

ಬೆಂಗಳೂರು: ವಿಶ್ವದೆಲ್ಲೆಡೆ ಹೇಬಾಲ್ ಕ್ರೀಡೆಯು ಅತ್ಯಂತ ಜನಪ್ರಿಯವಾಗುತ್ತಿದ್ದು, ಒಲಿಂಪಿಕ್ಸ್ಗೂ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಭಾರತದ ಪ್ರಣೀತ್ ಜೆ ರಾಮಚಂದಾನಿ ಅವರು ಹೇಬಾಲ್ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದು, ಹೇಬಾಲ್ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇತ್ತೀಚೆಗೆ ಅವರ ಶಿಷ್ಯೆ ವಿದ್ಯಾ ಪಿಳ್ಳೈ ಅವರು ಮಾರಿಷಸ್‌ನಲ್ಲಿ ನಡೆದ ಕಾಮನ್ವೆಲ್ತ್ ಕ್ಯೂಸ್ಪೋರ್ಟ್ಸ್ ಚಾಂಪಿಯನ್‌ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದು, ಈ ಮೂಲಕ ಭಾರತಕ್ಕೆ ಹೇಬಾಲ್‌ನಲ್ಲಿ ಮಹತ್ವದ ಅಂತಾರಾಷ್ಟ್ರೀಯ ಯಶಸ್ಸು ದೊರಕಿಸಿಕೊಟ್ಟಿದ್ದಾರೆ.
ಪ್ರಣೀತ್ ಅವರ ಮಾರ್ಗದರ್ಶನದಲ್ಲಿ ವಿಶ್ವದ ಉನ್ನತ ಆಟಗಾರರ ವಿರುದ್ಧ ಸ್ಪರ್ಧಿಸಿದ ವಿದ್ಯಾ ಅವರು ಅತ್ಯುತ್ತಮ ಪ್ರದರ್ಶನದ ಮೂಲಕ ಮಹತ್ವದ ಸಾಧನೆ ಮಾಡಿದರು. ವಿಶ್ವ ಶ್ರೇಯಾಂಕಿತ ಆಟಗಾರನಾಗಿರುವ, ಅಂತಾರಾಷ್ಟ್ರೀಯ ಪ್ರಮಾಣೀಕೃತ ತರಬೇತುದಾರರಾಗಿರುವ, ಕ್ರೀಡಾ ಪ್ರಚಾರಕರಾಗಿರುವ ಮತ್ತು ಬೆಂಗಳೂರಿನಲ್ಲಿ ಹೇಬಾಲ್ ಅಕಾಡೆಮಿಯ ಸಂಸ್ಥಾಪಕರಾಗಿರುವ ಪ್ರಣೀತ್ ಅವರು ಭಾರತದಲ್ಲಿ ಈ ಕ್ರೀಡೆಯನ್ನು ಪರಿಚಯಿಸಿ ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬುದು ಇಲ್ಲಿ ಗಮನಾರ್ಹವಾಗಿದೆ.
ಈ ಕುರಿತು ಮಾತನಾಡಿದ ಪ್ರಣೀತ್ ಅವರು, “ನಾನು 2018ರಲ್ಲಿ ವಿದ್ಯಾರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ನಾವು ಸ್ನೂಕರ್, 9 ಬಾಲ್, 10 ಬಾಲ್ ಮತ್ತು ಈಗ ಹೇಬಾಲ್ ನಂತಹ ವಿವಿಧ ಕ್ರೀಡಾಪ್ರಕಾರಗಳಲ್ಲಿ ಕೆಲಸ ಮಾಡಿದ್ದೇವೆ. ವಿದ್ಯಾ ಅವರು ಇತ್ತೀಚೆಗೆ ಸಂಪೂರ್ಣವಾಗಿ ಹೇಬಾಲ್ ಕಡೆಗೆ ಗಮನ ಹರಿಸಿದ್ದಾರೆ. ಹಾಗಾಗಿ ಉತ್ತಮ ಫಲಿತಾಂಶ ದೊರಕುತ್ತಿದೆ. ನಾವು ಹೇಬಾಲ್ ನ ವೇಗ ಮತ್ತು ರಚನೆಗೆ ಹೊಂದಿಕೊಳ್ಳಲು ಕೆಲವು ಪ್ರಮುಖ ತಾಂತ್ರಿಕ ಬದಲಾವಣೆ ಮಾಡಿಕೊಂಡಿದ್ದೇವೆ. ಜೊತೆಗೆ ಅವರಲ್ಲಿ ಮಾನಸಿಕ ಸ್ಪಷ್ಟತೆ ಮತ್ತು ಸ್ಪರ್ಧಾತ್ಮಕ ಆತ್ಮವಿಶ್ವಾಸ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಿದ್ದೇವೆ” ಎಂದರು.
