​ ಪುರಸ್ಕಾರ: ಭಾರತೀಯ ದೈಹಿಕ ಶಿಕ್ಷಣ ೌಂಡೇಷನ್​.

ಮೌಲಾನಾ ಅಬ್ದುಲ್​ ಕಲಾಂ ಆಜಾದ್​ ಟ್ರೋಫಿ: ಚಂಡೀಗಢ ವಿವಿ, ಲವ್ಲಿ ಪ್ರೊೆಷನಲ್​ ವಿವಿ, ಗುರುನಾನಕ್​ ದೇವ್​ ವಿವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net