ಮಹಾರಾಜ ಟ್ರೋಫಿ 2025: ನಾಲ್ಕು ಆಟಗಾರರನ್ನು ಉಳಿಸಿಕೊಂಡ ಮೈಸೂರು ವಾರಿಯರ್ಸ್

web maha
Published on

ಬೆಂಗಳೂರು: ಮೈಸೂರು ವಾರಿಯರ್ಸ್ ತಂಡ ಜುಲೈ 15ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆಟಗಾರರ ಹರಾಜಿನಲ್ಲಿ 14 ಆಟಗಾರರನ್ನು ಆಯ್ಕೆ ಮಾಡಲು ಸಜ್ಜಾಗಿದೆ. ಇದರ ಜೊತೆಗೆ ಈ ತಿಂಗಳ ಕೊನೆಯಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಾನ್ವೇಷಣಾ ಕಾರ್ಯಕ್ರಮದ ಮೂಲಕ ಇಬ್ಬರು ಹೊಸ ಪ್ರತಿಭೆಗಳಿಗೆ ಅವಕಾಶ ಒದಗಿಸಲಿದೆ. ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ ತಂಡ ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿ-2025 ಟಿ20 ಟೂರ್ನಿಗಾಗಿ ತನ್ನ ನಾಲ್ಕು ಪ್ರಮುಖ ಆಟಗಾರರಾದ ನಾಯಕ ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ, ಕಾರ್ತಿಕ್ ಸಿಎ ಮತ್ತು ಕಾರ್ತಿಕ್ ಎಸ್‌ಯು ಅವರನ್ನು ಉಳಿಸಿಕೊಂಡಿದೆ.

ಈ ಖ್ಯಾತ ಆಟಗಾರರು ಆಗಸ್ಟ್ 11ರಿಂದ 27ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ಬಾರಿಯ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದ ಮೈಸೂರು ವಾರಿಯರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಶಿವಮೊಗ್ಗ ಲಯನ್ಸ್ ಜೊತೆಗೆ ಈ ವರ್ಷದ ಪಂದ್ಯಾವಳಿಯಲ್ಲಿ ಸೆಣಸಲಿದೆ.

ಮೈಸೂರು ವಾರಿಯರ್ಸ್ ತಂಡದಲ್ಲಿಯೇ ಉಳಿಸಿಕೊಂಡಿರುವ ಆಟಗಾರರ ಪರಿಚಯ ಹೀಗಿದೆ:

* ಕರುಣ್ ನಾಯರ್: ಬಲಗೈ ಟಾಪ್ ಆರ್ಡರ್ ಬ್ಯಾಟ್ಸ್‌ ಮನ್ ಮತ್ತು ಸಂದರ್ಭಕ್ಕೆ ತಕ್ಕಂತೆ ಆಫ್-ಬ್ರೇಕ್ ಬೌಲರ್ ಆಗಿ ಆಡಬಲ್ಲವರು. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿರುವ ಕರುಣ್, ಹಲವು ವರ್ಷಗಳ ಕಾಲ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸ್ಥಾನ ಪಡೆಯಲು ಅವರು ನಡೆಸಿದ ತಾಳ್ಮೆಯ, ಛಲದ ಪ್ರಯತ್ನಕ್ಕೆ ಭಾರಿ ಜನಪ್ರೀತಿ ವ್ಯಕ್ತವಾಗಿದೆ.

* ಪ್ರಸಿದ್ಧ ಕೃಷ್ಣ: ಕರ್ನಾಟಕದ ಎತ್ತರದ ವೇಗದ ಬೌಲರ್ ಆಗಿರುವ ಇವರು ತಮ್ಮ ವೇಗ ಮತ್ತು ಬೌನ್ಸ್‌ ಬಾಲಿಂಗ್ ಮೂಲಕ ಟಾಪ್-ಆರ್ಡರ್ ಬ್ಯಾಟ್ಸ್‌ ಮನ್‌ ಗಳನ್ನು ಕಾಡಬಲ್ಲವರು. ಗಾಯದಿಂದ ಚೇತರಿಸಿಕೊಂಡು ಭಾರತ ತಂಡಕ್ಕೆ ಮರಳಿರುವ ಅವರು, ಎಲ್ಲಾ ಫಾರ್ಮ್ಯಾಟ್‌ ಗಳಲ್ಲಿ ಆಡಬಲ್ಲ ವಿಶ್ವಾಸಾರ್ಹ ವೇಗದ ಬೌಲರ್ ಆಗಿ ಬೆಳೆಯುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ಪರ 25 ವಿಕೆಟ್‌ಗಳೊಂದಿಗೆ ಪ್ರಸಿದ್ಧ್ ಕೃಷ್ಣ ಐಪಿಎಲ್ 2025 ರಲ್ಲಿ ಪರ್ಪಲ್ ಕ್ಯಾಪ್ ಗೆದ್ದರು.

* ಕಾರ್ತಿಕ್ ಸಿಎ: ಭರವಸೆಯ ಬಲಗೈ ವೇಗದ ಬೌಲರ್ ಮತ್ತು ಬಲಗೈ ಬ್ಯಾಟ್ಸ್‌ ಮನ್ ಆಗಿದ್ದಾರೆ. ತಮ್ಮ ಚುರುಕಾದ ಲೈನ್ ಮತ್ತು ಕರಾರುವಾಕ್ಕಾದ ವೇಗದ ದಾಳಿಗೆ ಹೆಸರುವಾಸಿಯಾಗಿದ್ದಾರೆ.

* ಕಾರ್ತಿಕ್ ಎಸ್‌ಯು: ಅತ್ಯುತ್ತಮ ಬಲಗೈ ಬ್ಯಾಟ್ಸ್‌ ಮನ್ ಆಗಿರುವ ಇವರು ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್‌ ಪರವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಒತ್ತಡದ ಸಂದರ್ಭದಲ್ಲಿ ಪ್ರದರ್ಶಿಸುವ ಶಾಂತ ಗುಣದ ಮೂಲಕ 2024ರ ಫೈನಲ್‌ ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸೇರಿದಂತೆ ಹಲವು ಮನ್ನಣೆಗಳನ್ನು ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net