ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​; ಕರ್ನಾಟಕದ ಸ್ನೇಹಾ, ಮಣಿಕಂಠಗೆ ರಜತ ಪದಕ

web kar
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕರ್ನಾಟಕದ ಸ್ನೇಹಾ ಎಸ್​.ಎಸ್​. ಮತ್ತು ಸರ್ವೀಸಸ್​ ಪ್ರತಿನಿಧಿಸಿದ ರಾಜ್ಯದ ಅಥ್ಲೀಟ್​ ಮಣಿಕಂಠ ಎಚ್​. ಅವರು 63ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ರಜತ ಪದಕ ಗೆದ್ದುಕೊಂಡಿದ್ದಾರೆ.

ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟದ 2ನೇ ದಿನವಾದ ಶನಿವಾರ ನಡೆದ ಮಹಿಳೆಯರ 100 ಮೀ. ಓಟದಲ್ಲಿ 11.57 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ಸ್ನೇಹಾ 2ನೇ ಸ್ಥಾನ ಪಡೆದರು. ಫೋಟೋಫಿನಿಷ್​ ಕಂಡ ಸ್ಪರ್ಧೆಯಲ್ಲಿ ರೈಲ್ವೇಸ್​ನ ನಿತ್ಯಾ ಗಾಂಧೆ ಕೂಡ 11.57 ಸೆಕೆಂಡ್​ಗಳಲ್ಲಿ ಓಡಿ ಚಿನ್ನ ಜಯಿಸಿದರು. ರೈಲ್ವೇಸ್​ನ ಮತ್ತೋರ್ವ ಅಥ್ಲಿಟ್​ ಗಿರಿಧರಣಿ (11.64ಸೆ) ಕಂಚು ಜಯಿಸಿದರು. ಕರ್ನಾಟಕದ ಮತ್ತಿಬ್ಬರು ಸ್ಪರ್ಧಿಗಳಾದ ಕಾವೇರಿ ಪಾಟಿಲ್​ (11.86 ಸೆ) ಮತ್ತು ಧಾನೇಶ್ವರಿ ಟಿ (12.13ಸೆ) ಕ್ರಮವಾಗಿ 5 ಮತ್ತು 8ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಪುರುಷರ 100 ಮೀ. ಓಟದಲ್ಲಿ ಒಡಿಶಾದ ಲಾಲು ಪ್ರಸಾದ್​ ಭೋಯಿ (10.46ಸೆ) ಚಿನ್ನ ಗೆದ್ದರೆ, ಸೈನಿಕನಾಗಿರುವ ಉಡುಪಿಯ ಓಟಗಾರ ಮಣಿಕಂಠ ಎಚ್​. 10.48 ಸೆಕೆಂಡ್​ಗಳಲ್ಲಿ ಓಡಿ ರಜತ ಜಯಿಸಿದರು. ರೈಲ್ವೇಸ್​ನ ಶಿವ ಬಿ. (10.50 ಸೆ) ಕಂಚು ಜಯಿಸಿದರು.

ಮಹಿಳೆಯರ ಹೈಜಂಪ್​ನಲ್ಲಿ ರಾಜ್ಯದ ಪಲ್ಲವಿ ಪಾಟೀಲ್​ (1.76 ಮೀ) ಮತ್ತು ರೈಲ್ವೇಸ್​ ಪ್ರತಿನಿಧಿಸಿದ ಅಭಿನಯಾ ಶೆಟ್ಟಿ (1.76 ಮೀ) ಕ್ರಮವಾಗಿ 4, 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ರೈಲ್ವೇಸ್​ನ ರೇಖಾ (1.82 ಮೀ) ಚಿನ್ನ ಗೆದ್ದರು. ಮಹಿಳೆಯರ ಜಾವೆಲಿನ್​ ಎಸೆತದಲ್ಲಿ ಒಲಿಂಪಿಯನ್​ ಅನ್ನು ರಾಣಿ (58.97 ಮೀ) ರೈಲ್ವೇಸ್​ ಪರ ಚಿನ್ನ ಗೆದ್ದರು. ಕರ್ನಾಟಕದ ರಮ್ಯಾಶ್ರೀ ಜೈನ್​ (51.52 ಮೀ) 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮಹಿಳೆಯರ 400 ಮೀ. ಓಟದಲ್ಲಿ ಮಹಾರಾಷ್ಟ್ರ ಐಶ್ವರ್ಯಾ ಮಿಶ್ರಾ (53.77 ಸೆ), 100 ಮೀ. ಹರ್ಡಲ್ಸ್​ನಲ್ಲಿ ತಮಿಳುನಾಡಿನ ನಿತ್ಯಾ ರಾಮರಾಮ್​ (13.04 ಸೆ) ಚಿನ್ನ ಗೆದ್ದರು. ಪುರುಷರ ಪೋಲ್​ವಾಲ್ಟ್​ನಲ್ಲಿ ತಮಿಳುನಾಡಿನ ಎಂ. ಗೌತಮ್​ (5.05 ಮೀ) ಚಿನ್ನ ಜಯಿಸಿದರು. ಮಹಿಳೆಯರ ಶಾಟ್​ಪುಟ್​ನಲ್ಲಿ ರೈಲ್ವೇಸ್​ ಎಲ್ಲ 3 ಪದಕ ಗೆದ್ದು ಕ್ಲೀನ್​ಸ್ವೀಪ್​ ಸಾಧಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net