ವಿಶ್ವಕಪ್​ನಲ್ಲಿ ಭಾರತದ ಮುಸ್ಲಿಂ ನಮ್ಮನ್ನು ಬೆಂಬಲಿಸುತ್ತಾರೆ; ಪಾಕ್​ ಮಾಜಿ ವೇಗಿ ವಿವಾದಾತ್ಮಕ ಹೇಳಿಕೆ

pak web
Published on

ಲಾಹೋರ್​: ಏಷ್ಯಾಕಪ್​, ಎಮರ್ಜಿಂಗ್​ ಏಷ್ಯಾಕಪ್​, ವಿಶ್ವಕಪ್​ ಸಹಿತ ಮುಂಬರುವ ತಿಂಗಳುಗಳಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್​ ತಂಡಗಳ ನಡುವೆ ಸಾಲುಸಾಲು ಪಂದ್ಯಗಳ ನಡೆಯಲಿವೆ. ಈ ಸಮಯದಲ್ಲಿ ಪಾಕಿಸ್ತಾನದ ಮಾಜಿ ವೇಗಿ ರಾಣಾ ನವೀದ್​ ಉಲ್​ ಹಸನ್​ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಭಾರತೀಯ ಕ್ರಿಕೆಟ್​ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ಅಕ್ಟೋಬರ್​ 15ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್​ ಪಂದ್ಯದಲ್ಲಿ ಭಾರತದ ಮುಸ್ಲಿಮರು ಪಾಕಿಸ್ತಾನ ತಂಡವನ್ನು ಬೆಂಬಲಿಸಲಿದ್ದಾರೆ ಎಂದು ಯೂಟ್ಯೂಬ್​ ಪಾಡ್​ಕಾಸ್ಟ್​ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಣಾ ನವೇದ್​ ಉಲ್​ ಹಸನ್​ ಪಾಕಿಸ್ತಾನ ಪರ ಒಟ್ಟಾರೆ 18 ಪಂದ್ಯಗಳನ್ನು ಆಡಿದ್ದಾರೆ.

ವಿಶ್ವಕಪ್​ನಲ್ಲಿ 1.30 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ&ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್​ ಕ್ರೀಡಾಂಗಣವಾಗಿದೆ. ಭಾರತ&ಪಾಕ್​ ಪಂದ್ಯದ ಬಗ್ಗೆ ಮಾತನಾಡಿರುವ 45 ವರ್ಷದ ನವೀದ್​ ಉಲ್​ ಹಸನ್​, "ಭಾರತದಲ್ಲಿ ಪಂದ್ಯಗಳು ನಡೆಯುವಾಗ ಯಾವಾಗಲೂ ಖಂಡಿತವಾಗಿಯೇ ಭಾರತವೇ ಫೇವರಿಟ್​ ಆಗಿರುತ್ತದೆ. ಆದರೆ ಪಾಕಿಸ್ತಾನ ತಂಡವೂ ಉತ್ತಮವಿದೆ ಮತ್ತು ಉತ್ತಮ ಪಂದ್ಯ ನಡೆಯಲಿದೆ. ಪ್ರೇಕ್ಷಕರ ವಿಷಯಕ್ಕೆ ಬಂದರೆ, ಭಾರತದಲ್ಲಿರುವ ಮುಸ್ಲಿಮರು ನಮ್ಮ ತಂಡಕ್ಕೆ ಬೆಂಬಲವನ್ನು ನೀಡಲಿದ್ದಾರೆ. ನಾನು ಭಾರತದ ಅಹಮದಾಬಾದ್​ ಮತ್ತು ಹೈದರಾಬಾದ್​ನಲ್ಲಿ 2 ಸರಣಿಗಳನ್ನು ಆಡಿರುವ ಅನುಭವದ ಆಧಾರದಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net