

ನವದೆಹಲಿ: ನವೆಂಬರ್ 24-25ರಂದು ನಡೆಯಲಿರುವ ಐಪಿಎಲ್ ಮೆಗಾ ಹರಾಜು (IPL Mega Auction) ಮೇಲೆ ಕ್ರೀಡಾಭಿಮಾನಿಗಳು ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಎಲ್ಲರು ವಾರಾಂತ್ಯದಲ್ಲಿ ನಡೆಯಲಿರುವ ಮೆಗಾ ಹರಾಜಿನ (Mega Auction) ಮೇಲೆ ಕಣ್ಣಿಟ್ಟಿದ್ದಾರೆ. ಸೌದಿ ಅರೇಬಿಯಾದ ಜಿದ್ಧಾದಲ್ಲಿ ಜರುಗಲಿರುವ ಈ ಹರಾಜು ಪ್ರಕ್ರಿಯೆಯಲ್ಲಿ 574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇದರಲ್ಲಿ ರಿಷಭ್ ಪಂತ್ (Rishabh Pant), ಕೆ.ಎಲ್. ರಾಹುಲ್ (KL Rahul), ಸೇರಿದಂತೆ ಅನೇಕ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಾರೀ ಬೆಲೆ ಪಡೆಯುವ ನಿರೀಕ್ಷೆ ಇದೆ.
ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಭ್ ಪಂತ್ (Rishabh Pant) ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಂಡ ಈ ಬಾರಿ ಅವರನ್ನು ರಿಟೇನ್ ಮಾಡದಿರುವುದು ಹಲವು ಊಹಾಪೋಹಾಗಳಿಗೆ ಪುಷ್ಠಿ ನೀಡಿತ್ತು. ಇದರಲ್ಲಿ ಮುಖ್ಯವಾಗಿ ರಿಷಭ್ ತಂಡದಲ್ಲಿ ಉಳಿದುಕೊಳ್ಳಲು ಭಾರೀ ಮೊತ್ತವನ್ನು ಡಿಮ್ಯಾಂಡ್ ಮಾಡಿದ್ದರು ಎಂದು ಹೇಳಲಾಗಿತ್ತು. ಇದೀಗ ಈ ಬಗ್ಗೆ ಸ್ವತಃ ರಿಷಭ್ ಸ್ಪಷ್ಟನೆ ನೀಡಿದ್ದು, ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇತ್ತೀಚಿಗೆ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ (Sunil Gavaskar) ಕೂಡ ರಿಷಭ್ ಪಂತ್ (Rishabh Pant) ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು ಈ ಕಾರಣಕ್ಕಾಗಿ ಅವರನ್ನು ತಂಡದಿಂದ ಕೈ ಬಿಡಲಾಯಿತು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಿಷಭ್ ಹಣದ ವಿಚಾರಕ್ಕೆ ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿಲ್ಲ. ಸದ್ಯ ಹರಿದಾಡುತ್ತಿರುವ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಹೇಳುವ ಮೂಲಕ ಸುನೀಲ್ ಗವಾಸ್ಕರ್ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಿದ್ದರು. ಈ ಮೂಲಕ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳಿಗೆ ರಿಷಭ್ (Rishabh Pant) ಸ್ಪಷ್ಟನೆ ನೀಡಿದ್ದಾರೆ.
2 ಕೋಟಿ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ರಿಷಭ್ ಪಂತ್ (Rishabh Pant) ಮೊದಲ ಸುತ್ತಿನಲ್ಲೇ ಕಾಣಿಸಿಕೊಂಡಿದ್ದಾರೆ. ರಿಷಭ್ ಪಂತ್ ಮೇಲೆ ಎಲ್ಲಾ ತಂಡಗಳು ಕಣ್ಣಿಟ್ಟಿದ್ದು, ಹರಾಜಿನಲ್ಲಿ ಬೃಹತ್ ಮೊತ್ತ ಪಡೆಯುವ ನಿರೀಕ್ಷೆ ಇದೆ. ಅಂತಿಮವಾಗಿ ರಿಷಭ್ ಪಂತ್ (Rishabh Pant) ಯಾವ ತಂಡದ ಪಾಲಾಗಲಿದ್ದಾರೆ ಎಂದು ಕಾದುನೋಡಬೇಕಿದೆ.