

ನವದೆಹಲಿ: ಟೀಮ್ ಇಂಡಿಯಾದ ಹೆಡ್ ಕೋಚ್ ಸ್ಥಾನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿ ಆಹ್ವಾನಿಸಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಈಗಾಗಲೇ ಸಾಕಷ್ಟು ಮಂದಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿ ಕೆಲವು ನಕಲಿ ಅರ್ಜಿಗಳನ್ನು ಸಲ್ಲಿಸಿರುವುದು ಇದೀಗ ಬೆಳಕಿಗೆ ಬಂದಿದೆ.
ಈವರೆಗೆ ಹೆಡ್ ಕೋಚ್ ಸ್ಥಾನಕ್ಕೆ ಬಿಸಿಸಿಐ 3000 ಅರ್ಜಿಗಳನ್ನು ಸ್ವೀಕರಿಸಿದೆ. ಇದರಲ್ಲಿ ಹೆಚ್ಚಿನವು ನಕಲಿ ಅರ್ಜಿಗಳಾಗಿದ್ದು, ರಾಜಕಾರಣಿಗಳು ಮತ್ತು ಕ್ರಿಕೆಟಿಗರ ಹೆಸರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸುವ ಗಡುವು ಸೋಮವಾರ (ಮೇ 27) ಕೊನೆಗೊಳ್ಳುತ್ತಿದ್ದಂತೆ, ಬಿಸಿಸಿಐಗೆ ಸಚಿನ್ ತೆಂಡೂಲ್ಕರ್, ಧೋನಿ, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಇತರ ಮಾಜಿ ಕ್ರಿಕೆಟಿಗರ ಹೆಸರಲ್ಲಿ ಹಲವು ಅರ್ಜಿಗಳು ಬಂದಿವೆ. ಈ ಲೀಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾರಂತಹ ರಾಜಕಾರಣಿಗಳ ಹೆಸರು ಸಹ ಇದೆ.
ಇನ್ನೂ ಈ ಹಂತದಲ್ಲಿ ಸ್ಪಷ್ಟವಾಗದ ಸಂಗತಿ ಏನೆಂದರೆ, ಕೋಚ್ ಜವಾಬ್ದಾರಿ ಹೊರಲು ಆಸಕ್ತಿ ಹೊಂದಿರುವ ನಿಜವಾದ ಅಭ್ಯರ್ಥಿಗಳಿಂದ ಬಿಸಿಸಿಐ ಅರ್ಜಿಗಳನ್ನು ಸ್ವೀಕರಿಸಿದೆಯೇ ಎಂಬುದು. ಆದರೆ, ನಕಲಿ ಅರ್ಜಿಗಳ ಹಾವಳಿ ಹೆಚ್ಚಾಗಿದ್ದು, ಬಿಸಿಸಿಐಗೆ ಹೊಸ ತಲೆನೋವಾಗಿದೆ. ಈ ನಕಲಿ ಅರ್ಜಿಗಳ ಹಾವಳಿ ಇದೇ ಮೊದಲೇನಲ್ಲ, 2022ರಲ್ಲೂ ಬಿಸಿಸಿಐ ಮುಖ್ಯ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದಾಗ, ಸೆಲೆಬ್ರಿಟಿಗಳ ಹೆಸರಲ್ಲಿ ಸುಮಾರು 5,000 ಅರ್ಜಿಗಳನ್ನು ಬಿಸಿಸಿಐ ಸ್ವೀಕರಿಸಿತ್ತು. ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸಲು ಬಿಸಿಸಿಐಗೆ ಸಾಕಷ್ಟ ಸಮಯ ವ್ಯರ್ಥವಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಗೂಗಲ್ ಫಾರ್ಮ್‌ಗಳನ್ನು ಬಳಸಿ, ಅರ್ಜಿ ಸಲ್ಲಿಸಲು ಬಿಸಿಸಿಐ ಅನುವು ಮಾಡಿಕೊಟ್ಟಿರುವುದರಿಂದ ಈ ರೀತಿ ನಕಲಿ ಅರ್ಜಿಗಳು ಹಾವಳಿ ಹೆಚ್ಚಾಗಿದೆ. ಬಿಸಿಸಿಐ ಗೂಗಲ್ ಫಾರ್ಮ್‌ಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲು ಕಾರಣವೆಂದರೆ ಅರ್ಜಿದಾರರ ಹೆಸರನ್ನು ಒಂದೇ ಹಾಳೆಯಲ್ಲಿ ಪರಿಶೀಲಿಸುವುದು ಸುಲಭ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಸಿಸಿಐ ಇತ್ತೀಚಗೆ ಜಾಹೀರಾತು ಪ್ರಕಟಿಸಿದ್ದು, 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ವರೆಗೆ ತಂಡದ ಜವಾಬ್ದಾರಿಯನ್ನು ಹೊರುವ ಮುಖ್ಯ ಕೋಚ್‌ನಲ್ಲಿ ತಾನು ಹುಡುಕುತ್ತಿರುವ ಗುಣಗಳನ್ನು ವಿವರಿಸಿದೆ. ಹೊಸದಾಗಿ ಹೆಡ್ ಕೋಚ್ ಹುದ್ದೆ ಅಲಂಕರಿಸುವವರಲ್ಲಿ ಕೆಲವು ಗಮನಾರ್ಹ ಅರ್ಹತೆಗಳನ್ನು ಬಿಸಿಸಿಐ ಪಟ್ಟಿ ಮಾಡಿದೆ. ಅವುಗಳೆಂದರೆ, ಅಭ್ಯರ್ಥಿಯು ಮಾರ್ಕ್ಯೂ ಅಥ್ಲೀಟ್‌ಗಳನ್ನು ನಿಭಾಯಿಸಲು ಸಂಬಂಧಿಸಿದ ಕೆಲಸದ ನಿರೀಕ್ಷೆಗಳು ಮತ್ತು ಒತ್ತಡಗಳನ್ನು ಪೂರೈಸಲು ಸಿದ್ಧರಿರಬೇಕು. ಎಲ್ಲ ಪರಿಸ್ಥಿತಿಗಳು ಮತ್ತು ಸ್ವರೂಪಗಳಲ್ಲಿ ನಿರಂತರ ಯಶಸ್ಸನ್ನು ನೀಡುವ ವಿಶ್ವ-ದರ್ಜೆಯ ಭಾರತೀಯ ಕ್ರಿಕೆಟ್ ತಂಡವನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡಬೇಕು. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಕ್ರಿಕೆಟಿಗರಿಗೆ ತಮ್ಮ ಆಟದ ವಿಧಾನದೊಂದಿಗೆ ಸ್ಫೂರ್ತಿ ನೀಡುಬೇಕು.
ಪ್ರಸ್ತುತ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿರುವ ರಾಹುಲ್ ಡ್ರಾವಿಡ್ ಅವರ ಅವಧಿ ಜೂನ್ 2ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ T20 ವಿಶ್ವಕಪ್‌ನ ನಂತರ ಮುಕ್ತಾಯಗೊಳ್ಳಲಿದೆ. ಹೀಗಾಗಿ ಮುಂದಿನ ಮುಖ್ಯ ಕೋಚ್ ತಮ್ಮ ಅಧಿಕಾರಾವಧಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದಾರೆ. (ಏಜೆನ್ಸೀಸ್)