ಪ್ರಣೀತ್ ಮತ್ತು ವಿದ್ಯಾ ಜೊತೆಯಾಗಿ ವಿಶ್ವ ಮತ್ತು ರಾಷ್ಟ್ರೀಯ ಸ್ನೂಕರ್, ರಾಷ್ಟ್ರೀಯ 9 ಬಾಲ್, 10 ಬಾಲ್ ಮತ್ತು ಈಗ ಕಾಮನ್ ವೆಲ್ತ್ ನಲ್ಲಿ ಹೇಬಾಲ್ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ವಿದ್ಯಾರ ಕೆಲಸದ ಶೈಲಿ ಅನನ್ಯವಾಗಿದೆ. “ಅವರು ಯಾವಾಗಲೂ ಅಕಾಡೆಮಿಯಲ್ಲಿ ಮೊದಲಿಗರಾಗಿರುತ್ತಾರೆ” ಎಂದು ಪ್ರಣೀತ್ ನೆನೆಸಿಕೊಳ್ಳುತ್ತಾರೆ. “ಅವರು ತಮ್ಮ ಅಭ್ಯಾಸವನ್ನು ಆರಾಮಾಗಿ ಮುಗಿಸಿ, ನಂತರ ತಮ್ಮ ಕುಟುಂಬ ಜವಾಬ್ದಾರಿಗಳನ್ನು ಈಡೇರಿಸಲು ಮನೆಗೆ ಹೋಗುತ್ತಾರೆ. ಆ ರೀತಿಯ ಶಿಸ್ತು ಬಹಳ ವಿರಳ” ಎಂದು ಅವರು ಹೇಳಿದರು.
ಭಾರತದಲ್ಲಿ ಹೇಬಾಲ್ ಕ್ರೀಡೆಯ ಅಭಿವೃದ್ಧಿಗೆ ಪ್ರಣೀತ್ ಅವರು ಬೆಂಗಳೂರಿನಲ್ಲಿ ಹೇಬಾಲ್ ಅಕಾಡೆಮಿಯನ್ನು ಸ್ಥಾಪಿಸಿದರು. ಇದು ದೇಶದ ಮೊದಲ ಮತ್ತು ಏಕೈಕ ಘಟಕವಾಗಿದ್ದು, ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬಳಸುವ ಅಧಿಕೃತ ಜಾಯ್ ಹೇಬಾಲ್ ಟೇಬಲ್‌ಗಳನ್ನು ಹೊಂದಿದೆ. ಈ ಕುರಿತು ವಿವರ ನೀಡುವ ಪ್ರಣೀತ್, ”ಜಾಯ್ ಟೇಬಲ್‌ಗಳು ವಿಶ್ವದರ್ಜೆಯ ಗುಣಮಟ್ಟ ಹೊಂದಿವೆ. ನಮ್ಮ ಭಾರತೀಯ ಆಟಗಾರರು ವಿಶ್ವ ಮಟ್ಟದಲ್ಲಿ ಪ್ರದರ್ಶನ ನೀಡಬೇಕಾದರೆ, ಅವರು ಜಾಯ್ ಟೇಬಲ್ ಗಳಲ್ಲಿ ತರಬೇತಿ ಪಡೆಯುವುದು ಅವಶ್ಯ” ಎಂದು ಹೇಳಿದರು.
2024ರಲ್ಲಿ ಪ್ರಣೀತ್ ಭಾರತದಲ್ಲಿ ಮೊದಲ ಡಬ್ಲ್ಯೂಪಿಎ ವಿಶ್ವ ಜೂನಿಯರ್ ಹೇಬಾಲ್ ಚಾಂಪಿಯನ್‌ಷಿಪ್ ಅನ್ನು ಆಯೋಜಿಸಿದ್ದರು. 32ಕ್ಕೂ ಹೆಚ್ಚು ದೇಶದ ಪ್ರತಿನಿಧಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ವಿಶೇಷ. ಪ್ರಣೀತ್ ಖುದ್ದು ತಾವು 2024-2025ರ ಋತುವಿನಲ್ಲಿ ಸ್ಲೊವೇನಿಯಾದಲ್ಲಿ ನಡೆದ ವಿಶ್ವ ಹೇಬಾಲ್ ಚಾಂಪಿಯನ್ ಶಿಪ್ ನಲ್ಲಿ 17ನೇ ವಿಶ್ವ ಶ್ರೇಯಾಂಕ ಗಳಿಸಿದ್ದಾರೆ. ಜೊತೆಗೆ ಪೋಲೆಂಡ್‌ನಲ್ಲಿ ನಡೆದ ವಿಶ್ವ ಟೀಮ್ ಚಾಂಪಿಯನ್‌ಷಿಪ್ ನಲ್ಲಿ ಕಂಚಿನ ಪದಕ ಮತ್ತು ವಿಯೆಟ್ನಾಂನ ಏಷಿಯನ್ ಟೂರ್‌ನಲ್ಲಿ ಟಾಪ್ 6 ಸ್ಥಾನ ಗಳಿಸಿದ್ದು ಗಮನಾರ್ಹವಾಗಿದೆ.