ಕ್ರೀಡಾ ಪ್ರಶಸ್ತಿ ಅವಧಿ ವಿಸ್ತರಣೆ

sports_awards
Published on

ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಶಿಫಾರಸುಗಳನ್ನು ಸಲ್ಲಿಸುವ ಅವಧಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ವಿಸ್ತರಿಸಿದೆ. ಮೂಲ ಸುತ್ತೋಲೆಯ ಪ್ರಕಾರ ಬುಧವಾರಕ್ಕೆ ಗಡುವು ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ ಈಗ ಅದನ್ನು ಜೂನ್ 22ರವರೆಗೆ ವಿಸ್ತರಿಸಲಾಗಿದೆ. ಇದಲ್ಲದೆ ಕರೊನಾದಿಂದಾಗಿ ಲಾಕ್​ಡೌನ್​ನಲ್ಲಿ ಸಿಲುಕಿರುವ ಕ್ರೀಡಾಪಟುಗಳು ತಮ್ಮನ್ನು ಪ್ರಶಸ್ತಿಗೆ ಶಿಫಾರಸು ಮಾಡುವ ವರನ್ನು ಕಂಡಕೊಳ್ಳಲು ಕಷ್ಟಪಡುತ್ತಿರುವುದರಿಂದ ಅವರೇ ಸ್ವಯಂ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಕರೊನಾ ಹಾವಳಿಯಿಂದಾಗಿ ಈ ಬಾರಿ ಒಂದು ತಿಂಗಳು ತಡವಾಗಿ ಕ್ರೀಡಾ ಪ್ರಶಸ್ತಿ ಪ್ರಕ್ರಿಯೆ ಆರಂಭಗೊಂಡಿತ್ತು. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ರಾಷ್ಟ್ರಪತಿಯಿಂದ ಪ್ರದಾನವಾಗಲಿವೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ಮೂಲ ನಿಯಮದ ಪ್ರಕಾರ ಕ್ರೀಡಾಪಟುಗಳು ಸ್ವಯಂ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ. ಆಯಾ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು, ರಾಜ್ಯ ಸರ್ಕಾರಗಳು ಅಥವಾ ಈ ಹಿಂದೆ ಕ್ರೀಡಾ ಪ್ರಶಸ್ತಿ ಪುರಸ್ಕೃತರಾಗಿರುವವರು ಮಾತ್ರ ಅರ್ಹ ಕ್ರೀಡಾಪಟುಗಳ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಬಹುದಾಗಿತ್ತು.

ಆದರೆ ಈಗ ಈ ನಿಯಮವನ್ನು ಸಡಿಲಗೊಳಿಸಲಾಗಿದ್ದು, ಈಗಾಗಲೆ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಂದ ಹೆಸರು ಶಿಫಾರಸುಗೊಳ್ಳದ ಕ್ರೀಡಾಪಟುಗಳು ಕೂಡ ಇನ್ನು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ. ಲಾಕ್​ಡೌನ್​ನಿಂದಾಗಿ ಈ ಬಾರಿ ಪ್ರಶಸ್ತಿ ಶಿಫಾರಸು ಸಲ್ಲಿಸಲು ಮೂಲಪ್ರತಿಗಳ ಸಲ್ಲಿಸುವಿಕೆಯಿಂದ ವಿನಾಯಿತಿ ನೀಡಿದ್ದ ಕ್ರೀಡಾ ಸಚಿವಾಲಯ ಎಲ್ಲರಿಗೂ ಇ-ಮೇಲ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net