ಎಲ್‌ಪಿಎಲ್ ಆಟಗಾರರ ಹರಾಜಿನಲ್ಲಿ ಭಾರತದ ಮುನಾಫ್ ಪಟೇಲ್, ವಿಂಡೀಸ್ ದೈತ್ಯ ಕ್ರಿಸ್ ಗೇಲ್..

lanka premier league
Published on

ಕೊಲಂಬೊ: ಭಾರತ ತಂಡದ ಮಾಜಿ ವೇಗದ ಬೌಲರ್ ಮುನಾಫ್ ಪಟೇಲ್, ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್, ಡರೇನ್ ಸ್ಯಾಮ್ಮಿ ಸೇರಿದಂತೆ 150 ವಿದೇಶಿ ಆಟಗಾರರು ಅಕ್ಟೋಬರ್ 1 ರಂದು ನಡೆಯಲಿರುವ ಚೊಚ್ಚಲ ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ಆಟಗಾರರ ಹರಾಜು ಪ್ರತಿಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ವಿಂಡೀಸ್‌ನ ಡರೇನ್ ಬ್ರಾವೊ, ಇಂಗ್ಲೆಂಡ್‌ನ ರವಿ ಬೊಪರ ಹರಾಜು ಪ್ರಕ್ರಿಯೆಯಲ್ಲಿರುವ ಪ್ರಮುಖ ಆಟಗಾರರು. ನವೆಂಬರ್ 14 ರಿಂದ ಡಿಸೆಂಬರ್ 6 ರವರೆಗೆ ಮೊದಲ ಎಲ್‌ಪಿಎಲ್ ನಡೆಯಲಿದೆ. ಆಗಸ್ಟ್‌ನಲ್ಲಿ ನಿಗದಿಯಾಗಿದ್ದರೂ ಕೋವಿಡ್-19 ರಿಂದಾಗಿ ಮುಂದೂಡಲಾಗಿತ್ತು.

37 ವರ್ಷದ ಮುನಾಫ್ ಪಟೇಲ್, 2018ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೇಳಿದ್ದರು. ಭಾರತ ತಂಡದ ಪರ 13 ಟೆಸ್ಟ್, 70 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿದ್ದಾರೆ. 2006ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಮುನಾಫ್, 2011 ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು. ಇದಕ್ಕೂ ಮೊದಲು ಯುಎಇಯಲ್ಲಿ ಟಿ20 ಲೀಗ್‌ನಲ್ಲಿ ಭಾಗವಹಿಸಿದ್ದರು. ಪ್ರತಿ ಫ್ರಾಂಚೈಸಿಗಳು ತಲಾ 6 ವಿದೇಶಿ ಆಟಗಾರರನ್ನು ಕೊಂಡುಕೊಳ್ಳುವ ಅವಕಾಶವಿದೆ. 30 ಅಂತಾರಾಷ್ಟ್ರೀಯ ಹಾಗೂ 65 ಸ್ಥಳೀಯ ಕ್ರಿಕೆಟಿಗರು ಐದು ತಂಡಗಳಿಗೆ ತಲಾ 19 ಆಟಗಾರರಂತೆ ಕಾಣಿಸಿಕೊಳ್ಳಲಿದ್ದಾರೆ.

ಟೂರ್ನಿಯ ಪಂದ್ಯಗಳು ದಾಂಬುಲಾ, ಪಲ್ಲೆಕಲೆ ಹಾಗೂ ಹಂಬಂಟೊಟದಲ್ಲಿ ನಡೆಯಲಿದ್ದು, ಹಂಬಂಟೊಟದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ, ವಿದೇಶಿ ಆಟಗಾರರಿಗೆ, ಅಧಿಕಾರಿಗಳಿಗೆ, ಪ್ರಸಾರ ಸಿಬ್ಬಂದಿಗೆ ಕ್ವಾರಂಟೈನ್ ಅವಧಿ ಕಡಿತಗೊಳಿಸುವ ಸಂಬಂಧ ಶ್ರೀಲಂಕಾ ಸರ್ಕಾರ ಅನುಮತಿ ನೀಡಬೇಕಿದೆ. ಸದ್ಯ ಶ್ರೀಲಂಕಾದಲ್ಲಿ 14 ದಿನದ ಕ್ವಾರಂಟೈನ್ ಅವಧಿಯಿದ್ದು, 7 ದಿನಕ್ಕೆ ಇಳಿಸಲು ಮನವಿ ಮಾಡಲಾಗಿದೆ. ಶ್ರೀಲಂಕಾದಲ್ಲಿ ಕ್ವಾರಂಟೈನ್ ಅವಧಿಯನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net