

ಮೆಲ್ಬೋರ್ನ್: ಇತ್ತೀಚೆಗಷ್ಟೇ ಪೂರ್ಣ ಫಿಟ್ನೆಸ್ನೊಂದಿಗೆ ಸರಿಸುಮಾರು ಒಂದು ವರ್ಷದ ಬಳಿಕ ವೃತ್ತಿಪರ ಟೆನಿಸ್ಗೆ ಮರಳಿದ್ದ 22 ಗ್ರಾಂಡ್ ಸ್ಲಾಂ ಪ್ರಶಸ್ತಿ ವಿಜೇತ ಸ್ಪೇನ್ ತಾರೆ ರಾಫೆಲ್ ನಡಾಲ್ ಮತ್ತೆ ಗಾಯಗೊಂಡಿದ್ದಾರೆ. ಇದರಿಂದಾಗಿ ಅವರು ಮುಂಬರುವ ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೆಲಿಯನ್ ಓಪನ್ನಿಂದ ಹಿಂದೆ ಸರಿದಿದ್ದಾರೆ.
ಗಾಯದಿಂದ ಚೇತರಿಸಿಕೊಂಡು ಮರಳಿ ಕಣಕ್ಕಿಳಿದ ಮೊದಲ ಟೂರ್ನಿ ಬ್ರಿಸ್ಬೇನ್ ಓಪನ್ನ ಕ್ವಾರ್ಟರ್ಫೈನಲ್ ವೇಳೆ ನಡಾಲ್ ಮತ್ತೆ ಗಾಯದ ಸಮಸ್ಯೆ ಎದುರಿಸಿದ್ದರು. ಜೋರ್ಡನ್ ಥಾಂಪ್ಸನ್ ವಿರುದ್ಧದ ಪಂದ್ಯದ 3ನೇ ಸೆಟ್ ವೇಳೆ ವೈದ್ಯಕಿಯ ಟೈಮ್ಔಟ್ ತೆಗೆದುಕೊಂಡಿದ್ದ 37 ವರ್ಷದ ನಡಾಲ್ ಅಂತಿಮವಾಗಿ 7-5, 6-7, 3-6ರಿಂದ ಸೋತಿದ್ದರು. ಕಳೆದ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರ ಸೊಂಟದ ಸ್ನಾಯುವಿನಲ್ಲೇ ಮತ್ತೆ ನೋವು ಕಾಣಿಸಿಕೊಂಡಿದೆ.
ಮೆಲ್ಬೋರ್ನ್ಗೆ ತೆರಳಿದ ಬಳಿಕ ಸ್ಕ್ಯಾನ್ಗೆ ಒಳಗಾಗಿದ್ದು ಈ ವೇಳೆ ಸ್ನಾಯುವಿನಲ್ಲಿ ಸಣ್ಣ ಬಿರುಕು ಕಾಣಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ತವರೂರು ಸ್ಪೇನ್ಗೆ ಮರಳುತ್ತಿರುವುದಾಗಿ ನಡಾಲ್ ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ಪ್ರಕಟಿಸಿದ್ದಾರೆ. ಆಸ್ಟ್ರೆಲಿಯನ್ ಓಪನ್ ಮುಂದಿನ ಭಾನುವಾರ ಮೆಲ್ಬೋರ್ನ್ ಪಾರ್ಕ್ನಲ್ಲಿ ಶುರುವಾಗಲಿದೆ.