

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮೆಷಿನ್, ದಾಖಲೆಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ (Virat Kohli) ವಿಶ್ವದಾದ್ಯಂತರ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದು, ಇವರ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಕ್ಷಣಾರ್ಧದಲ್ಲೇ ವೈರಲ್ ಆಗುತ್ತವೆ. ಪೋಸ್ಟ್ ಒಂದನ್ನು ಕೋಟಿಗಟ್ಟಲೇ ಸಂಭಾವನೆ ಪಡೆಯುವ ವಿರಾಟ್ ಬಾರ್ಡರ್-ಗವಾಸ್ಕರ್ ಟ್ರೋಫಿಗೂ ಮುನ್ನ ಅಭಿಮಾನಿಗಳ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ್ದು, ಚಿಂತೆಗೆ ದೂಡಿದೆ.
2024 ಯಾಕೋ ವಿರಾಟ್ ಕೊಹ್ಲಿ (Virat Kohli) ಅಂದುಕೊಂಡಂತೆ ನಡೆಯುತ್ತಿಲ್ಲ. ಐಪಿಎಲ್ (IPl) ಹಾಗೂ ಟಿ20 ವಿಶ್ವಕಪ್ನಲ್ಲಿ (T20 WorldCup) ಉತ್ತಮ ಪ್ರದರ್ಶನ ನೀಡಿದರಾದರು ಟೆಸ್ಟ್ (Test) ಮತ್ತು ಏಕದಿನ ಮಾದರಿಯಲ್ಲಿ (ODI Format) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ (Border-Gavaskar Trophy) ಬಳಿಕ ಟಿ20ಯಂತೆ ಟೆಸ್ಟ್ ಮಾದರಿಗೂ ವಿರಾಟ್ ನಿವೃತ್ತಿ ಘೋಷಿಸುತ್ತಾರೆ ಎಂದು ಅಂದಾಜಿಸುತ್ತಿರುವ ನಡುವೆಯೇ ಕೊಹ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಈ ಪೋಸ್ಟ್ ಓದಿದ ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಜತೆಗೆ ಅನೇಕ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲಿ Wrogn ಹೆಸರಿನ ಬ್ರಾಂಡ್ಅನ್ನು ಸಹ ನಡೆಸುತ್ತಿದ್ದಾರೆ. ಈ ಸಂಸ್ಥೆ ಶುರುವಾಗಿ 10 ವರ್ಷಗಳಾಗಿದ್ದು, ಈ ಹತ್ತು ವರ್ಷಗಳ ಪಯಣದಲ್ಲಿ ಏಳು, ಬೀಳುಗಳ ಬಗ್ಗೆ ಕೊಹ್ಲಿ ಬರೆದುಕೊಂಡಿದ್ದಾರೆ. ಆದರೆ ಆರಂಭದಲ್ಲಿ ಕೊಹ್ಲಿಯ ಈ ಪೋಸ್ಟ್ ನೋಡಿದ ಅಭಿಮಾನಿಗಳು, ಈ ಪೋಸ್ಟ್ ಅನ್ನು ಪೂರ್ಣವಾಗಿ ಓದದೆ, ಕೊಹ್ಲಿ ಕ್ರಿಕೆಟ್ಗೆ ವಿದಾಯ ಹೇಳಿರಬಹುದೆಂದು ಬಾವಿಸಿ, ಕೊಹ್ಲಿ ಮಾಡಿರುವ ಪೋಸ್ಟ್ಗೆ ತರೆಹವಾರಿ ಕಾಮೆಂಟ್ಗಳನ್ನು ಮಾಡಿದ್ದಾರೆ.
ಅಭಿಮಾನಿಗಳು ಆತಂಕ ಬೀಳಲು ಕಾರಣವೂ ಇದೆ, ಅದೇನೆಂದರೆ ಈ ಹಿಂದೆ ಕೊಹ್ಲಿ ತಮ್ಮ ಟಿ20 ನಾಯಕತ್ವಕ್ಕೆ ವಿದಾಯ ಹೇಳುವ ಸಮಯದಲ್ಲಿ ಇದೇ ರಿತಿಯ ವೈಟ್ ಬ್ಯಾಕ್ ಗ್ರೌಂಡ್ ಇರುವ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ತಾನು ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದ್ದರು. ಕೊಹ್ಲಿಯ ಈ ನಿರ್ಧಾರದ ಪೋಸ್ಟ್ ಅಭಿಮಾನಿಗಳನ್ನು ಆಘಾತಕ್ಕೆ ತಳ್ಳಿತ್ತು. ಇದೀಗ ಇದೇ ರೀತಿಯ ಪೋಸ್ಟ್ ಮಾಡಿರುವ ಕೊಹ್ಲಿ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಆದರೆ ಕೊಹ್ಲಿ ಮಾಡಿರುವ ಪೂರ್ಣ ಪೋಸ್ಟ್ ಓದಿದ ಬಳಿಕ ಅಭಿಮಾನಿಗಳು ನಿರಾಳರಾಗಿದ್ದಾರೆ.